ನವದೆಹಲಿ(ಆ.08): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ, ಇದೇ ಮೊದಲ ಬಾರಿಗೆ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಸಂವಿಧಾನದ 370ನೇ ವಿಧಿ, 35ಎ ಕಲಂ ರದ್ದತಿಯನ್ನು ಐತಿಹಾಸಿಕ ಎಂದಿರುವ ಪ್ರಧಾನಿ ಮೋದಿ, ಇದರಿಂದ ಕಣಿವೆಗೆ ಆಗುವ ಲಾಭವನ್ನು ಎಳೆಎಳೆಯಾಗಿ ದೇಶದ ಜನತೆಯ ಮುಂದೆ ಬಿಚ್ಚಿಟ್ಟರು.

ವಿಶೇಷ ಸ್ಥಾನಮಾನ ರದ್ದತಿ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 370ನೇ ವಿಧಿ ಹಾಗೂ 35ಎ ಕಲಂ ಕಣಿವೆಗೆ ಭಯೋತ್ಪಾದನೆ, ಪ್ರತ್ಯೇಕತಾವಾದ, ಪರಿವಾರವಾದ ಹೊರತುಪಡಿಸಿ ಬೇರೆ ಏನನ್ನೂ ನೀಡಿಲ್ಲ ಎಂದು ಕಿಡಿಕಾರಿದರು.

ವಿಶೇಷ ಸ್ಥಾನಮಾನ ರದ್ದತಿ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಘಟಿಸಿರುವುದು ಪ್ರದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಉತ್ತಮ ನಡೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ಕೇಂದ್ರಾಡಳಿತ ಸ್ಥಾನಮಾನ ತಾತ್ಕಾಲಿಕವಾಗಿದ್ದು, ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ಬಳಿಕ ಮತ್ತೆ ರಾಜ್ಯ ಸ್ಥಾನಮಾನವನ್ನು ನೀಡಲಾಗುವುದು ಎಂದು ಮೋದಿ ಭರವಸೆ ನೀಡಿದರು.

ಇದೇ ವೇಳೆ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿಯೇ ಮುಂದುವರೆಯಲಿದ್ದು, ಇನ್ನು ಮುಂದೆ ದೇಶದ ಭೂಶಿಖರದಲ್ಲಿ ಅಭಿವೃದ್ಧಿಯ ಮಹಾಪರ್ವ ಆರಂಭವಾಗಲಿದೆ ಎಂದು ಮೋದಿ ವಾಗ್ದಾನ ಮಾಡಿದರು.

ಜಮ್ಮು ಮತ್ತು ಕಾಶ್ಮೀರ ಇದೀಗ ದೇಶದ ಇತರ ರಾಜ್ಯಗಳಂತೆ ಸಮಾನವಾಗಿದ್ದು, ಈ ಕನಸನ್ನು ನನಸು ಮಾಡಲು ಸಹಕರಿಸಿದ ದೇಶದ ಜನತೆಗೆ ಧನ್ಯವಾದ ಸಲ್ಲಿಸುವುದಾಗಿ ಮೋದಿ ಹೇಳಿದರು.

ಎರಡೂ ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿಯ ಜವಾಬ್ದಾರಿ ಇದೀಗ ಕೇಂದ್ರದ ಹೆಗಲೇರಿರುವುದರಿಂದ, ಸಹಜವಾಗಿ ಅಭಿವೃದ್ಧಿಯ ವೇಗ ಈ ಭಾಗದಲ್ಲಿ ಹೆಚ್ಚಲಿದೆ ಎಂದು ಪ್ರಧಾನಿ ಮೋದಿ ನುಡಿದರು.

ದೇಶದ ಸರ್ವಸಮ್ಮತದ ನಿರ್ಧಾರವನ್ನು ಬೆಂಬಲಿಸಿ ದೇಶದ ಐಕ್ಯತೆ ಮತ್ತು ಅಭಿವೃದ್ಧಿಗಾಗಿ ಒಂದಾಗುವಂತೆ, ಇದೇ ವೇಳೆ ವಿಶೇಷ ಸ್ಥಾನಮಾನ ರದ್ದತಿ ವಿರೋಧಿಸುತ್ತಿರುವವರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದರು.

