ವಿವಾದಿತ ರಾಮಜನ್ಮಭೂಮಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ಧ್ವಂಸಗೊಂಡ ಬಾಬ್ರಿ ಮಸೀದಿಯು ಅನ್ಯ ಸ್ಥಳದಲ್ಲಿ ನಿರ್ಮಾಣವಾಗಬೇಕು ಎಂದು ಹೇಳಿದ್ದ ಮೌಲ್ವಿ ಸಲ್ಮಾನ್‌ ನದ್ವಿ ಅವರನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಕಾರ‍್ಯಕಾರಿಣಿ ಸದಸ್ಯತ್ವದಿಂದ ಭಾನುವಾರ ವಜಾ ಮಾಡಲಾಗಿದೆ.

ನವದೆಹಲಿ : ವಿವಾದಿತ ರಾಮಜನ್ಮಭೂಮಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ಧ್ವಂಸಗೊಂಡ ಬಾಬ್ರಿ ಮಸೀದಿಯು ಅನ್ಯ ಸ್ಥಳದಲ್ಲಿ ನಿರ್ಮಾಣವಾಗಬೇಕು ಎಂದು ಹೇಳಿದ್ದ ಮೌಲ್ವಿ ಸಲ್ಮಾನ್‌ ನದ್ವಿ ಅವರನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಕಾರ‍್ಯಕಾರಿಣಿ ಸದಸ್ಯತ್ವದಿಂದ ಭಾನುವಾರ ವಜಾ ಮಾಡಲಾಗಿದೆ.

ಎಐಎಂಪಿಎಲ್‌ಬಿ ಮಂಡಳಿಯು ಈ ನಿರ್ಣಯ ತೆಗೆದುಕೊಂಡಿದೆ. ನದ್ವಿ ಅವರ ಹೇಳಿಕೆಯ ಬಳಿಕ ಮುಸ್ಲಿಂ ಸಮುದಾಯದಲ್ಲಿ ಮಿಂಚಿನ ಸಂಚಲನ ಉಂಟಾಗಿತ್ತು. ಅಲ್ಲದೆ, ನದ್ವಿ ಅವರ ಈ ಹೇಳಿಕೆಯನ್ನು ಎಐಎಂಪಿಎಲ್‌ಬಿಯದ್ದೇ ಹೇಳಿಕೆ ಎಂದು ಬಿಂಬಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ನದ್ವಿ ಹೇಳಿಕೆಯಿಂದ ದೂರ ಸರಿದಿರುವ ಎಐಎಂಪಿಎಲ್‌ಬಿ, ‘ನದ್ವಿ ಅವರು ನಮ್ಮ ನಿಲುವಿನಿಂದ ದೂರ ಸರಿದಿದ್ದಾರೆ. ಮಸೀದಿಯನ್ನು ಸ್ಥಳಾಂತರ ಮಾಡಲಾಗದು ಅಥವಾ ಕಾಣಿಕೆಯನ್ನಾಗಿ ಕೊಡಲಾಗದು ಅಥವಾ ಮಾರಲಾಗದು. ಆದ್ದರಿಂದ ಅವರನ್ನು ವಜಾ ಮಾಡಲಾಗಿದೆ’ ಎಂದು ತಿಳಿಸಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಬೆಂಗಳೂರಿನಲ್ಲಿ ರಾಮಜನ್ಮಭೂಮಿ ವಿವಾದದ ಬಗ್ಗೆ ಸಂಧಾನ ಸಭೆ ನಡೆಸಿದಾಗ ನದ್ವಿ ಅವರು ಮಸೀದಿ ಸ್ಥಳಾಂತರಕ್ಕೆ ಒಪ್ಪಿದ್ದರು.

ಶ್ರೀ ಶ್ರೀ ಮಧ್ಯಸ್ಥಿಕೆಗೆ ವಿರೋಧ: ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಅಯೋಧ್ಯೆ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವುದನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿರಸ್ಕರಿಸಿದೆ. ಇದೇ ವೇಳೆ, ರಾಮಜನ್ಮಭೂಮಿ ನ್ಯಾಸದ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲದಾಸ್‌, ವಿಶ್ವ ಹಿಂದೂ ಪರಿಷತ್ತು ಹಾಗೂ ಅಯೊಧ್ಯೆಯ ಪ್ರಮುಖ ಸಂತರು ಕೂಡ ‘ಹೊರಗಿನವರ ಮಧ್ಯಸ್ಥಿಕೆ’ ತಿರಸ್ಕರಿಸಿದ್ದಾರೆ.