Asianet Suvarna News Asianet Suvarna News

ಇಂಡಿಯಾ ಗೇಟ್: ಇಂಥ ಆಟ ಹೆಚ್ಚು ದಿನ ನಡೆಯಲ್ಲ - ಅಮಿತ್ ಶಾ

ಸಾಯಲಿ ಬಿಡಿ ಎಂದು ಮೋದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಒಂದೇ ವಾರದಲ್ಲಿ ರಾಯರಡ್ಡಿ ಅವರು ಮೋದಿ ಜತೆಗೇ ವೇದಿಕೆ ಹಂಚಿಕೊಳ್ಳಬೇಕಾಗಿ ಬಂದಿದ್ದು ವಿಚಿತ್ರ ಸನ್ನಿವೇಶ. ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡುವಾಗ ರಾಯರಡ್ಡಿ ಮೋದಿ ಕಿವಿಯಲ್ಲಿ ಕ್ಷಮೆ ಕೇಳುವಂತೆ ಏನೋ ಗುನುಗುತ್ತಿದ್ದರು.

india gate 2017 may 2

ಇಂಡಿಯಾ ಗೇಟ್‌ | ದೆಹಲಿಯಿಂದ ಕಂಡ ರಾಜಕಾರಣ

ಕ್ಯಾ ಚಲ್‌ ರಹಾ ಹೈ ಕರ್ನಾಟಕ ಮೇ:
‘ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಹದ್ದು ಮೀರಿ ವರ್ತಿಸುತ್ತಿದ್ದು, ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಬಿಜೆಪಿ ಹೈಕಮಾಂಡ್‌ ತುಂಬಾ ದುರ್ಬಲ ಎಂಬ ಸಂದೇಶ ಹೋಗುತ್ತದೆ. ಈಶ್ವರಪ್ಪರನ್ನು ಸುಮ್ಮನೆ ಕೂರಿಸದಿದ್ದರೆ ಭಿನ್ನಮತ ತಡೆಯುವುದು ಅಸಾಧ್ಯವಾಗುತ್ತದೆ' ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ವರದಿ ನೀಡಿದ್ದಾರೆ. ಈಶ್ವರಪ್ಪ ನಡೆಸಿರುವ ಭಿನ್ನರ ಸಭೆಗೆ ಸ್ಥಳೀಯ ಆರ್‌ಎಸ್‌ಎಸ್‌ ಮತ್ತು ಪಕ್ಷದ ಜಗಳಗಳ ವಿಚಾರದಲ್ಲಿ ತಟಸ್ಥರಾಗಿರುವ ಕೇಂದ್ರ ಸಚಿವ ಅನಂತ್‌'ಕುಮಾರ್‌, ಸದಾನಂದ ಗೌಡರು, ಜಗದೀಶ್‌ ಶೆಟ್ಟರ್‌ ಮತ್ತು ಆರ್‌.