ಇದೇ ವೇಳೆ ಈದ್ ಹಬ್ಬದ ಪ್ರಯುಕ್ತ ಜಮ್ಮು ಮತ್ತು ಕಾಶ್ಮೀರದ ಹಾಗೂ ಇಡೀ ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ ಕೋರಿದರು. ಶಾಂತಿಯುತ ಈದ್ ಸ್ಥಾಪನೆಗೆ ಕೇಂದ್ರ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ಇನ್ನು ಕಣಿವೆಯ ಏಕತೆಗಾಗಿ ಪ್ರಾಣತೆತ್ತ ಅಸಂಖ್ಯ ಹುತಾಥ್ಮರನ್ನು ನೆನೆದು ಭಾವುಕರಾದ ಪ್ರಧಾನಿ ಮೋದಿ, ಹುತಾತ್ಮರ ಕನಸು ನನಸು ಮಾಡಲು ಇಡೀ ದೇಶ ಒಂದಾಗಿ ಶ್ರಮಿಸಲು ಕರೆ ನೀಡಿದರು.

 

ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:

ನೆಮ್ಮದಿಯಾಗಿ ಈದ್ ಹಬ್ಬ ಆಚರಿಸುವಂತೆ ಕಣಿವೆ ಜನರಿಗೆ ಪ್ರಧಾನಿ ಮೋದಿ ಕರೆ 

ದೇಶದ ಜನತೆಗೆ ಈದ್- ಮುಬಾರಕ್ ಕೋರಿದ ಪ್ರಧಾನಿ ಮೋದಿ 

ದೇಶದ ಬೇರೆ ಭಾಗಗಳಿಂದ ಕಾಶ್ಮೀರದ ತಮ್ಮ ಮನೆಗೆ ಹಬ್ಬ ಆಚರಿಸಲು ತೆರಳುವವರಿಗೆ ಸರ್ಕಾರದ ನೆರವು

ಕಾಶ್ಮೀರಿಗಳಿಗೆ ಒಗ್ಗಟ್ಟಿನ ಪಾಠ ಹೇಳಿದ ಮೋದಿ

ಭದ್ರತಾಪಡೆಗಳು, ಸ್ಥಳೀಯ ಆಡಳಿತ ಮತ್ತು ಕಾಶ್ಮೀರ ಪೊಲೀಸರಿಗೆ ಅಭಿನಂದಿಸಿದ ಮೋದಿ

ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಔಷಧೀಯ ಗಿಡ ಮೂಲಿಕೆಗಳು ಹೇರಳವಾಗಿವೆ

ಭಾರತಕ್ಕಾಗಿ ಜಮ್ಮು-ಕಾಶ್ಮೀರ ಜನರು ಪ್ರಾಣ ತೆತ್ತಿದ್ದಾರೆ

ಕಾಶ್ಮೀರದ ಸೇಬು, ಕೇಸರಿಯ ಸ್ವಾದ ಜಗತ್ತಿನ ಮೂಲೆ, ಮೂಲೆಗಳಿಗೆ ತಲುಪಬೇಕು

ದೇಶದಲ್ಲಿರುವ ಆಹಾರ ಸಂಸ್ಕರಣಾ ಕಂಪನಿಗಳು ಇದಕ್ಕಾಗಿ ಮುಂದೆ ಬರಬೇಕು

ಸೌರಶಕ್ತಿ ಕೇಂದ್ರವಾಗಿ ಲಡಾಖ್ ಬೆಳೆಯಲು ಅಪಾರವಾದ ಅವಕಾಶಗಳಿವೆ

ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ಹಿಂದಿ, ತಮಿಳು, ತೆಲುಗು ಚಿತ್ರ ನಿರ್ಮಾಪಕರಿಗೆ ಮೋದಿ ಆಹ್ವಾನ

ಕಾಶ್ಮೀರದಲ್ಲಿ ಬಂಡವಾಳ ಹೂಡಲು ಖಾಸಗಿ ಉದ್ಯಮಿಗಳಿಗೆ ಮೋದಿ ಆಹ್ವಾನ

ಹೊಸ ವ್ಯವಸ್ಥೆಯಲ್ಲಿ ಪಂಚಾಯ್ತಿ ಸದಸ್ಯರು ಪವಾಡ ಮಾಡಬಲ್ಲರು ಎಂಬ ವಿಶ್ವಾಸವಿದೆ

ಜಮ್ಮು  ಮತ್ತು ಕಾಶ್ಮೀರ ಹಾಗೂ ಲಡಾಖ್ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲಿದೆ