Asianet Suvarna News Asianet Suvarna News

ಗಾಂಧೀಜಿ ಬಗ್ಗೆ 20 ಕುತೂಹಲಕರ ಸಂಗತಿಗಳು!

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಹಲವಾರು ವಿಚಾರಗಳು ಜನರಿಗೆ ಗೊತ್ತಿವೆ. ಆದರೆ ಅವರ ಜೀವನಕ್ಕೆ ಸಂಬಂಧಿಸಿದ ಅನೇಕ ಗೊತ್ತಿರದ ವಿಷಯಗಳೂ ಇವೆ. ಇಂಥ ಗೊತ್ತಿರದ 20 ಕುತೂಹಲದ ವಿಷಯಗಳನ್ನು ಇಲ್ಲಿ ವಿವರಿಸಲಾಗಿದೆ.

India MK Gandhi 150 Yrs  20 Interesting Facts About Gandhiji
Author
Bengaluru, First Published Oct 2, 2018, 1:17 PM IST

India MK Gandhi 150 Yrs  20 Interesting Facts About Gandhiji

1. ಶಾಂತಿಯ ಹರಿಕಾರಿನಿಗೆ ನೊಬೆಲ್‌ ಇಲ್ಲ!

ಮಹಾತ್ಮಾ ಗಾಂಧೀಜಿ ಅವರು ಶಾಂತಿಯ ಹರಿಕಾರರು. ಶಾಂತ ಹೋರಾಟದಿಂದಲೇ ಅವರು ಭಾರತಕ್ಕೆ ಸ್ವತಂತ್ರ ದೊರಕಿಸಿದವರು. ಆದರೂ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ದೊರಕಲಿಲ್ಲ ಎಂಬುದು ಕುತೂಹಲಕರ ವಿಚಾರ. ಗಾಂಧೀಜಿ ಅವರನ್ನು 5 ಬಾರಿ ನೊಬೆಲ್‌ಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ನೊಬೆಲ್‌ನಲ್ಲಿ ಮರಣೋತ್ತರ ಪ್ರಶಸ್ತಿ ನೀಡಲು ಅವಕಾಶವಿಲ್ಲ. ಹೀಗಾಗಿ ಗಾಂಧೀಜಿ ಅವರಿಗೆ ನೊಬೆಲ್‌ ದೊರಕಲಿಲ್ಲ.

2. ನಾಲ್ಕು ಖಂಡ, 12 ದೇಶಗಳಿಗೆ ಸ್ಫೂರ್ತಿ

ಗಾಂಧೀಜಿ ಅವರ ಶಾಂತಿಯ ಹೋರಾಟವು ಬರೀ ಭಾರತಕ್ಕಷ್ಟೇ ನೆರವಾಗಲಿಲ್ಲ. ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ಗಾಂಧೀಜಿ ಅವರ ಶಾಂತಿ ಹೋರಾಟದ ನೆರವಿನಿಂದ ಸ್ವಾತಂತ್ರ್ಯ ಸಂಪಾದಿಸಿದವು. 4 ಖಂಡಗಳ 12 ದೇಶಗಳಲ್ಲಿ ಗಾಂಧೀಜಿ ಅವರ ಶಾಂತಿ ಸ್ವರೂಪದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಕೊಂಡಿತು. ಈ ದೇಶಗಳು ಇಂದಿಗೂ ಸ್ವಾತಂತ್ರ್ಯ ಮಾರ್ಗ ಹಾಕಿ ಕೊಟ್ಟಗಾಂಧೀಜಿ ಅವರನ್ನು ನೆನೆಯುತ್ತವೆ.

3. ಅಂತಿಮ ಮೆರವಣಿಗೆ 8 ಕಿ.ಮೀ.

