Asianet Suvarna News Asianet Suvarna News

ಆರೆಸ್ಸೆಸ್'ಗೆ ರಾಹುಲ್ ಹೊಗಳಿಕೆ; ಸಿದ್ದು ಕಾಂಗ್ರೆಸ್ ಸೇರಿಸಿದ್ದು ಮಿತ್ರ ಪೀರನ್; ಸೋನಿಯಾ ಜೊತೆ ದೇವೇಗೌಡ ಮಾತನಾಡಿದ್ದೇನು?

ಸಿದ್ದರಾಮಯ್ಯ ಕಾಂಗ್ರೆಸ್ ಸೇರಲು ನಿಜವಾದ ಕಾರಣ ಯಾರು ಎಂಬ ಪ್ರಶ್ನೆ ಇದೀಗ ಕರ್ನಾಟಕದಲ್ಲಿ ಎದ್ದಿದೆ. ವಿಶ್ವನಾಥ್ ತಾವು ಕಾರಣ ಎಂದು ಹೇಳುತ್ತಿದ್ದರೆ ದೆಹಲಿಯಲ್ಲಿ ಕೇಳಿಬರುತ್ತಿರುವ ಹೆಸರು ಬೆಂಗಳೂರಿನ ಉದ್ಯಮಿ ಪೀರನ್ ಅವರದ್ದು. ಪೀರನ್, ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್'ಗೆ ಹೇಗೆ ಆಪ್ತಮಿತ್ರನೋ ಸಿದ್ದುಗೂ ಅಷ್ಟೇ ಕ್ಲೋಸ್ ಅಂತೆ.

india gate may 23

ನನ್ನನ್ನು ಕಾಂಗ್ರೆಸ್ಸಿಗೆ ಸೇರಿಸಿದ್ದು ಬೆಂಗಳೂರಿನ ಮುಸ್ಲಿಂ ಮಿತ್ರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ದೆಹಲಿಯ ಮಾರ್ದನಿ