ಅಶೋಕ ಹೀಗೆ ಯಾವ ಕೋರ್‌ ಕಮಿಟಿ ನಾಯಕರದೂ ಒಪ್ಪಿಗೆ ಇಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸಂಜೆ ಅಶೋಕ ರೋಡ್‌ನಲ್ಲಿನ ಬಿಜೆಪಿ ಕೇಂದ್ರೀಯ ಕಾರ್ಯಾಲಯ​ದಲ್ಲಿ ಅಮಿತ್‌ ಶಾರನ್ನು ಭೇಟಿಯಾಗಿ ಮೌಖಿಕವಾಗಿ ರಾಜ್ಯದ ಬೆಳವಣಿಗೆ​ಗಳನ್ನು ವಿವರಿಸಿರುವ ಮುರಳೀಧರ ರಾವ್‌, ಈಶ್ವರಪ್ಪ​ನವರು ನಡೆದುಕೊಳ್ಳುತ್ತಿರುವ ರೀತಿ ಪಕ್ಷಕ್ಕೆ ವಿಪರೀತ ಮುಜುಗರ ತರು​ತ್ತಿದೆ ಎಂದು ವಿವರಿಸಿದ್ದಾರೆ. ಆದರೆ ಈಶ್ವರಪ್ಪನವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಶಾ ಕೇಳಿದಾಗ ಮುರಳೀಧರ ರಾವ್‌ ಶಿಸ್ತು ಕ್ರಮ ತೆಗೆದುಕೊಳ್ಳುವುದಕ್ಕಿಂತ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಅವರನ್ನು ತೆಗೆದು ಪಕ್ಷದ ಇತರ ನಾಯಕರಿಗೆ ಸಂದೇಶ ಕಳುಹಿಸುವುದು ಸೂಕ್ತ ಎಂದು ಹೇಳಿದ್ದಾರೆ. ಆದರೆ ಅಮಿತ್‌ ಶಾ, ‘ನೋಡೋಣ. ನಾನು ಸಂಘ ಸೇರಿ​ ಎಲ್ಲರೊಂದಿಗೆ ಮಾತನಾಡುತ್ತೇನೆ' ಎಂದಷ್ಟೇ ಹೇಳಿದ್ದಾರೆ. ಅಂದ ಹಾಗೆ ಭಾನುವಾರ ಸಂಜೆ ಪಕ್ಷದ ಕಾರ್ಯಾಲಯದಲ್ಲಿ ತಮ್ಮನ್ನು ಭೇಟಿ​​ಯಾದ ಕರ್ನಾಟಕದ ಹಿರಿಯ ಸಂಸದರೊಬ್ಬರಿಗೆ ಅಮಿತ್‌ ಶಾ ‘ಕ್ಯಾ ಚಲ್‌ ರಹಾ ಹೈ ಕರ್ನಾಟಕ ಮೇ' (ಕರ್ನಾಟಕದಲ್ಲಿ ಏನಾಗ್ತಿದೆ) ಎಂದು ಕೇಳಿದರಂತೆ. ಅದಕ್ಕೆ ಸಂಸದರು ‘ಆಪ್‌ ಕೋ ಹಿ ಸಬ್‌ ಪತಾ ಹೈ ನಾ ಸಾಹೆಬ್‌' (ಸಾಹೇಬ್ರೆ, ನಿಮಗೇ ಎಲ್ಲಾ ಗೊತ್ತಲ್ಲ) ಎಂದು ಹೇಳಿ​ದಾಗ ಶಾ ‘ಐಸಿ ಚೀಜೆ ಬಹುತ್‌ ದಿನ್‌ ನಹಿ ಚಲೇಗಿ, ಪೂರಾ ದೇಶ್‌ ಬಿಜೆಪಿ ಕೆ ಸಾಥ್‌ ಖಡಾ ಹೈ, ಲೇಕಿನ್‌ ಕರ್ನಾಟಕ ಕೆ ನೇತಾ ಜಬ್‌ ದೇಖೊ ತಬ್‌ ಝಗಡ್ತೆ ರೆಹತೇ ಹೈ' (ಈ ರೀತಿಯ ಆಟ ಹೆಚ್ಚು ದಿನ ನಡೆ​ಯೋದಿಲ್ಲ. ಇಡೀ ದೇಶ ಬಿಜೆಪಿ ಜೊತೆ ನಿಂತಿದೆ. ಆದರೆ ಕರ್ನಾ​ಟಕದ ನಾಯಕರು ಯಾವಾಗಲೂ ಜಗಳ ಆಡ್ತಿರ್ತಾರೆ) ಎಂದು ಹೇಳಿದರಂತೆ. 