1948ರ ಜ.30ರಂದು ಹಂತಕ ನಾಥೂರಾಮ್‌ ಗೋಡ್ಸೆ ಗುಂಡಿಗೆ ಬಲಿಯಾದ ಗಾಂಧೀಜಿ ಅವರ ಅಂತ್ಯಕ್ರಿಯೆಯನ್ನು ದಿಲ್ಲಿಯ ರಾಜಘಾಟ್‌ನಲ್ಲಿ ನೆರವೇರಿಸಲಾಯಿತು. ಗಾಂಧೀಜಿ ಅವರ ಹತ್ಯೆಯ ಸುದ್ದಿ ದೇಶಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತು. ದೇಶದ ಮೂಲೆಮೂಲೆಯ ಜನ ದಿಲ್ಲಿಯತ್ತ ಧಾವಿಸಿ ಅಗಲಿದ ಸ್ವಾತಂತ್ರ್ಯ ಸೇನಾನಿಗೆ ಅಂತಿಮ ನಮನ ಸಲ್ಲಿಸಿದರು. ಮಹಾತ್ಮಾ ಅಂತಿಮ ಯಾತ್ರೆಗೆ ಸುಮಾರು 8 ಕಿ.ಮೀ.ವರೆಗೆ ಜನಸಾಗರ ಚಾಚಿಕೊಂಡಿತ್ತು!

4. ‘ವೈರಿ’ ಬ್ರಿಟನ್‌ನಿಂದ ಗಾಂಧೀಜಿ ಸ್ಟಾಂಪ್‌!

ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದು ಬ್ರಿಟಿಷರ ವಿರುದ್ಧ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯ ಹರಿಕಾರರು ಅವರು. ಇಂತಹ ಬ್ರಿಟಿಷರು ಕಾಲಕ್ರಮೇಣ ಗಾಂಧೀಜಿ ಬಗ್ಗೆ ಮೃದು ಧೋರಣೆ ತಾಳಿದರು. ಗಾಂಧೀಜಿ ಅವರ ಸಾವಿನ 21 ವರ್ಷಗಳ ತರುವಾಯ ಬ್ರಿಟನ್‌ನಲ್ಲಿ ಅವರ ಗೌರವಾರ್ಥ ಅಂಚೆ ಚೀಟಿಯೊಂದನ್ನು ಹೊರತರಲಾಯಿತು.

5. ದಿನಕ್ಕೆ 18 ಕಿ.ಮೀ. ನಡಿಗೆ

ಮೋಹನದಾಸ ಕರಮಚಂದ ಗಾಂಧಿ ಅವರಿಗೆ ಕಾಲ್ನಡಿಗೆ ಎಂದರೆ ಎಲ್ಲಿಲ್ಲದ ಪ್ರೀತಿ. ನಡೆಯುತ್ತಲೇ ಅವರು ಪ್ರತಿಭಟನೆಗಳ ವೇಳೆ ಸಾಗಿಬಿಟ್ಟರೆ ಸಾಕು. ಸಾವಿರಾರು ಜನರು ಅವರನ್ನು ಹಿಂಬಾಲಿಸುತ್ತಿದ್ದರು. ಗಾಂಧೀಜಿ ಅವರು ದಿನಕ್ಕೆ 18 ಕಿಲೋಮೀಟರು ಸರಾಸರಿಯಷ್ಟುನಡೆಯುತ್ತಿದ್ದರಂತೆ. ಇದರಿಂದಾಗಿ ಅವರು ತಮ್ಮ ಜೀವಿತಾವಧಿಯಲ್ಲಿ 2 ಬಾರಿ ನಡೆಯುತ್ತ ವಿಶ್ವ ಸುತ್ತಿದ್ದಕ್ಕೆ ಸಮವಂತೆ.

6. ಸೇನೆಯಲ್ಲಿದ್ದರು ಗಾಂಧಿ!

ಶಾಂತಿಯ ಪ್ರತೀಕ ಮಹಾತ್ಮಾ ಗಾಂಧೀಜಿ ಅವರು ಸೇನೆಯಲ್ಲಿದ್ದರು ಎಂದರೆ ಯಾರಾದರೂ ನಂಬುತ್ತೀರಾ? ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರ ವಿರುದ್ಧ ಸ್ಥಳೀಯರು ನಡೆಸಿದ ‘ಬೋಯೆರ್‌ ಕದನ’ದಲ್ಲಿ ಪಾಲ್ಗೊಂಡಿದ್ದರು. ಆಗ ಅವರು ದಕ್ಷಿಣ ಆಫ್ರಿಕಾದ ಸೇನೆಯಲ್ಲಿದ್ದರು. ಗಾಂಧೀಜಿ ಭಾರತಕ್ಕೆ ಮರಳುವ ಮುನ್ನ ದ. ಆಫ್ರಿಕಾದಲ್ಲಿದ್ದರು. ಆಗ ಅವರು ಆಫ್ರಿಕಾ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

