Asianet Suvarna News Asianet Suvarna News

ದೇಶದ ಮೊದಲ ಜೈವಿಕ ಇಂಧನ ವಿಮಾನ ಹಾರಾಟ ಯಶಸ್ವಿ

ಖಾಸಗಿ ಸ್ವಾಮ್ಯದ ಸ್ಪೈಸ್‌ಜೆಟ್‌ ಕಂಪನಿಯ ವಿಮಾನ ಶೇ.75ರಷ್ಟುವೈಮಾನಿಕ ಇಂಧನ ಹಾಗೂ ಶೇ.25ರಷ್ಟುಜೈವಿಕ ಇಂಧನ ಬಳಸಿ ಡೆಹ್ರಾಡೂನ್‌ನಿಂದ ನವದೆಹಲಿಗೆ ಯಶಸ್ವಿಯಾಗಿ ಹಾರಾಟ ನಡೆಸಿದೆ.

India's First Bio Fuel Test Flight Conducted By Spicejet
Author
Bengaluru, First Published Aug 28, 2018, 1:33 PM IST

ನವದೆಹಲಿ: ಜೈವಿಕ ಇಂಧನ ಬಳಸಿ ವಿಮಾನ ಓಡಿಸುವ ಪ್ರಯೋಗ ಸೋಮವಾರ ಯಶಸ್ವಿಯಾಗಿದೆ. ತನ್ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಮುಂದುವರಿಯುತ್ತಿರುವ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಿದೆ. ಖಾಸಗಿ ಸ್ವಾಮ್ಯದ ಸ್ಪೈಸ್‌ಜೆಟ್‌ ಕಂಪನಿಯ ವಿಮಾನ ಶೇ.75ರಷ್ಟುವೈಮಾನಿಕ ಇಂಧನ ಹಾಗೂ ಶೇ.25ರಷ್ಟುಜೈವಿಕ ಇಂಧನ ಬಳಸಿ ಡೆಹ್ರಾಡೂನ್‌ನಿಂದ ನವದೆಹಲಿಗೆ ಯಶಸ್ವಿಯಾಗಿ ಹಾರಾಟ ನಡೆಸಿದೆ.

ಬೊಂಬಾರ್ಡಿಯರ್‌ ಕ್ಯು400 ಸರಣಿಯ ಈ ವಿಮಾನಕ್ಕೆ ಸಿಎಸ್‌ಐಆರ್‌ ಹಾಗೂ ಭಾರತೀಯ ಪೆಟ್ರೋಲಿಯಂ ಸಂಸ್ಥೆಗಳು ಜತ್ರೋಫಾ ಬಳಸಿ ಅಭಿವೃದ್ಧಿಪಡಿಸಿದ್ದ ಜೈವಿಕ ಇಂಧನವನ್ನು ಬಳಸಲಾಗಿತ್ತು ಎಂದು ವಿಮಾನಯಾನ ಕಂಪನಿ ತಿಳಿಸಿದೆ.

ವಿಮಾನಗಳಲ್ಲಿ ಜೈವಿಕ ಇಂಧನ ಬಳಕೆ ಮಾಡುವುದರಿಂದ ಇಂಗಾಲದ ಬಿಡುಗಡೆ ಕಡಿಮೆಯಾಗುತ್ತದೆ. ಜತೆಗೆ ಇಂಧನ ಕ್ಷಮತೆಯೂ ಹೆಚ್ಚುತ್ತದೆ. ದುಬಾರಿಯಾಗಿರುವ ವೈಮಾನಿಕ ಇಂಧನಕ್ಕೆ ಮಾಡುವ ವೆಚ್ಚ ತಗ್ಗುವುದರಿಂದ ಪ್ರಯಾಣ ದರ ಕಡಿತಗೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯು400 ವಿಮಾನದಲ್ಲಿ 78 ಆಸನಗಳು ಇದ್ದು, ಸೋಮವಾರದ ಹಾರಾಟದ ವೇಳೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ಸ್ಪೈಸ್‌ಜೆಟ್‌ ಕಂಪನಿಯ 20 ಅಧಿಕಾರಿಗಳು ಮಾತ್ರವೇ ಇದ್ದರು. ಡೆಹ್ರಾಡೂನ್‌ನಿಂದ ಹೊರಟು 20 ನಿಮಿಷದಲ್ಲಿ ಈ ವಿಮಾನ ದೆಹಲಿ ತಲುಪಿತು. ಈಗಾಗಲೇ ಅಮೆರಿಕ, ಆಸ್ಪ್ರೇಲಿಯಾ, ಕೆನಡಾದಂತಹ ದೇಶಗಳಲ್ಲಿ ಜೈವಿಕ ಇಂಧನ ಬಳಸಿ ವಿಮಾನ ಓಡಿಸುವ ಪ್ರಯೋಗಗಳು ಯಶಸ್ವಿಯಾಗಿವೆ. ಆದರೆ ಭಾರತ ಹಾಗೂ ಮುಂದುವರಿಯುತ್ತಿರುವ ದೇಶಗಳಲ್ಲಿ ಇಂತಹ ಪ್ರಯೋಗ ನಡೆದಿದ್ದು ಇದೇ ಮೊದಲು. ಛತ್ತೀಸ್‌ಗಢದ 500 ರೈತ ಕುಟುಂಬಗಳು ಈ ಜೈವಿಕ ಇಂಧನವನ್ನು ಸಿದ್ಧಪಡಿಸಿ ಪೂರೈಕೆ ಮಾಡಿವೆ.

Follow Us:
Download App:
  • android
  • ios