ರಷ್ಯಾದಿಂದ ಸಮರ ಸಾಮಗ್ರಿಗಳನ್ನು ಖರೀದಿಸಿದ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿತ್ತು. ಒಂದು ವೇಳೆ ರಷ್ಯಾದಿಂದ ಎಸ್‌-400 ಟ್ರಯಂಫ್‌ ವ್ಯವಸ್ಥೆ ಖರೀದಿಗೆ ಭಾರತ ಮುಂದಾದಲ್ಲಿ ಅದರ ಮೇಲೂ ದಿಗ್ಬಂಧನ ಹೇರುವ ಕುರಿತು ಪರಿಶೀಲನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಅಮೆರಿಕದ ದಿಗ್ಬಂಧನ ಬೆದರಿಕೆಯನ್ನು ಉಪೇಕ್ಷಿಸಿ ರಷ್ಯಾದಿಂದ 36 ಸಾವಿರ ಕೋಟಿ ರು. ವೆಚ್ಚದಲ್ಲಿ ‘ಎಸ್‌-400 ಟ್ರಯಂಫ್‌’ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತ ಮುಂದಾಗಿದೆ.

ಮಾಸ್ಕೋ: ಅಮೆರಿಕದ ದಿಗ್ಬಂಧನ ಬೆದರಿಕೆಯನ್ನು ಉಪೇಕ್ಷಿಸಿ ರಷ್ಯಾದಿಂದ 36 ಸಾವಿರ ಕೋಟಿ ರು. ವೆಚ್ಚದಲ್ಲಿ ‘ಎಸ್‌-400 ಟ್ರಯಂಫ್‌’ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತ ಮುಂದಾಗಿದೆ.

ಅ.5ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಭಾರತಕ್ಕೆ ಆಗಮಿಸಲಿದ್ದು, ಆ ಸಂದರ್ಭ ‘ಎಸ್‌-400 ಟ್ರಯಂಫ್‌’ ಖರೀದಿಗೆ ಎರಡೂ ದೇಶಗಳು ಸಹಿ ಹಾಕಲಿವೆ. ಅದರ ಮೌಲ್ಯ 36 ಸಾವಿರ ಕೋಟಿ ರು.ಗೂ ಅಧಿಕ ಎಂದು ಪುಟಿನ್‌ ಅವರ ವಿದೇಶಾಂಗ ನೀತಿಗೆ ಸಂಬಂಧಿಸಿದ ಆಪ್ತ ಯೂರಿ ಉಶಾಕೋವ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಇದೇ ವೇಳೆ, ಬೆಂಗಳೂರಿನ ಎಚ್‌ಎಎಲ್‌ನಲ್ಲಿ ರಷ್ಯಾದ ಕಮೋವ್‌ ಎಂಬ 200 ಹೆಲಿಕಾಪ್ಟರ್‌ಗಳನ್ನು ಉತ್ಪಾದನೆ ಮಾಡುವ ಸಂಬಂಧ ಎರಡೂ ದೇಶಗಳ ನಡುವೆ 7300 ಕೋಟಿ ರು. ಮೌಲ್ಯದ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಹೇಳಲಾಗಿದೆ. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಭೇಟಿ ಕೈಗೊಂಡಿದ್ದಾಗ ಈ ಸಂಬಂಧ ಮಾತುಕತೆ ನಡೆದಿತ್ತು.

ರಷ್ಯಾದಿಂದ ಸಮರ ಸಾಮಗ್ರಿಗಳನ್ನು ಖರೀದಿಸಿದ ಕಾರಣಕ್ಕೆ ಕೆಲ ದಿನಗಳ ಹಿಂದಷ್ಟೇ ಚೀನಾ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿತ್ತು. ಒಂದು ವೇಳೆ ರಷ್ಯಾದಿಂದ ಎಸ್‌-400 ಟ್ರಯಂಫ್‌ ವ್ಯವಸ್ಥೆ ಖರೀದಿಗೆ ಭಾರತ ಮುಂದಾದಲ್ಲಿ ಅದರ ಮೇಲೂ ದಿಗ್ಬಂಧನ ಹೇರುವ ಕುರಿತು ಪರಿಶೀಲನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ, ಈ ಒಪ್ಪಂದಕ್ಕೆ ಅಮೆರಿಕದಿಂದ ವಿಶೇಷ ವಿನಾಯಿತಿ ಪಡೆಯುವುದಾಗಿ ಭಾರತ ಹೇಳಿಕೊಂಡಿತ್ತು. ಆದರೆ ಇದಕ್ಕೆ ಯಾವುದೇ ಖಾತ್ರಿ ಇಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದರು.