7. ಘಟಾನುಘಟಿಗಳ ಜತೆ ಪತ್ರವ್ಯವಹಾರ

ಗಾಂಧೀಜಿ ಅವರಿಗೆ ವಿಶ್ವದ ಅನೇಕ ಘಟಾನುಘಟಿಗಳ ಜತೆ ಸಂಪರ್ಕವಿತ್ತು. ಅಂತಹ ಘಟಾನುಘಟಿಗಳ ಜತೆ ಅವರು ಪತ್ರ ವ್ಯವಹಾರವನ್ನೂ ನಡೆಸುತ್ತಿದ್ದರು. ಲಿಯೋ ಟಾಲ್‌ಸ್ಟಾಯ್‌, ಅಲ್ಬರ್ಟ್‌ ಐನ್‌ಸ್ಟೀನ್‌ ಹಾಗೂ ಜರ್ಮನಿಯ ಸರ್ವಾಧಿಕಾರಿ ಅಡಾಲ್‌್ಫ ಹಿಟ್ಲರ್‌ ಜತೆಗೂ ಗಾಂಧೀಜಿ ಪತ್ರ ವ್ಯವಹಾರ ನಡೆಸುತ್ತಿದ್ದರು ಎಂಬುದು ಅಚ್ಚರಿಯ ವಿಚಾರ.

8. ಸ್ವಾತಂತ್ರ್ಯ ದೊರಕಿದಾಗ ಕೋಲ್ಕತಾದಲ್ಲಿದ್ದರು

ಭಾರತದ ಮೊದಲ ಪ್ರಧಾನಿ ಪಂ. ಜವಾಹರಲಾಲ ನೆಹರು ಅವರು, ಭಾರತಕ್ಕೆ ಸ್ವಾತಂತ್ರ್ಯ ಘೋಷಣೆಯಾಗುವ ಸಂದರ್ಭದಲ್ಲಿ (ಆಗಸ್ಟ್‌ 14ರ ಮಧ್ಯರಾತ್ರಿ) ಸಂಸತ್ತಿನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆದರೆ ಇಂತಹ ಐತಿಹಾಸಿಕ ಸಂದರ್ಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಗಾಂಧೀಜಿ ಹಾಜರಿರಲಿಲ್ಲ. ಅವರು ಕೋಲ್ಕತಾದಲ್ಲಿ ಧಾರ್ಮಿಕ ಸೌಹಾರ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

9. ಮದುರೈನಲ್ಲಿದೆ ಗಾಂಧಿ ವಸ್ತ್ರ

ಮಹಾತ್ಮಾ ಗಾಂಧೀಜಿ ಅವರನ್ನು ಹಂತಕ ನಾಥೂರಾಮ್‌ ಗೋಡ್ಸೆ ಕೊಂದು ಹಾಕಿದ. ಈ ಸಂದರ್ಭದಲ್ಲಿ ಅವರು ತಮ್ಮ ಎಂದಿನ ದಿರಿಸಾದ ಖಾದಿ ಪಂಚೆ, ಶಲ್ಯದ ಮೇಲಿದ್ದರು. ಅವರ ಈ ಬಟ್ಟೆಗಳನ್ನು ಈಗಲೂ ಸಂಗ್ರಹಿಸಿ ಇಡಲಾಗಿದೆ. ಈ ಬಟ್ಟೆಗಳು ತಮಿಳುನಾಡಿನ ಮದುರೈ ವಸ್ತು ಸಂಗ್ರಹಾಲಯದಲ್ಲಿ ಜೋಪಾನವಾಗಿವೆ.

10. ಯಾವುದೇ ಹುದ್ದೆ ಇರಲಿಲ್ಲ

ಮಹಾತ್ಮಾ ಗಾಂಧೀಜಿ ಅವರು ಅನೇಕ ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಇದ್ದರೂ ಅವರು ಯಾವುದೇ ಪಕ್ಷದ ಹುದ್ದೆಯನ್ನು ಹೊಂದಿರಲಿಲ್ಲ. ಕಾಂಗ್ರೆಸ್‌ ಪಕ್ಷವು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಇದ್ದರು ಕೂಡ ಅದರಲ್ಲಿ ಗಾಂಧೀಜಿ ಅವರು ಹುದ್ದೆ ಹೊಂದಿರಲಿಲ್ಲ. ಬದಲಾಗಿ ಅಘೋಷಿತ ಮುಖ್ಯಸ್ಥನಾಗಿ ಕಾಂಗ್ರೆಸ್ಸನ್ನು ಮುನ್ನಡೆಸಿದರು.

11. ಕಾಂಗ್ರೆಸ್‌ ವಿಸರ್ಜಿಸಬೇಕು ಎಂದಿದ್ದರು

ಕಾಂಗ್ರೆಸ್‌ ಪಕ್ಷವು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಇದ್ದ ಪಕ್ಷವಾಗಿತ್ತು. ಆದರೆ ಈ ಪಕ್ಷವು ಸ್ವಾತಂತ್ರ್ಯಾನಂತರ ವಿಸರ್ಜನೆ ಆಗಬೇಕು. ಅದು ದುರ್ಬಳಕೆ ಆಗಬಾರದು ಎಂಬುದು ಗಾಂಧೀಜಿ ಅವರ ಇಚ್ಛೆಯಾಗಿತ್ತು. ಕೇವಲ ಹತ್ಯೆಯಾದ 1 ದಿವಸ ಮುನ್ನವಷ್ಟೇ ಗಾಂಧೀಜಿ ಅವರು ಕಾಂಗ್ರೆಸ್‌ನ ವಿಸರ್ಜನೆ ಬಗ್ಗೆ ಮಾತನಾಡಿದ್ದರಂತೆ. ಆದರೆ ಅದು ಕೈಗೂಡಲಿಲ್ಲ.

12. ಸ್ಟೀವ್‌ ಜಾಬ್ಸ್‌ ಚಾಳೀಸೂ.. ಮಹಾತ್ಮಾ ಚಾಳೀಸೂ..

ಹೆಸರಾಂತ ತಂತ್ರಜ್ಞಾನ ಸಂಸ್ಥೆ ಆ್ಯಪಲ್‌ ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಅವರಿಗಗೆ ಮಹಾತ್ಮಾ ಗಾಂಧೀಜಿ ಅವರ ಜೀವನಗಾಥೆಯು ಸ್ಫೂರ್ತಿಯಂತೆ. ಅದಕ್ಕೇ ಅವರು ಗಾಂಧೀಜಿ ಅವರಿಗೆ ವಿಶಿಷ್ಟರೀತಿಯ ಶ್ರದ್ಧಾಂಜಲಿಯನ್ನು ಸದಾಕಾಲ ಸಲ್ಲಿಸುತ್ತಿರುತ್ತಾರೆ. ಜಾಬ್ಸ್‌ ಅವರು ಗಾಂಧೀಜಿ ಅವರು ಧರಿಸುವ ಮಾದರಿಯಲ್ಲೇ ದುಂಡನೆಯ ಚಾಳೀಸನ್ನು ಧರಿಸಿ ಗಾಂಧೀಜಿ ಅವರನ್ನು ಸದಾ ಸ್ಮರಿಸುತ್ತಾರೆ.

13. ಗಾಂಧೀಜಿ ಹಲ್ಲಿನ ಸೆಟ್ಟು

ಗಾಂಧೀಜಿ ಅವರು ಸದಾ ತಮ್ಮೊಂದಿಗೆ ಒಂದು ಹಲ್ಲಿನ ಸೆಟ್‌ ಒಯ್ಯುತ್ತಿದ್ದರು. ಅದನ್ನು ತಮ್ಮ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊಂಡಿರುತ್ತಿದ್ದರು. ಊಟ ಮಾಡುವಾಗ ಮಾತ್ರ ಅದನ್ನು ಅವರು ಹಾಕಿಕೊಳ್ಳುತ್ತಿದ್ದರು. ಊಟ ಮಾಡಿದ ನಂತರ ಅದನ್ನು ಸ್ವಚ್ಛಗೊಳಿಸಿ ಬಟ್ಟೆಯಲ್ಲಿ ಮಡಚಿ ಇಟ್ಟುಕೊಳ್ಳುತ್ತಿದ್ದರು.

