Asianet Suvarna News Asianet Suvarna News

‘ದೇವೇಗೌಡರ ಶಿಷ್ಯ'ನ ಆಟಕ್ಕೆ ಕಾಂಗ್ರೆಸ್ ಘಟಾನುಘಟಿಗಳೆಲ್ಲಾ ಚಿತ್ - ಇಂಡಿಯಾ ಗೇಟ್

ಪ್ರಧಾನಿ ಆಗಲು ಸಾಧ್ಯವಾಗದಿದ್ದ ಪ್ರಣಬ್‌ ಮುಖರ್ಜಿ ಅವರನ್ನು ಕಾಂಗ್ರೆಸ್‌ ರಾಷ್ಟ್ರಪತಿ ಮಾಡಿದಂತೆ ಅಡ್ವಾಣಿ ಅವರನ್ನು ರಾಷ್ಟ್ರಪತಿ ಮಾಡಬೇಕು ಎಂದು ಬಹಳಷ್ಟುಬಿಜೆಪಿ ನಾಯಕರ ಮನಸ್ಸಿನಲ್ಲಿ ಇದೆಯಾದರೂ ಮೋದಿ ಮತ್ತು ಶಾ ಒಪ್ಪುತ್ತಾರಾ ಎಂಬ ಸಂದೇಹದಿಂದ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ.

india gate 2017 june 6 modi and president polls

ಇಂಡಿಯಾ ಗೇಟ್‌ | ದೆಹಲಿಯಿಂದ ಕಂಡ ರಾಜಕಾರಣ

ಮೊದಲ ಪ್ರಜೆಗಾಗಿ ಮೊದಲ ಸಭೆ 
ಜರ್ಮನಿಗೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ ಮತ್ತು ಸುಷ್ಮಾ ಸ್ವರಾಜ್‌ ಜೊತೆ ಮೊದಲ ಬಾರಿ ಯಾರನ್ನು ರಾಷ್ಟ್ರಪತಿ ಮಾಡಬೇಕೆಂದು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಎಲ್‌.ಕೆ.ಅಡ್ವಾಣಿ, ವೆಂಕಯ್ಯ ನಾಯ್ಡು, ಮುರಳಿ ಮನೋಹರ ಜೋಶಿ, ಥಾವರ್‌ಚಂದ್‌ ಗೆಹ್ಲೋಟ್‌, ದ್ರೌಪದಿ ಮುರ್ಮು ಸೇರಿದಂತೆ ಬಹಳಷ್ಟುಹೆಸರುಗಳು ಪ್ರಸ್ತಾಪಕ್ಕೆ ಬಂದವು. ಆದರೆ ಮೋದಿ ಅವರು ಮಾತ್ರ ಯಾರ ಹೆಸರನ್ನೂ ಹೇಳಲಿಲ್ಲವಂತೆ. ಸಭೆಯಲ್ಲಿ ಎಲ್ಲವನ್ನೂ ಕೇಳಿಸಿಕೊಂಡ ಮೋದಿ ‘ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ. ಆದಷ್ಟುಚುನಾವಣೆ ಆಗದಂತೆ ನೋಡಿಕೊಳ್ಳೋಣ' ಎಂದು ಹೇಳಿ ಸಭೆಯನ್ನು ಮುಗಿಸಿದ್ದಾರೆ. ಅಷ್ಟೇ ಅಲ್ಲದೇ ಮಿತ್ರ ಪಕ್ಷಗಳ ಜೊತೆ ಮಾತನಾಡುವಂತೆ ರಾಜನಾಥ್‌ ಸಿಂಗ್‌ಗೆ, ಆರ್‌ಎಸ್‌ಎಸ್‌ ನಾಯಕರ ಜೊತೆ ಮಾತನಾಡುವಂತೆ ನಿತಿನ್‌ ಗಡ್ಕರಿಗೆ ಹಾಗೂ ವಿಪಕ್ಷಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡುವಂತೆ ಅರುಣ್‌ ಜೇಟ್ಲಿಗೆ ಹೇಳಿದ್ದು, ಅವಶ್ಯಕತೆ ಬಿದ್ದರೆ ವಿಪಕ್ಷಗಳ ನಾಯಕರೊಂದಿಗೆ ಸುಷ್ಮಾ ಸ್ವರಾಜ್‌ ಮಾತನಾಡಬೇಕೆಂದು ನಿರ್ಧರಿಸಲಾಗಿದೆಯಂತೆ. 