ಸಂತೋಷ್‌ ಬಗ್ಗೆ ಮಾತು ಬೇಡ:
ಭಿನ್ನರ ಸಭೆ ನಡೆಸಿದ ದಿನ ಭಾರೀ ಕೋಪದಲ್ಲಿ ಸಂಘ ಪ್ರಚಾರಕ ಸಂತೋಷ್‌ ಜಿ ಬಗ್ಗೆ ಮಾತನಾಡಿದ್ದಕ್ಕೆ ಯಡಿಯೂರಪ್ಪನವರನ್ನು ಆರ್‌ಎಸ್‌ಎಸ್‌ ಪ್ರಮುಖರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ‘ಸಂಘ ಪ್ರಚಾರಕರ ಹೆಸರನ್ನು ಬಹಿರಂಗವಾಗಿ ತೆಗೆದುಕೊಳ್ಳುವುದು ಸರಿಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಮರುದಿನದಿಂದ ಸಂತೋಷ್‌ ಬಗ್ಗೆ ಏನನ್ನೂ ಮಾತನಾಡಲು ತಯಾರಾಗದ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಅವರಿಗೆ ದೂರವಾಣಿ ಕರೆ ಮಾಡಿ ‘ಸಂತೋಷ್‌ ಅವರ ಕೇಂದ್ರವನ್ನು ಬೆಂಗಳೂರಿನಿಂದ ಚೆನ್ನೈಗೆ ಬದಲಾಯಿಸಿ. 2018ರ ಚುನಾವಣೆವರೆಗೆ ಅವರನ್ನು ಕರ್ನಾಟಕಕ್ಕೇ ಬರದಂತೆ ನಿರ್ಬಂಧ ವಿಧಿಸಿ' ಎಂದು ಕೇಳಿಕೊಂಡಿದ್ದಾರೆ. ಭಿನ್ನರ ಸಭೆ ನಡೆದಾಗಿನಿಂದ ಯಡಿಯೂರಪ್ಪ ಸಂಘದ ಅಷ್ಟೂಪ್ರಮುಖರಿಗೆ ಸಂತೋಷ್‌ ವಿರುದ್ಧ ದೂರಿನ ಮೇಲೆ ದೂರು ನೀಡಿದ್ದಾರಂತೆ. 

ಬಿಜೆಪಿಗೆ ಉಸ್ತುವಾರಿಯೇ ಸಮಸ್ಯೆ?
ಮುರಳೀಧರರಾವ್‌ ಈಶ್ವರಪ್ಪನವರ ವಿರುದ್ಧ ವರದಿ ನೀಡಿದರೆ ಅತ್ತ ಈಶ್ವರಪ್ಪನವರು ಕೂಡ ತನ್ನ ಬೆಂಬಲಿಗರ ಮೂಲಕ ಅಮಿತ್‌ ಶಾ, ರಾಮಲಾಲ್‌, ಸಂಘದ ನಾಯಕರಿಗೆ ಮುರಳೀಧರರಾವ್‌ ವಿರುದ್ಧ ಪ್ರತಿ ದೂರು ನೀಡಿದ್ದು, ಉಸ್ತುವಾರಿಯನ್ನು ಮೊದಲು ಬದ​ಲಾ​ಯಿಸಿ. ಇವರು ಯಡಿಯೂರಪ್ಪನವರ ಪಕ್ಷಪಾತಿ ಎಂದು ಹೇಳಿಸಿ​ದ್ದಾ​ರಂತೆ. ಫೆಬ್ರವರಿ ಹತ್ತರವರೆಗೆ ಪದಾಧಿಕಾರಿ ಆಯ್ಕೆ ಬದಲಾವಣೆಗೆ ಸಮಿತಿ ಸಭೆ ಸೇರಬೇಕು ಎಂದು ತೀರ್ಮಾನಿಸಿದ್ದರೂ ಕೂಡ ಒಮ್ಮೆ​ಯೂ ಸಭೆ ಸೇರಿಲ್ಲ. ಮುರಳೀಧರರಾವ್‌ ಬಿಎಸ್‌'ವೈ ಹೇಳಿ ಕೊಟ್ಟಿ​ದ್ದನ್ನು ಮಾಧ್ಯಮಗಳ ಎದುರು ಹೇಳು​ತ್ತಾರೆ. ಬೆಂಗಳೂರಿಗೆ ಬಂದರೂ ನಮಗೆ ಫೋನ್‌ ಕೂಡ ಮಾಡದೆ ಬರೀ ಯಡಿ​ಯೂ​ರಪ್ಪ​ನ​ವ​ರ ಬೆಂಬಲಿಗರನ್ನೇ ಭೇಟಿ ಮಾಡಿ ವರದಿ ಕೊಟ್ಟಿ​ದ್ದಾರೆ, ಇದು ಸರಿ​ಯ​ಲ್ಲ. ಕರ್ನಾಟಕದಲ್ಲಿ ಮೊದಲು ಉಸ್ತುವಾರಿ​ಯನ್ನೇ ಬದಲಾಯಿಸಿ ಎಂದು ಈಶ್ವರಪ್ಪ ಹೈಕಮಾಂಡ್‌ ನಾಯಕರನ್ನು ಕೇಳಿಕೊಂಡಿದ್ದಾರಂತೆ. 

ಮೋದಿ ಜಿ ಖುಷ್‌ ಹುವಾ:
ಅರವಿಂದ್‌ ಜತ್ತಿ ಅವರು ಕೇಂದ್ರ ಸಚಿವ ಅನಂತ್‌ ಕುಮಾರ್‌ ಜೊತೆಗೆ ನರೇಂದ್ರ ಮೋದಿ ಅವರನ್ನು ಬಸವ ಸಮಿತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಕರೆಯಲು ಹೋದಾಗ ಪ್ರಧಾನಿ ನೋಟು ರದ್ದತಿ ಬಗ್ಗೆ ವಿಪಕ್ಷಗಳ ಟೀಕೆಗಳ ಕಾರಣದಿಂದ ಸ್ವಲ್ಪ ಟೆನ್ಷನ್‌'ನಲ್ಲಿದ್ದರಂತೆ. ಆಗ, ‘12ನೇ ಶತಮಾನದಲ್ಲಿಯೇ ಬಸವಣ್ಣ ಕಪ್ಪು ಹಣದ ಬಗ್ಗೆ ಬರೆದಿದ್ದರು. ಭಂಡಾರ ತುಂಬಿದ ಬಳಿಕ ಸುಂಕವ ಕಟ್ಟದೆ ಹೋಗಬಾರದಯ್ಯಾ' ಎಂಬ ವಚನವನ್ನು ಜತ್ತಿ ಉಲ್ಲೇಖಿಸಿದರಂತೆ. ಆಗ ಸಂತೋಷಗೊಂಡ ಮೋದಿ ಸಾಹೇಬರು, ‘12ನೇ ಶತಮಾನ​ದಲ್ಲಿ​ಯೂ ಕಪ್ಪು ಹಣದ ಹಾವಳಿ ಇತ್ತಾ ಎಂದು ಹೇಳುತ್ತಾ ವಚನವನ್ನು ತಾವೇ ಬರೆದುಕೊಂಡು ‘ಈ ವಚನ ಮೊದಲೇ ಸಿಕ್ಕಿದ್ದರೆ ನವೆಂಬರ್‌ 8ರ ಭಾಷಣದಲ್ಲಿ ಹೇಳುತ್ತಿದ್ದೆ' ಎಂದರಂತೆ. ಕಾರ್ಯ​ಕ್ರಮ​ಕ್ಕೆ ಬಸವಣ್ಣನವರ ಹುಟ್ಟೂರಾದ ಇಂಗಳೇಶ್ವರದಿಂದ ಬಂದಿದ್ದ ಲಿಂಗಾ​ಯತ ಸ್ವಾಮಿ ಒಬ್ಬರು ಪದೇಪದೇ ತನ್ನನ್ನು ವೇದಿಕೆಗೆ ಕರೆಯಿರಿ ಎಂದು ಸನ್ನೆ ಮಾಡುತ್ತಿದ್ದಾಗ ಮೋದಿ ಅವರು ‘ಅರವಿಂದ್‌ ಭಾಯಿ, ಯಾರೀ ಸ್ವಾಮಿ ಬಹಳ ಹೊತ್ತಿನಿಂದ ನಿಮಗೆ ತೊಂದರೆ ಕೊಡು​ತ್ತಿ​ದ್ದಾರೆ' ಎಂದು ಜೋರಾಗಿ ನಕ್ಕರು. ಕಾರ್ಯಕ್ರಮ ಕೊನೆ​ಗೊಂಡಾಗ ಕಲಬುರ್ಗಿ ಮಗಳು, ಅಳಿಯ ಇಲ್ಲಿಯೇ ಇದ್ದಾ​ರೆ ಎಂದು ಅರವಿಂದ್‌ ಜತ್ತಿ ಹೇಳಿದಾಗ ಅವರ ಕೈ ಹಿಡಿದುಕೊಂಡು ‘ಎಲ್ಲಿ ಭೇಟಿ ಮಾಡಿಸಿ ಬನ್ನಿ' ಎಂದು ಸಭಿಕರ ಸಾಲಿಗೆ ದಡದಡನೆ ಬಂದೇ ಬಿಟ್ಟರು. 

ಗುನು ಗುನು ರಾಯರಡ್ಡಿ:
ಮೋದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಒಂದೇ ವಾರದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮೋದಿ ಜತೆಗೇ ವೇದಿಕೆ ಹಂಚಿಕೊಳ್ಳಬೇಕಾಗಿ ಬಂದಿದ್ದು ವಿಚಿತ್ರ ಸನ್ನಿವೇಶ. ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡುವಾಗ ರಾಯರಡ್ಡಿ ಮೋದಿ ಕಿವಿಯಲ್ಲಿ ಕ್ಷಮೆ ಕೇಳುವಂತೆ ಏನೋ ಗುನುಗುತ್ತಿದ್ದರು. ಪ್ರಧಾನಿ ಎದುರು ವೇದಿಕೆ ಮೇಲೆ ಹಿಂಜರಿಯುತ್ತಲೇ ಹೋದ ರಾಯರಡ್ಡಿ, ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೋದಿ ಬಳಿಗೆ ಹೋಗಿ, ಅವರ ಕೈ ಹಿಡಿದು ಏನೋ ಕಿವಿಯಲ್ಲಿ ಕ್ಷಮೆ ಕೇಳುವವರಂತೆ ಪಿಸುಗುಟ್ಟುತ್ತಿದ್ದರು. ಆದರೆ ರಾಯರಡ್ಡಿ ಟೀಕೆಯನ್ನು ನೆನಪಿಟ್ಟುಕೊಂಡಿರುವ ಮೋದಿ, ನಿಸ್ವಾರ್ಥ ಕರ್ಮ ಯೋಗದ ಬಗ್ಗೆ ಹೇಳುತ್ತ ‘ಕ್ಯಾ ಶಿಕ್ಷಾ ಮಂತ್ರಿ ಜೀ' ಎಂದಾಗ ಏನು ಮಾಡಬೇಕೆಂದು ತೋಚದೆ ರಾಯರಡ್ಡಿ ಜೋರಾಗಿ ನಗುತ್ತಿದ್ದರು. ಮೋದಿ ಸಾಹೇಬರ ಎದುರು ಹೋಗುವುದು ಹೇಗೆ ಎಂಬ ಚಿಂತೆಯಲ್ಲಿಯೇ ಇದ್ದಂತಿದ್ದ ರಾಯರಡ್ಡಿ ಅವರು ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡುವಾಗ ನರೇಂದ್ರ ಮೋದಿ, ಅನಂತ್‌ ಕುಮಾರ್‌, ಸದಾನಂದ ಗೌಡರು ಪಾದರಕ್ಷೆಗಳನ್ನು ಕಳಚಿದರೂ ತಾವು ಮಾತ್ರ ಬೂಟು ಹಾಕಿಕೊಂಡೇ ಮಾಲೆ ಹಾಕಿ ಕೈ ಮುಗಿದರು. ಬಿಜೆಪಿ ಭಿನ್ನಮತದ ಕಾರಣದಿಂದ ಸಿಟ್ಟು ಸೆಡವು ಮಾಡಿಕೊಂಡೇ ಕುಳಿತಿದ್ದ ಯಡಿಯೂರಪ್ಪನವರು ಕೂಡ ಬೂಟು ಹಾಕಿಕೊಂಡೇ ರಾಯರಡ್ಡಿಗೆ ಸಾಥ್‌ ನೀಡಿದರು. 

ಮೋದಿ ಆಪ್ತರು ಯಾರು?
2014ರಲ್ಲಿ ಮೋದಿ ಜೊತೆಗೆ ಅಷ್ಟಕಷ್ಟೇ ಎನ್ನುವಂತಿದ್ದ ಕೇಂದ್ರ ಸಚಿವ ಅನಂತ್‌ ಕುಮಾರ್‌ 3 ವರ್ಷದಲ್ಲಿ ಕರ್ನಾಟಕದ ಬಿಜೆಪಿ ನಾಯ​ಕ​ರಲ್ಲಿ ​ಮೋದಿಗೆ ಅತ್ಯಂತ ಹೆಚ್ಚು ಆಪ್ತರು ಎನ್ನುವುದು ಬಸವ ಜಯಂತಿ ಕಾರ್ಯ​​ಕ್ರಮದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಸುಮಾರು 80 ನಿಮಿಷಗಳ ಕಾರ್ಯಕ್ರಮದಲ್ಲಿ ಬಹಳ ಹೊತ್ತು ಅನಂತ್‌ ಕುಮಾರ್‌, ಅರವಿಂದ್‌ ಜತ್ತಿ ಜೊತೆಗೆ ಮಾತನಾಡುತ್ತಿದ್ದ ಮೋದಿ, ಸದ್ಯಕ್ಕೆ ಅನಂತ್‌ ಕುಮಾರ್‌ ತನಗೆ ಹೆಚ್ಚು ಆತ್ಮೀಯ ಎಂಬ ರೀತಿಯಲ್ಲಿ ಕಂಫರ್ಟ್‌ ಬಾಡಿ ಲಾಂಗ್ವೇಜ್‌ ತೋರಿಸುತ್ತಿದ್ದರು. ಅರವಿಂದ್‌ ಜತ್ತಿ ಹೇಳುವ ಪ್ರಕಾರ, ವಿನಂತಿ ಮಾಡಿಕೊಂಡ 5 ನಿಮಿಷದಲ್ಲಿ ಪ್ರಧಾನಿ ಬಳಿ ಕರೆದುಕೊಂಡು ಹೋದರಂತೆ ಅನಂತ್‌ ಕುಮಾರ್‌. ಸದಾನಂದ ಗೌಡರ ಜೊತೆಗೆ ಒಮ್ಮೆ ಮಾತ್ರ ಏನೋ ಬರೆದುಕೊಳ್ಳಲು ಪೆನ್‌ ಕೊಡಿ ಎಂದು ಮೋದಿ ಕೇಳಿದ್ದು ಬಿಟ್ಟರೆ ಒಮ್ಮೆಯೂ ಮಾತನಾಡಿಸಲಿಲ್ಲ. ಅಷ್ಟೇ ಅಲ್ಲ ಡಿವಿಎಸ್‌ಗೆ ಭಾಷಣ ಮಾಡಿ ಎಂದು ಯಾರೂ ಹೇಳಲಿಲ್ಲ. ಇನ್ನು ಬಿಎಸ್‌'ವೈ ಮಾತ್ರ ಕಾರ್ಯಕ್ರಮದಲ್ಲಿ ಮೋದಿ ಜೊತೆಗೆ ಮಾತ​ನಾ​ಡಲು ಹೋಗದೆ ಸಿಟ್ಟಿನ ಮುಖ ಹೊತ್ತುಕೊಂಡು ಕುಳಿತಿ​ದ್ದರು. ಯಡಿ​ಯೂರಪ್ಪ ಎಂದು ಹೆಸರು ಹೇಳಿದಾಕ್ಷಣ ಅತ್ಯಂತ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡ ಬಿಎಸ್‌ವೈ, ಕಾರ್ಯಕ್ರಮ ಮುಗಿದ ನಂತರ ಮಾತ್ರ ಪ್ರಧಾನಿ ಹಿಂದೆ ಏನೋ ಹೇಳಬೇಕು ಎಂಬಂತೆ ಧಾವಿಸಿ ಹೋದರು.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌ 

Latest Videos
Follow Us:
Download App:
  • android
  • ios