14. ಐರಿಷ್‌ ಶೈಲಿಯ ಇಂಗ್ಲಿಷ್‌!

ಗಾಂಧೀಜಿ ಅವರು ಇಂಗ್ಲಿಷ್‌ ಬ್ಯಾರಿಸ್ಟರ್‌ ಪದವೀಧರರು. ಅವರು ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡುತ್ತಿದ್ದರು. ಆದರೆ ಅವರು ಮಾತನಾಡುವ ಇಂಗ್ಲಿಷ್‌ ಶೈಲಿಯು ಬ್ರಿಟಿಷ್‌ ಅಥವಾ ಭಾರತೀಯ ಮಾದರಿಯದ್ದಾಗಿರಲಿಲ್ಲ. ಬದಲಾಗಿ ಐರಿಷ್‌ ಶೈಲಿಯ ಇಂಗ್ಲಿಷನ್ನು ಮಾತನಾಡುತ್ತಿದ್ದರು. ಏಕೆಂದರೆ ಗಾಂಧೀಜಿ ಅವರ ಮೊದಲ ಇಂಗ್ಲಿಷ್‌ ಗುರು ಐರ್ಲೆಂಡ್‌ ಮೂಲದವರಾಗಿದ್ದರು.

15. ಫುಟ್ಬಾಲ್‌ ಆಡಿದ್ದರು!

ವಿಶೇಷವೆಂದರೆ ಮಹಾತ್ಮಾ ಗಾಂಧೀಜಿ ಅವರು ಫುಟ್ಬಾಲ್‌ನಲ್ಲಿ ಅತೀವ ಕುತೂಹಲ ಹೊಂದಿದ್ದರು. ದಕ್ಷಿಣ ಆಫ್ರಿಕದಲ್ಲಿದ್ದಾಗ ಡರ್ಬನ್‌, ಪ್ರಿಟೋರಿಯಾ, ಜೋಹಾನ್ಸ್‌ಬರ್ಗ್‌ ಫುಟ್ಬಾಲ್‌ ಕ್ಲಬ್‌ಗಳ ಸ್ಥಾಪನೆಗೆ ನೆರವಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಲು ಅವರು ಫುಟ್ಬಾಲ್‌ ಮೂಲಕ ಪ್ರಚಾರ ನಡೆಸಿದ್ದರು.

16. ವಿದೇಶದಲ್ಲೂ ಇವೆ ಎಂ.ಜಿ. ರೋಡ್‌!

ಬೆಂಗಳೂರಿನ ಎಂ.ಜಿ. ರೋಡ್‌ (ಮಹಾತ್ಮಾ ಗಾಂಧೀ ರಸ್ತೆ) ಎಂದರೆ ಬಲು ಪ್ರಖ್ಯಾತಿ ಹೊಂದಿದೆ. ಆದರೆ ಭಾರತದಲ್ಲಿ 53 ಪ್ರಮುಖ ರಸ್ತೆಗಳು (ಸಣ್ಣಪುಟ್ಟರಸ್ತೆ ಹೊರತುಪಡಿಸಿ) ಮಹಾತ್ಮಾ ಗಾಂಧಿ ಹೆಸರು ಹೊಂದಿವೆ. ಇಷ್ಟೇ ಅಲ್ಲ, ವಿದೇಶಗಳಲ್ಲೂ 48 ಮಹಾತ್ಮಾ ಗಾಂಧಿ ರಸ್ತೆಗಳಿವೆ ಎಂಬುದು ತೀರಾ ವಿಶೇಷ.

