Asianet Suvarna News Asianet Suvarna News

ಎಫ್'ಡಿಐ ಹೂಡಿಕೆಯಲ್ಲಿ ಭಾರತ ಮತ್ತಷ್ಟು ಉದಾರ

 ತನ್ನ ಪ್ರಸಕ್ತ ಅವಧಿಯ ಕಡೆಯ ಬಜೆಟ್ ಮಂಡನೆಗೆ ಸಜ್ಜಾಗುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ತನ್ನ ಉದ್ಯಮ ಸ್ನೇಹಿ ಇಮೇಜ್ ಅನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಹೆಚ್ಚಿನ ವಿದೇಶಿ ನೇರ ಬಂಡವಾಳ ಆಕರ್ಷಣೆಯ ನಿಟ್ಟಿನಲ್ಲಿ, ಎಫ್‌ಡಿಐ ನೀತಿಯನ್ನು ಮತ್ತಷ್ಟು ಉದಾರೀಕರಣಗೊಳಿಸಲು ನಿರ್ಧರಿಸಿದೆ.

India is Liberal to FDI

ನವದೆಹಲಿ (ಜ.11):  ತನ್ನ ಪ್ರಸಕ್ತ ಅವಧಿಯ ಕಡೆಯ ಬಜೆಟ್ ಮಂಡನೆಗೆ ಸಜ್ಜಾಗುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ತನ್ನ ಉದ್ಯಮ ಸ್ನೇಹಿ ಇಮೇಜ್ ಅನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಹೆಚ್ಚಿನ ವಿದೇಶಿ ನೇರ ಬಂಡವಾಳ ಆಕರ್ಷಣೆಯ ನಿಟ್ಟಿನಲ್ಲಿ, ಎಫ್‌ಡಿಐ ನೀತಿಯನ್ನು ಮತ್ತಷ್ಟು ಉದಾರೀಕರಣಗೊಳಿಸಲು ನಿರ್ಧರಿಸಿದೆ.

ಈ ಪ್ರಕಾರ ಏರ್ ಇಂಡಿಯಾದಲ್ಲಿ ವಿದೇಶಿ ವಿಮಾನಯಾನ ಕಂಪನಿಗಳು ಶೇ.೪೯ ಬಂಡವಾಳ ಹೂಡಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಸಿಂಗಲ್ ಬ್ರ್ಯಾಂಡ್ ರೀಟೇಲ್, ಕಟ್ಟಡ ನಿರ್ಮಾಣ ಹಾಗೂ ವಿದ್ಯುತ್ ವಿನಿಮಯ ಕೇಂದ್ರ ಸ್ಥಾಪನೆಯಲ್ಲಿನ ಎಫ್‌ಡಿಐ ನಿಯಮಗಳನ್ನೂ ಸಡಿಲಿಸಲಾಗಿದೆ.

ವೈದ್ಯಕೀಯ ಉಪಕರಣ ಮತ್ತು ವಿದೇಶಿ ಅನುದಾನ ಪಡೆಯುವ ಕಂಪೆನಿಗಳೊಂದಿಗೆ ಸಹಯೋಗ ಹೊಂದಿರುವ ಲೆಕ್ಕಪರಿಶೋಧನಾ ಸಂಸ್ಥೆಗಳಲ್ಲಿ  ಹೂಡಿಕೆ ಮಾಡಲೂ ಎಫ್‌'ಡಿಐ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ.ಪ್ರಧಾನಿ ನರೇಂದ್ರ

ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ತಿಂಗಳು ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಪ್ರಧಾನಿ ಮೋದಿ  ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಗಳು ಮಹತ್ವ ಪಡೆದಿವೆ. ಸರ್ಕಾರದ ಈ ನಿರ್ಧಾರವನ್ನು ಉದ್ಯಮ ವಲಯ ಸ್ವಾಗತಿಸಿದ್ದರೆ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು, ಎಫ್‌ಡಿಐಗೆ ಸಂಬಂಧಿಸಿದಂತೆ ತನ್ನ ಈ ಹಿಂದಿನ ನಿರ್ಧಾರದಿಂದ ಬಿಜೆಪಿ ಉಲ್ಟಾ ಹೊಡೆದಿದೆ ಎಂದು ವ್ಯಂಗ್ಯವಾಡಿವೆ.

2016 ಜೂನ್‌ನಲ್ಲಿ ಎಫ್‌ಡಿಐ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದ ಬಳಿಕ, ಎನ್‌ಡಿಎ ಸರ್ಕಾರ ಕೈಗೊಂಡ ಎರಡನೇ ಪ್ರಮುಖ ಮುಕ್ತ ನೀತಿ ಸುಧಾರಣೆ ಇದಾಗಿದೆ. ಈ ನಿರ್ಧಾರಗಳು ಭಾರತದಲ್ಲಿ ಹೂಡಿಕೆಯ ವಾತಾವರಣೆ ಸುಧಾರಿಸುವ ನಿಟ್ಟಿನಲ್ಲಿ ಸಹಾಯ ಮಾಡಲಿದೆ ಎಂದು ಕೈಗಾರಿಕಾ ನೀತಿ ಮತ್ತು ಪ್ರವರ್ತನಾ ಇಲಾಖೆ ಕಾರ್ಯದರ್ಶಿ ರಮೇಶ್ ಅಭಿಷೇಕ್ ತಿಳಿಸಿದ್ದಾರೆ.

ಸರ್ಕಾರಿ ಅನುಮತಿ ಮಾರ್ಗದ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳಲ್ಲಿ, ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆಯ ಮೂಲಕ ಅನುಮತಿ ಪಡೆಯುವ ಪ್ರಕ್ರಿಯೆ ಮುಂದುವರಿಯಲಿದೆ. ಈ ಹಿಂದೆ ಅರ್ಜಿಗಳು ಗೃಹ ಸಚಿವಾಲಯದ ಪ್ರಕ್ರಿಯೆಯ ಮೂಲಕ ಇತ್ಯರ್ಥಗೊಳ್ಳುತ್ತಿದ್ದವು.

 

Follow Us:
Download App:
  • android
  • ios