ಸಿದ್ದೂನ ಕಾಂಗ್ರೆಸ್‌'ಗೆ ಸೇರ್ಸಿದ್ದು ಬೆಂಗಳೂರಿನ ಪೀರನ್‌

ಇಂಡಿಯಾ ಗೇಟ್‌ | ದೆಹಲಿಯಿಂದ ಕಂಡ ರಾಜಕಾರಣ

ಡಿಕೆಶಿ ಹೆಸರಿಗೆ ವೇಣುಗೋಪಾಲ್‌ ಒಲವು:
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮತ್ತು ತಂಡ ಒಮ್ಮೆ ಬೆಂಗಳೂರಿಗೆ ಹೋಗಿ ಬಂದ ನಂತರ ರಾಹುಲ್‌ ಗಾಂಧಿಗೆ ನೀಡಿರುವ ವರದಿಯಲ್ಲಿ ‘ಡಿ.ಕೆ.ಶಿವಕುಮಾರ್‌ ಈಗ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ​ರಾದರೆ ಪಕ್ಷದ ಸಂಘಟನೆ ಸರಾಗ ಮತ್ತು ಸುಲಭ' ಎಂದು ಹೇಳಿ​ದ್ದಾರೆ ಎಂಬ ವದಂತಿ ಇಲ್ಲಿ ದಟ್ಟವಾಗಿದೆ. ಹಾಗೆಯೇ, ಡಿಕೆಶಿ ಹೆಸರಿಗೆ ಮುಖ್ಯಮಂತ್ರಿ ಮತ್ತು ಇತರ ನಾಯಕರ ವಿರೋಧವನ್ನೂ ಗಮನಕ್ಕೆ ತಂದಿದ್ದಾರಂತೆ. ಮುಖ್ಯ​ಮಂತ್ರಿ​​​​ಗಳು ಮಾತ್ರ ಪಾಟೀಲ್‌ ದ್ವಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡು​​ವಂತೆ ಹೇಳಿದ್ದಾರಂತೆ. ಕೆ.ಎಚ್‌.ಮುನಿಯಪ್ಪ ದಲಿತ ಲೆಫ್ಟ್‌ ಎಂದು ಎಷ್ಟೇ ಹೇಳಿಕೊಂಡರೂ ಹೈಕಮಾಂಡ್‌ ಕನ್ವಿನ್ಸ್‌ ಆದ ಹಾಗೆ ಇಲ್ಲ. ಹೀಗಾಗಿ ತಿಂಗಳ ಅಂತ್ಯದಲ್ಲಿ ರಾಹುಲ್‌ ಒಪ್ಪಿಗೆ ಕೊಟ್ಟರೆ ಡಿಕೆಶಿ ಹೆಸರನ್ನು ಘೋಷಿಸುವ ಬಗ್ಗೆ ವೇಣುಗೋಪಾಲ್‌ ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ಹೇಳು​ತ್ತಿವೆ. ಅಂದ ಹಾಗೆ ಮೇ 30ರಂದು ಹೆಸರು ಘೋಷಿಸುವ ಮೊದಲು 28, 29ಕ್ಕೆ ಮುಖ್ಯ​ಮಂತ್ರಿ ಸೇರಿ ಕರ್ನಾಟಕದ ಕಾಂಗ್ರೆಸ್‌ ಸಮನ್ವಯ ಸಮಿತಿ ಸದಸ್ಯ​​ರನ್ನು ದೆಹಲಿಗೆ ಕರೆಸಿಕೊಂಡು ನಂತರ ಘೋಷಣೆ ಮಾಡುವ ಚಿಂತನೆ​ಯ​ನ್ನೂ ವೇಣುಗೋಪಾಲ್‌ ನಡೆಸಿದ್ದಾರಂತೆ. ಆದರೆ, ಮುಖ್ಯ​​​ಮಂತ್ರಿಗಳು ಮತ್ತು ಖರ್ಗೆ ಸಾಹೇಬರು ಡಿಕೆಶಿ ಹೆಸರಿಗೆ ವಿರೋಧ ಮಾಡಿ ಎಷ್ಟರಮಟ್ಟಿಗೆ ಪಟ್ಟು ಹಿಡಿಯಬಹುದು ಎನ್ನು​ವು​ದ​ರ ಮೇಲೆ ಅಧ್ಯಕ್ಷರ ಆಯ್ಕೆ ನಿಂತಂತಿದೆ. ಒಂದು ವೇಳೆ ಡಿಕೆಶಿ ಅವರನ್ನು ಅಧ್ಯಕ್ಷ​ರನ್ನಾಗಿ ಮಾಡಿದ ನಂತರ ಮೋದಿ ಸರ್ಕಾರ ಸಿಬಿಐ ಮತ್ತು ಇಡಿ​ಗಳ​ನ್ನು ಛೂ ಬಿಟ್ಟರೆ ಎಂಬ ಆತಂಕವೂ ಹೈಕಮಾಂಡ್‌ ನಾಯಕರಿಂದಲೇ ಕೇಳಿಬರುತ್ತಿದೆ.

ಡಿಕೆಶಿಗೆ ಕೇರಳ ಕನೆಕ್ಷನ್‌ ಅನುಕೂಲ:
ಕೇರಳದ ಕಾಂಗ್ರೆಸ್‌ ನಾಯಕರು ಹೇಳುವ ಪ್ರಕಾರ ಡಿ.ಕೆ.ಶಿವಕುಮಾರ್‌ ರಾಜಕೀಯವಾಗಿ ಬೆಳೆಯಲು ಮುಖ್ಯವಾಗಿ ವಿಲಾಸ್‌ ರಾವ್‌ ದೇಶಮುಖ್‌ ಮತ್ತು ರಮೇಶ್‌ ಚೆನ್ನಿತಲಾ ಮುಖ್ಯವಾಗಿ ಕಾರಣವಂತೆ. ಮುಖ್ಯವಾಗಿ ಬಂಗಾರಪ್ಪ ಸಂಪುಟದಲ್ಲಿ ಬಂದೀಖಾನೆ ಸಚಿವರಾಗಿ ವಿವಾದ ಸೃಷ್ಟಿಸಿದ್ದರೂ ಕೂಡ ಕೃಷ್ಣ ಸಂಪುಟದಲ್ಲಿ ಸೇರ್ಪಡೆಯಾಗಲು ಆಗ ಸೋನಿಯಾರಿಗೆ ಅತ್ಯಂತ ಆತ್ಮೀಯರಾಗಿದ್ದ ರಮೇಶ್‌ ಚೆನ್ನಿತಲಾ ಕಾರಣ​​ವಂತೆ. ಈಗ ರಾಜ್ಯ ಉಸ್ತುವಾರಿಯಾಗಿರುವ ವೇಣುಗೋಪಾಲ್‌ ಒಂದು ಕಾಲದಲ್ಲಿ ಕೆ.ಕರುಣಾಕರನ್‌ ಶಿಷ್ಯರಾಗಿ ನಂತರ ಹೊರ ಬಿದ್ದು ರಮೇಶ್‌ ಚೆನ್ನಿತಲಾ ಹಿಂದೆ ಬಂದು ಥರ್ಡ್‌ ಗ್ರೂಪ್‌ ಸ್ಥಾಪಿಸಿದವರು. ಒಂದು ಅರ್ಥದಲ್ಲಿ ವೇಣು​ಗೋಪಾಲ್‌ ಮತ್ತು ಡಿಕೆಶಿ ಇಬ್ಬರೂ ಕೂಡ ರಮೇಶ್‌ ಚೆನ್ನಿತಲಾ ಶಿಷ್ಯ​ರಾ​ಗಿಯೇ ಬೆಳೆದವರು. ಹೀಗಾಗಿ ರಾಜ್ಯದ ನಾಯಕರ ವಿರೋಧ ಇದ್ದರೂ ಡಿಕೆಶಿಗೆ ಹಳೆಯ ಕೇರಳ ಕನೆಕ್ಷನ್‌ ಸ್ವಲ್ಪ ಸಹಾಯ ಮಾಡುವಂತೆ ಕಾಣುತ್ತಿದೆ. 

ಆರ್‌ಎಸ್‌'ಎಸ್‌'ಸೆ ಸೀಖೋ:
ಹೊರಗೆ ಮಾತ್ರ ಆರ್‌ಎಸ್‌ಎಸ್‌ ಕೋಮುವಾದಿ ಎಂದೆಲ್ಲ ಟೀಕಿಸುವ ರಾಹುಲ್‌ ಪಕ್ಷದ ಆಂತರಿಕ ಸಭೆಗಳಲ್ಲಿ ಮಾತ್ರ ಸಂಘ ಶೈಲಿಯನ್ನು ವಿಪರೀತವಾಗಿ ಹೊಗಳುತ್ತಾರಂತೆ. ಕರ್ನಾಟಕ​ದಿಂದ ಬಂದು ರಾಹುಲ್‌'ಗಾಂಧಿ ಅವರಿಗೆ ಗ್ರೌಂಡ್‌ ರಿಪೋರ್ಟ್‌ ಬಗ್ಗೆ ಮೌಖಿಕ ವರದಿ ನೀಡಲು ಹೋಗಿದ್ದ ವೇಣುಗೋಪಾಲ್'ಗೆ ರಾಹುಲ್‌ ‘ಆರ್‌ಎಸ್‌ಎಸ್‌ ಶೈಲಿ ಅನುಸರಿಸಿ ಎಂದು ಹೇಳಿದರಂತೆ. ಅವರು ನಾನ್‌ ಪೊಲಿಟಿಕಲ್‌ ಜನರನ್ನು ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಿಜೆಪಿಗೆ ತರುತ್ತಾರೆ. ನಮ್ಮ ಪಕ್ಷದ ಇಮೇಜ್‌ ಬೆಳೆಯಬೇಕಾದರೆ ನಾವು ಸ್ವಲ್ಪ ಹಾಗೆಯೇ ಮಾಡಬೇಕು. ಬಿಜೆಪಿ ಮತ್ತು ಮೋದಿಗೆ ಆರ್‌ಎಸ್‌ಎಸ್‌ ಕೇಡರ್‌ ಇರುವುದರಿಂದ ಕೆಳಗಿನಿಂದ ಫೀಡ್‌'ಬ್ಯಾಕ್‌ ತೆಗೆದು​ಕೊಳ್ಳು​ವುದು ಸುಲಭ. ನಾವು ದಿಲ್ಲಿಯಲ್ಲಿ ಕುಳಿತುಕೊಂಡೆ ಎಲ್ಲ ರಣ​ತಂತ್ರ ಹೆಣೆಯುತ್ತೇವೆ. ನಮ್ಮ ಜಿಲ್ಲಾ ನಾಯಕರೊಂದಿಗೂ ಮಾತ​​ನಾ​ಡ​ಲು ಪುರುಸೊತ್ತಿಲ್ಲ' ಎಂದು ರಾಹುಲ್‌ ಹೇಳಿದ ನಂತರವೇ ವೇಣು​​​ಗೋಪಾಲ್‌ ಜಿಲ್ಲಾ ಅಧ್ಯಕ್ಷರ ಸಭೆ ಕರೆಯಲು ತೀರ್ಮಾನಿಸಿದರಂತೆ. 

ಸಿದ್ದು ಸೇರಿಸಿದ್ದು ಪೀರನ್‌ ಎಂಬ ಮಿತ್ರ:
ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಲು ನಿಜವಾದ ಕಾರಣ ಬೆಂಗಳೂರಿನ ಉದ್ಯಮಿ ಪೀರನ್‌'ರಂತೆ. ಈ ಪೀರನ್‌ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌'ಗೆ ಹೇಗೆ ಆಪ್ತ ಮಿತ್ರನೋ ಸಿದ್ದ​ರಾಮ​ಯ್ಯ ಅವರಿಗೂ ಅಷ್ಟೇ ಕ್ಲೋಸ್‌ ಅಂತೆ. ದೇವೇಗೌಡರ ಜೊತೆ ಜಗಳ​ವಾಡಿ ಜೆಡಿಎಸ್‌'ನಿಂದ ಹೊರಬಂದಾಗ ಕಷ್ಟದಲ್ಲಿದ್ದ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆದುಕೊಂಡು ಬಂದು ಅಹ್ಮದ್‌ ಪಟೇಲ್‌'ಗೆ ಪರಿಚಯ ಮಾಡಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಸಿದವರೇ ಪೀರನ್‌ ಅಂತೆ. ಮೊದಲನೇ ಭೇಟಿಯಲ್ಲಿ 2 ಗಂಟೆ ಮಾತನಾಡಿದ ಅಹ್ಮದ್‌ ಭಾಯಿ ಎರಡನೇ ಭೇಟಿಯಲ್ಲಿ ಸೋನಿಯಾ ಮೀಟಿಂಗ್‌ ಮಾಡಿಸಿಯೇಬಿಟ್ಟರಂತೆ. ಇಷ್ಟೆಲ್ಲಾ ಗೊತ್ತಾದ ಮೇಲೆ ಎಚ್‌.ವಿಶ್ವನಾಥ್‌ ಮತ್ತು ಎಚ್‌.ಎಂ.ರೇವಣ್ಣ ಏನು ಹೇಳುತಾರೋ!

ದೇವೇಗೌಡ ಸ್ಪೀಕಿಂಗ್‌:
ಇತ್ತೀಚಿಗೆ ದೇವೇಗೌಡರು ದೆಹಲಿಗೆ ಬಂದಾಗ ಮಧ್ಯಾಹ್ನ 3.30ಕ್ಕೆ ಸೋನಿಯಾ ಸೆಕ್ರೆಟರಿ ಮಾಧವನ್‌ ಫೋನ್‌ ಬಂತಂತೆ. ಪಾರ್ಲಿಮೆಂಟ್‌ ಸಭೆಗೆ ಹೋಗುವ ಗಡಿಬಿಡಿಯಲ್ಲಿದ್ದ ದೇವೇಗೌಡರು ಸಂಜೆ 6 ಗಂಟೆಗೆ ಕಾಲ್‌ ಮಾಡಿ ಮಾತನಾಡೋಣ ಎಂದರಂತೆ. ಸಂಜೆ ಲೈನ್‌ ಮೇಲೆ ಬಂದ ಸೋನಿಯಾ ಗಾಂಧಿ ದೇವೇಗೌಡರ ಜೊತೆ ಬರೋಬ್ಬರಿ 20 ನಿಮಿಷ ಮಾತನಾಡಿದರಂತೆ. ಸೋನಿಯಾ ಅವರು ರಾಷ್ಟ್ರಪತಿ ಚುನಾವಣೆಗೆ ಸಹಕಾರ ಕೇಳಲು ಕಾಲ್‌ ಮಾಡಿದ್ದರೂ ಕೂಡ ಮೊದಲ 10 ನಿಮಿಷ ಕರ್ನಾಟಕದ ಸ್ಥಿತಿಗತಿಯನ್ನೇ ವಿವರಿಸಿದರಂತೆ. ‘ಮೇಡಂ ಕರ್ನಾಟಕದಲ್ಲಿ ಬಿಜೆಪಿ ನಮ್ಮನ್ನು ಫಿನಿಶ್‌ ಮಾಡಲು ಎಲ್ಲ ತಂತ್ರ ಮಾಡುತ್ತಿದೆ. ಆದರೆ ಐ ವಿಲ್‌ ಫೈಟ್‌ ಇಟ್‌ ಔಟ್‌' ಎಂದರಂತೆ. ದೇವೇಗೌಡರು ಹೇಳಿದ್ದೆಲ್ಲವನ್ನು ಕೇಳಿಸಿಕೊಂಡ ಸೋನಿಯಾ ಕರ್ನಾ​ಟ​ಕದ ಬಗ್ಗೆ ಒಂದಕ್ಷರವನ್ನೂ ಮಾತನಾಡದೆ ರಾಷ್ಟ್ರಪತಿ ಚುನಾ​ವಣೆಗೆ ನೀವು ಸೆಕ್ಯುಲರ್‌ ಫ್ರಂಟ್‌ ಜೊತೆ ನಿಲ್ಲಬೇಕು ಎಂದು ಕೇಳಿದ್ದಕ್ಕೆ ಗೌಡರು ‘ಆಫ್‌ ಕೋರ್ಸ್‌' ಎಂದು ಹೇಳಿ ಫೋನ್‌ ಇಟ್ಟರಂತೆ. 

ಗಾಂಧಿ ಕುಟುಂಬಕ್ಕಿಲ್ಲವೇ ಪ್ರೊಟೋಕಾಲ್?
ಕಳೆದ ವಾರ ಕಾಂಗ್ರೆಸ್‌ ಹಿರಿಯ ನಾಯಕ ಆನಂದ್‌ ಶರ್ಮ ಬರೆದಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಮತ್ತು ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಬಂದು ಆಸೀನರಾಗಿ ಹತ್ತು ನಿಮಿಷ ಕಳೆದ ಮೇಲೆ ಬಂದರು ರಾಹುಲ್‌ ಗಾಂಧಿ. ಪ್ರೊಟೋಕಾಲ್‌ ಪ್ರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕೂರುವವರು ಹತ್ತು ನಿಮಿಷ ಮುಂಚೆಯೇ ಬರಬೇಕು. ಆದರೆ ಗಾಂಧಿ ಕುಟುಂಬದ ಕುಡಿ ರಾಹುಲ್‌'ಗೆ ಇವೆಲ್ಲ ನಿಯಮಗಳು ಅನ್ವಯಿಸುವುದಿಲ್ಲ ಬಿಡಿ. ಅಂದಹಾಗೆ ಕಾರ್ಯಕ್ರಮಕ್ಕೆ ತಡವಾಗಿ ಬಂದ ರಾಹುಲ್‌ ಪಕ್ಷದ ಉದ್ಧಾರ ಮಾಡುವುದು ಹೇಗೆ? ಅವತ್ತು ನಾವು ಮಾತನಾಡುವಾಗ ರಾಹುಲ್‌ ತಮ್ಮ ನಾಯಿಯ ಜೊತೆ ಆಡವಾಡುತ್ತಿದ್ದರು. ಇವತ್ತು ಹೀಗೆ ಮಾಡುತ್ತಿದ್ದಾರೆ. ಏನು ಮಾಡುವುದು ಎಂದು ಯುವ ನಾಯಕರ ಜೊತೆ ಗಹನವಾಗಿ ಚರ್ಚೆ ನಡೆಸುತ್ತಿದ್ದರಂತೆ.

ಸಂಘಂ ಶರಣಂ ಗಚ್ಛಾಮಿ:
ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮತ್ತು ಉದ್ಯಮಿ ರತನ್‌ ಟಾಟಾ ಅವರ ಆರ್‌ಎಸ್‌ಎಸ್‌ ಜೊತೆಗಿನ ಬಾಂಧವ್ಯ ಹೆಚ್ಚು ಗಮನ ಸೆಳೆಯುತ್ತಿದೆ. ಕೆಲ ತಿಂಗಳ ಹಿಂದೆ ವಿಶೇಷ ವಿಮಾನದಲ್ಲಿ ನಾಗಪುರಕ್ಕೆ ಹೋದ ರತನ್‌ ಟಾಟಾ ಕೇವಲ ಸರ ಸಂಘಚಾಲಕ ಮೋಹನ್‌ ಭಾಗವತ್‌ ಜೊತೆಗೆ ಭೇಟಿಯಾಗಲು ಮಾತ್ರ ಹೋಗಿದ್ದರಂತೆ. ಇನ್ನು ಬಚ್ಚನ್‌ ತಮ್ಮ ನಿವಾಸಕ್ಕೆ ಭಾಗವತ್‌ ಅವರನ್ನು ಊಟಕ್ಕೆ ಕರೆದು ಗಂಟೆ​ಗಟ್ಟಲೇ ಮಾತನಾಡಿದರಂತೆ. ದೊಡ್ಡವರಿಗೆ ಯಾವ ಚಾವಿ ತಿರುಗಿಸಿದರೆ ಯಾವ ಬಾಗಿಲು ತೆರೆಯುತ್ತದೆ ಎಂದು ಚೆನ್ನಾಗಿ ಗೊತ್ತಿರುತ್ತೆ ಬಿಡಿ. 

ಬಾಸ್‌ ‘ಕೈ' ಮಾತ್ರ:
ಕೇದಾರ್‌'ನಾಥ್‌'ಗೆ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಮಂದಿರದಿಂದ ಹೊರಗಡೆ ಬಂದು ನೆರೆದಿದ್ದ ಜನರತ್ತ ಕೈ ಬೀಸಲು ಆರಂಭಿಸಿ​ದರಂತೆ. ಆಗ ಪಕ್ಕದಲ್ಲಿಯೇ ಇದ್ದ ಉತ್ತರಾಖಂಡ್‌ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌, ಬಿಜೆಪಿ ಉಸ್ತುವಾರಿ ಶ್ಯಾಮ್‌ ಜಾಜು ಮತ್ತು ಇತರ ಮಂತ್ರಿಗಳು ಕೂಡ ಮೋದಿ ಜೊತೆಗೆ ಜನರತ್ತ ಕೈ ಬೀಸಲು ಆರಂಭಿಸಿದರಂತೆ. ಆಗ ದೌಡಾಯಿಸಿದ ಪ್ರಧಾನಿ ಭದ್ರತೆ ನೋಡಿಕೊಳ್ಳುವ ಎಸ್‌'ಪಿಜಿ ಅಧಿಕಾರಿಗಳು ಕೇವಲ ಪ್ರಧಾನಿ ಮಾತ್ರ ಕೈ ಬೀಸಬೇಕು ನೀವು ಸುಮ್ಮನಿರಿ ಎಂದು ಸೂಚಿಸಿದರಂತೆ. ಆಗ ನಾಯಕರು ಎತ್ತಿದ ಕೈ ಕೆಳಗಿಳಿಸಿ ಪೆಚ್ಚು ಮೋರೆ ಹಾಕಿಕೊಂಡು ಜನ ‘ಮೋದಿ, ಮೋದಿ, ಮೋದಿ...' ಎನ್ನುವುದನ್ನು ನೋಡುತ್ತಿದ್ದರಂತೆ. 

