ಪುಲ್ವಾಮ :  ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಹೀಗಾಗಿ ಭಾರತದಿಂದ ಸರ್ಜಿಕಲ್ ಸ್ಟ್ರೈಕ್ ಅಥವಾ ಇನ್ನಾವುದೇ ರೀತಿಯ ದಾಳಿ ನಡೆಯಬಹುದು ಎಂಬ ಆತಂಕದಲ್ಲಿ ಪಾಕಿಸ್ತಾನದ ಸೇನೆಯು ಭಯೋತ್ಪಾದಕರನ್ನು ತಮ್ಮ ಕ್ಯಾಂಪ್‌ಗೆ ಕರೆಸಿಕೊಂಡು ರಕ್ಷಣೆ ನೀಡಿದೆ. 

ಎಲ್‌ಒಸಿ ಬಳಿ  ಪಾಕಿಸ್ತಾನದ ಕಡೆಗಿರುವ ಲಾಂಚ್ ಪ್ಯಾಡ್‌ಗಳಲ್ಲಿ ಸದಾ ಭಯೋತ್ಪಾದಕರು ಭಾರತದೊಳಗೆ ನುಸುಳಲು ಸಿದ್ಧರಾಗಿರುತ್ತಾರೆ. ಅವರಿಗೆ ಪಾಕಿಸ್ತಾನದ ಸೇನೆ ಹಾಗೂ ಗುಪ್ತಚರ ದಳ ಐಎಸ್‌ಐ ಬೆಂಗಾವಲಾಗಿ ನಿಂತಿರುತ್ತದೆ. ಇದೀಗ ಭಾರತೀಯ ಸೇನೆಯೊಳಗೆ  ರವಾನೆಯಾಗಿರುವ  ಅಧಿಕೃತ ಮಾಹಿತಿಯಲ್ಲಿ ಆ ಉಗ್ರರೆಲ್ಲ ಸದ್ಯಕ್ಕೆ ಪಾಕ್ ಸೇನೆಯ ಆಶ್ರಯಕ್ಕೆ ಓಡಿಹೋಗಿದ್ದಾರೆ ಎಂದು ಹೇಳಲಾಗಿದೆ. ಆತಂಕಕಾರಿ ಸಂಗತಿಯೆಂದರೆ, ಎಲ್‌ಒಸಿ ಬಳಿಯಿರುವ ಹಳೆಯ ಉಗ್ರರಿಗೆ 28 ದಿನದೊಳಗೆ ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ ರಿಫ್ರೆಶರ್ ಕೋರ್ಸ್ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ. 

ಲೆಫ್ಟಿನೆಂಟ್ ಕರ್ನಲ್ ಇಮ್ರಾನ್ ಎಂಬಾತ ಭಯೋತ್ಪಾದಕ ಸಂಘಟನೆ ಗಳಿಗೆ ಹೊಸತಾಗಿ ಸೇರುವ ಯುವಕರಿಗೆ ಹಾಗೂ ಹಳಬರಿಗೆ ಈ ಕೋರ್ಸ್ ನಡೆಸಲಿದ್ದಾನೆ. ಇನ್ನು, ಪ್ರತಿವರ್ಷ ಚಳಿಗಾಲದಲ್ಲಿ ಗಡಿ ಭಾಗದಲ್ಲಿರುವ 50-60 ಸೇನಾ ಕಾವಲು ಪೋಸ್ಟ್‌ಗಳನ್ನು ತೆರವುಗೊಳಿಸುತ್ತಿದ್ದ ಪಾಕಿಸ್ತಾನ ಈ ಬಾರಿ ಅವುಗಳನ್ನೆಲ್ಲ ಇನ್ನೂ ಅಲ್ಲೇ ಇರಿಸಿಕೊಂಡಿ ರುವುದು ಕುತೂಹಲ ಮೂಡಿಸಿದೆ. ಭಾರತದ ಕಡೆಯಿಂದ ದಾಳಿ ನಡೆಯಬಹುದು ಎಂಬ ನಿರೀಕ್ಷೆಯಿಂದಾಗಿಯೇ ಹೀಗೆ ಮಾಡಿದೆ ಎಂದು ಹೇಳಲಾಗುತ್ತಿದೆ.