ಸಂಭಾವ್ಯ ಒಪ್ಪಂದಗಳು:

ಎಸ್‌-400 ಟ್ರಯಂಫ್‌ ಮಾತ್ರವೇ ಅಲ್ಲದೆ, ಐಎನ್‌ಎಸ್‌ ಚಕ್ರ ಜಲಾಂತರ್ಗಾಮಿ ನೌಕೆ ಜಾಗಕ್ಕೆ ಮರುನಿರ್ಮಾಣಗೊಂಡಿರುವ, ಪರಮಾಣು ಇಂಧನ ಚಾಲಿತ ಅಕುಲಾ ದರ್ಜೆ ಸಬ್‌ ಮರೀನ್‌ ಖರೀದಿಗೆ 14 ಸಾವಿರ ಕೋಟಿ ರು. ಒಪ್ಪಂದ, ಕ್ರಿವಾಕ್‌ ದರ್ಜೆಯ ಲಘು ನೌಕೆಗಳನ್ನು 14 ಸಾವಿರ ಕೋಟಿ ರು. ವೆಚ್ಚದಲ್ಲಿ ಖರೀದಿ, ದೇಶದ ಒಂದು ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಎಕೆ-103 ರೈಫಲ್‌ ಉತ್ಪಾದನೆಗೆ ಒಪ್ಪಂದವೇರ್ಪಡಲಿದೆ ಎಂದು ಹೇಳಲಾಗಿದೆ. ಇದಲ್ಲದೆ 2022ಕ್ಕೆ ಭಾರತ ಮಾನವ ಸಹಿತ ಬಾಹ್ಯಾಕಾಶ ಯೋಜನೆ ರೂಪಿಸಿದ್ದು, ಇದಕ್ಕೆ ಪೂರಕವಾಗಿ ಭಾರತದ ಗಗನಯಾತ್ರಿಗಳನ್ನು ಕೆಲ ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಕೇಂದ್ರಕ್ಕೆ ಕರೆದೊಯ್ಯುವ ಕುರಿತೂ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಿವೆ ಎನ್ನಲಾಗಿದೆ. ಈ ಹಿಂದೆ ಭಾರತದ ರಾಕೇಶ್‌ ಶರ್ಮಾ ಅವರಿಗೂ ರಷ್ಯಾ ತರಬೇತಿ ನೀಡಿ 1984ರಲ್ಲಿ ಬಾಹ್ಯಾಕಾಶಕ್ಕೆ ಕರೆದೊಯ್ದಿತ್ತು.