ಪ್ರಕಾಶ್‌ ಅಲೆದಾಟ:
ಪರಮೇಶ್ವರ್‌ ಆಪ್ತನಾಗಿದ್ದ ಆಸ್ಪ್ರೇಲಿಯಾ ಪ್ರಕಾಶ್‌ ಈಗ ದಿನವೂ ಚಾಣಕ್ಯಪುರಿಯಲ್ಲಿರುವ ಡೆಲ್ಲಿ ಪೊಲೀಸ್‌ ಕ್ರೈಂ ಬ್ರಾಂಚ್‌ಗೆ ಅಲೆಯುತ್ತಿದ್ದಾರೆ. ಟಿಟಿವಿ ದಿನಕರನ್‌ಗೆ ಹವಾಲಾ ಹಣ ಒದಗಿಸಿದ ಬಗ್ಗೆ ಪ್ರಕಾಶ್‌ರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರಂತೆ. ಈ ಮಧ್ಯೆ ಮಲೇಶಿಯಾಕ್ಕೆ ಹೊರಟಿದ್ದ ಪ್ರಕಾಶ್‌'ರನ್ನು ವಿಮಾನ ನಿಲ್ದಾಣದಲ್ಲಿ ಪೊಲೀಸರು ಲುಕ್‌ ಔಟ್‌ ನೊಟೀಸ್‌ ಕಾರಣದಿಂದ ತಡೆದು ನಿಲ್ಲಿಸಿ ವಾಪಸ್‌ ಕಳುಹಿಸಿದರಂತೆ. ಶಶಿಕಲಾ ನಟರಾಜನ್‌ ಪರಪ್ಪನ ಅಗ್ರಹಾರಕ್ಕೆ ಬಂದಿಯಾಗಿ ಬಂದಾಗ ಗೃಹ ಇಲಾಖೆಯಲ್ಲಿ ಪ್ರಭಾವಿ ಎಂದು ಆರಂಭವಾದ ಟಿಟಿವಿ ದಿನಕರನ್‌ ಒಡನಾಟ ಈಗ ಪೊಲೀಸ್‌ ಠಾಣೆ ಅಲೆಯುವಂತೆ ಮಾಡಿದೆ ಎಂದು ಗೋಗರೆಯುತ್ತಿ​ದ್ದಾ​ರೆ ಪ್ರಕಾಶ್‌. ಆದರೆ ಪರಮೇಶ್ವರ್‌ ಜೊತೆಗಿನ ಸಾಮಿಪ್ಯ ದೆಹಲಿ ಪೊಲೀಸರು ಬೆನ್ನು ಹತ್ತಿದ ನಂತರ ಬೇಕೆಂದೇ ಕೆಟ್ಟಿದೆ ಎಂದು ಹೇಳಲಾಯಿತೋ ಅಥವಾ ಮೊದಲೇ ಕೆಟ್ಟಿತ್ತೋ ಎನ್ನುವುದು ಕೂಡ ಕುತೂಹಲವೇ. 

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌ 

Follow Us:
Download App:
  • android
  • ios