17. ಅಮೆರಿಕ ನೋಡದ ಗಾಂಧಿ

ಗಾಂಧೀಜಿ ಅವರು ವಿಶ್ವದ ಹಲವು ದೇಶಗಳನ್ನು ಸುತ್ತಿದರೂ ಅಮೆರಿಕಕ್ಕೆ ಭೇಟಿ ನೀಡಲಿಲ್ಲ. ಆದರೆ ಅಮೆರಿಕದಲ್ಲಿ ಅವರು ಸಾಕಷ್ಟುಅಭಿಮಾನಿಗಳನ್ನು ಹೊಂದಿದ್ದರು. ಗಾಂಧೀಜಿ ಅವರ ಪ್ರಶಂಸಕ ಹೆನ್ರಿ ಫೋರ್ಡ್‌ ಅಮೆರಿಕದವರು. ಫೋರ್ಡ್‌ ಅವರಿಗೆ ಗಾಂಧೀಜಿ ಚರಕವೊಂದನ್ನು ಕಾಣಿಕೆಯಾಗಿ ಕಳಿಸಿದ್ದರು.

18. ಬ್ರಿಟನ್‌ನಲ್ಲಿ ವಿಫಲ, ಆಫ್ರಿಕದಲ್ಲಿ ಸಫಲ

ಬ್ಯಾರಿಸ್ಟರ್‌ ಪದವಿ ಪಡೆದು ಲಂಡನ್‌ನಲ್ಲಿ ವಕೀಲಿಕೆ ಆರಂಭಿಸಿದ ಮಹಾತ್ಮಾ ಗಾಂಧೀಜಿ, ಅಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲಿಲ್ಲ. ಅಪಾರ ಸಾಲ ಮಾಡಿ ಸಾಕಷ್ಟುಹಣಕಾಸು ತೊಂದರೆ ಅನುಭವಿಸಿದರು. ಆದರೆ ನಂತರ ದ.ಆಫ್ರಿಕಕ್ಕೆ ತೆರಳಿ ಯಶಸ್ವಿಯಾದರು. ದ. ಆಫ್ರಿಕದಲ್ಲಿ ಅಂದಿನ ಕಾಲದಲ್ಲೇ ಅವರು ಭಾರಿ ಪ್ರಮಾಣದ್ದಾದ 15 ಸಾವಿರ ಡಾಲರ್‌ವರೆಗೂ ಸಂಪಾದಿಸಿದರು

19. ವಿದೇಶದಲ್ಲಿ ಹ್ಯಾಟ್‌ಧಾರಿ, ಭಾರತದಲ್ಲಿ ಪಂಚೆಧಾರಿ

ಬ್ರಿಟನ್‌ ಹಾಗೂ ಆಫ್ರಿಕದಲ್ಲಿ ಕೆಲಸ ಮಾಡುವಾಗ ಗಾಂಧೀಜಿ ಅವರು ಸೂಟು, ರೇಷ್ಮೆ ಬಟ್ಟೆಗಳು, ಟೈ ಹಾಗೂ ಹ್ಯಾಟ್‌ ಧರಿಸುತ್ತಿದ್ದರು. ಕೋಲು ಹಿಡಿದುಕೊಳ್ಳುತ್ತಿದ್ದರು. ಆದರೆ ಭಾರತಕ್ಕೆ ಮರಳಿ ಯಾವಾಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದರೋ ಅವರು ಕೇವಲ ಪಂಚೆ ಹಾಗೂ ಚಿಕ್ಕ ಶಲ್ಯ ಧರಿಸಲು ಆರಂಭಿಸಿದರು.

20. ಕೇವಲ ಹಣ್ಣು, ಆಡಿನ ಹಾಲು ಸೇವನೆ!

ಜೀವಿಸಲು ತಿನ್ನಬೇಕೇ ಹೊರತು ತಿನ್ನಬೇಕೆಂದು ಜೀವಿಸಬಾರದು ಎಂಬುದು ಗಾಂಧೀಜಿ ನಿಲುವಾಗಿತ್ತು. ಎಷ್ಟುಕನಿಷ್ಠವೋ ಅಷ್ಟುಆಹಾರವನ್ನು ಅವರು ಸೇವಿಸುತ್ತಿದ್ದರು. ಹಲವಾರು ಬಾರಿ ಅವರು ಕೇವಲ ಹಣ್ಣು ತಿಂದು ಜೀವಿಸುತ್ತಿದ್ದರು. ಆಡಿನ ಹಾಲು ಕುಡಿಯುತ್ತಿದ್ದರು.

Follow Us:
Download App:
  • android
  • ios