ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದಾಗಿ ಕೇಂದ್ರ ಸರ್ಕಾರ ಪದೇಪದೇ ಹೇಳಿಕೊಳ್ಳುತ್ತಿರುವಾಗಲೇ, ಏಷ್ಯಾದ ಅತ್ಯಂತ ಭ್ರಷ್ಟ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ತಿಳಿಸಿದೆ.

ನವದೆಹಲಿ(ಸೆ.03): ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದಾಗಿ ಕೇಂದ್ರ ಸರ್ಕಾರ ಪದೇಪದೇ ಹೇಳಿಕೊಳ್ಳುತ್ತಿರುವಾಗಲೇ, ಏಷ್ಯಾದ ಅತ್ಯಂತ ಭ್ರಷ್ಟ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ತಿಳಿಸಿದೆ.

ಇದೇ ವರದಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಗಿದೆ. ಜರ್ಮನಿ ಮೂಲದ ಜಾಗತಿಕ ಭ್ರಷ್ಟಾಚಾರ ವಿರೋಧಿ ಹೋರಾಟ ಸಂಸ್ಥೆ ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್’ ಸಿದ್ಧಪಡಿಸಿರುವ ‘ಏಷ್ಯಾದ ಐದು ಕಡುಭ್ರಷ್ಟ ದೇಶಗಳು’ ಪಟ್ಟಿಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದ್ದರೆ, ವಿಯೆಟ್ನಾಂ 2, ಥಾಯ್ಲೆಂಡ್ 3, ಪಾಕಿಸ್ತಾನ 4 ಹಾಗೂ ಮ್ಯಾನ್ಮಾರ್ 5ನೇ ಸ್ಥಾನ ಗಳಿಸಿವೆ. 16 ದೇಶಗಳಲ್ಲಿ 20 ಸಾವಿರ ಜನರನ್ನು 18 ತಿಂಗಳ ಕಾಲ ಸಂದರ್ಶಿಸಿ ಸಿದ್ಧಪಡಿಸಿರುವ ವರದಿ ಇದಾಗಿದ್ದು, ಕಳೆದ ಮಾರ್ಚ್‌ನಲ್ಲೇ ಬಿಡುಗಡೆಯಾಗಿತ್ತು.ಆದಾಗ್ಯೂ ಶುಕ್ರವಾರ ಮತ್ತೊಮ್ಮೆ ಅದೇ ವರದಿಯನ್ನು ಅಮೆರಿಕದ ಫೋರ್ಬ್ಸ್ ನಿಯತಕಾಲಿಕೆ ಟ್ವೀಟರ್ ಖಾತೆಯಲ್ಲಿ ಬಿತ್ತರಿಸಲಾಗಿದೆ.

‘ಭಾರತದಲ್ಲಿ ಲಂಚದ ಪ್ರಮಾಣ ಶೇ.69ರಷ್ಟಿದೆ. ಆದರೆ ಇದೇ ವೇಳೆ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಶೇ.53ರಷ್ಟು ಮಂದಿ ಮೋದಿ ಅವರು ಅತ್ಯುತ್ತಮವಾಗಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.