ಎಸ್‌-400 ಟ್ರಯಂಫ್‌ ವಿಶೇಷತೆಗಳು

ದೀರ್ಘದೂರ ಕ್ರಮಿಸಬಲ್ಲ, ನೆಲದಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದು. ರಷ್ಯಾ ಅಭಿವೃದ್ಧಿಪಡಿಸಿದ್ದು, 2007ರಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿತ್ತು. ಶತ್ರು ದೇಶಗಳಿಂದ ಬರುವ ವಿಮಾನ, ಗುರುತ್ವ ಬಲ ಆಧರಿಸಿ ನುಗ್ಗುವ ಬ್ಯಾಲಿಸ್ಟಿಕ್‌ ಕ್ಷಿಪಣಿ, ಕಂಪ್ಯೂಟರ್‌ ನಿರ್ದೇಶನದೊಂದಿಗೆ ಶತ್ರುಪಡೆಗಳ ಸಂಹಾರ ಮಾಡುವ ಕ್ರೂಸ್‌ ಕ್ಷಿಪಣಿ, ಮಾನವರಹಿತ ವೈಮಾನಿಕ ನೌಕೆ (ಡ್ರೋನ್‌)ಗಳನ್ನು 400 ಕಿ.ಮೀ. ದೂರದಿಂದಲೇ, 30 ಕಿ.ಮೀ. ಎತ್ತರದಲ್ಲಿ ಎಸ್‌-400 ತಡೆಯುತ್ತದೆ. ಅಮೆರಿಕ ನಿರ್ಮಿತ ಎಫ್‌-35ನಂತಹ ಸೂಪರ್‌ ಫೈಟರ್‌ ಸೇರಿದಂತೆ 100 ವಾಯು ಗುರಿಗಳನ್ನು ಪತ್ತೆ ಹಚ್ಚಿ, ಆ ಪೈಕಿ ಆರರ ಜತೆ ನಿರಂತರ ಕಾದಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ರಾಡಾರ್‌, ಗುರಿ ಪತ್ತೆ, ಕ್ಷಿಪಣಿ, ಉಡಾವಣಾ ವ್ಯವಸ್ಥೆ, ನಿಯಂತ್ರಣ ವ್ಯವಸ್ಥೆ ಎಲ್ಲವೂ ಇರುತ್ತದೆ. ಹಂತಹಂತದ ಪ್ರತಿರೋಧಕ ವ್ಯವಸ್ಥೆ ಇದಾಗಿದ್ದು, ಮೂರು ಬಗೆಯ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಅಮೆರಿಕದ ಬಳಿ ‘ಥಾದ್‌’ ಎಂಬ ವಾಯುರಕ್ಷಣಾ ವ್ಯವಸ್ಥೆ ಇದ್ದು, ಅದಕ್ಕಿಂತ ರಷ್ಯಾದ ಎಸ್‌-400 ಹಲವು ವಿಷಯಗಳಲ್ಲಿ ಉತ್ತಮವಿದೆ. ದೇಶದ ಗಡಿ ಹಾಗೂ ನಗರಗಳನ್ನು ಎಸ್‌-400 ನಿಯೋಜಿಸಬಹುದಾಗಿದೆ.


ಏನೇನು ಡೀಲ್‌?

1. .36000 ಕೋಟಿ: ಮೌಲ್ಯದ ಎಸ್‌-400 ಟ್ರಯಂಫ್‌ ಕ್ಷಿಪಣಿ ನಿರೋಧಕ ವಾಯು ರಕ್ಷಣಾ ವ್ಯವಸ್ಥೆ ಖರೀದಿ

2. .7300 ಕೋಟಿ: ಬೆಂಗಳೂರಿನ ಎಚ್‌ಎಎಲ್‌ನಲ್ಲಿ ರಷ್ಯಾದ 200 ಕಮೋವ್‌ ಕಾಪ್ಟರ್‌ ಉತ್ಪಾದನೆಗೆ ಒಡಂಬಡಿಕೆ

3. .14000 ಕೋಟಿ: ಐಎನ್‌ಎಸ್‌ ಚಕ್ರ ಜಾಗಕ್ಕೆ ಪರಮಾಣು ಇಂಧನ ಚಾಲಿತ ಸಬ್‌ಮರೀನ್‌ ಖರೀದಿಗೆ ಒಪ್ಪಂದ

4. .14000 ಕೋಟಿ: ಭಾರತೀಯ ನೌಕಾಪಡೆಗಾಗಿ ಕ್ರಿವಾಕ್‌ ದರ್ಜೆಯ ಲಘು ನೌಕೆಗಳ ಖರೀದಿಗೆ ಅಗ್ರಿಮೆಂಟ್‌

5. ಭಾರತದ ಗಗನಯಾನಿಗಳನ್ನು ಕೆಲ ದಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲು ಒಪ್ಪಂದ