ರೈಸೀನಾ ಬೆಟ್ಟ ಹತ್ತುವವರು ಯಾರು?
ಪ್ರಧಾನಿ ಆಗಲು ಸಾಧ್ಯವಾಗದಿದ್ದ ಪ್ರಣಬ್‌ ಮುಖರ್ಜಿ ಅವರನ್ನು ಕಾಂಗ್ರೆಸ್‌ ರಾಷ್ಟ್ರಪತಿ ಮಾಡಿದಂತೆ ಅಡ್ವಾಣಿ ಅವರಿಗೆ ರೈಸೀನಾ ಬೆಟ್ಟ ಹತ್ತಿಸಬೇಕು ಎಂದು ಬಹಳಷ್ಟುಬಿಜೆಪಿ ನಾಯಕರ ಮನಸ್ಸಿನಲ್ಲಿ ಇದೆಯಾದರೂ ಮೋದಿ ಮತ್ತು ಶಾ ಒಪ್ಪುತ್ತಾರಾ ಎಂಬ ಕಾರಣದಿಂದ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ. ಆದರೆ ಅಡ್ವಾಣಿ ಹೆಸರನ್ನು ಪಕ್ಕಕ್ಕಿಟ್ಟು ಮುರಳಿ ಮನೋಹರ ಜೋಶಿ ಮತ್ತು ವೆಂಕಯ್ಯ ನಾಯ್ಡು ಹೆಸರನ್ನು ಪರಿಗಣಿಸುವುದು ಮೋದಿ ಸಾಹೇಬರಿಗೆ ಕಷ್ಟವಾಗಬಹುದು. ಸುಷ್ಮಾ ಸ್ವರಾಜ್‌ ಅವರಿಗೂ ರಾಷ್ಟ್ರಪತಿಯಾಗುವ ಮನಸ್ಸಿದೆಯಾದರೂ ಮನೋಹರ ಪರ್ರಿಕರ್‌ ಸ್ಥಾನವನ್ನು ತುಂಬುವುದಕ್ಕೇ ಸೂಕ್ತ ಜನರಿಲ್ಲ. ಹೀಗಿರುವಾಗ ಒಳ್ಳೆಯ ಕೆಲಸ ಮಾಡುತ್ತಿರುವ ಸುಷ್ಮಾರನ್ನು ಮೋದಿ ಬಿಟ್ಟುಕೊಡುವುದು ಕಷ್ಟ ಎನ್ನಲಾಗುತ್ತಿದೆ. ಅಡ್ವಾಣಿ, ಸುಷ್ಮಾ, ಜೋಶಿ ಅವರಿಗೆ ಹೋಲಿಸಿದರೆ ಮೋದಿ ಹೆಚ್ಚು ನಂಬುವುದು ವೆಂಕಯ್ಯ ನಾಯ್ಡು ಅವರನ್ನಂತೆ. ಆದರೆ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಒಡಿಶಾ, ಮಧ್ಯ​ಪ್ರದೇಶ, ಗುಜರಾತ್‌ ಮತ್ತು ಛತ್ತೀಸ್‌'ಗಢಗಳಲ್ಲಿರುವ ಆದಿ​ವಾಸಿ ಮತದಾರರನ್ನು ಗಮನದಲ್ಲಿಟ್ಟುಕೊಂಡು ಜಾರ್ಖಂಡ್‌ ರಾಜ್ಯ​ಪಾಲೆ​ಯಾಗಿರುವ ದ್ರೌಪದಿ ಮುರ್ಮು ಹೆಸರನ್ನೇ ಮೋದಿ ಮುಂದೆ ತರಬಹುದು ಎಂದು ಉನ್ನತ ಮೂಲಗಳು ಹೇಳುತ್ತಿವೆ. ದ್ರೌಪದಿ ಮುರ್ಮು ಒಡಿಶಾದಲ್ಲಿ ಸಂಘ ಪರಿವಾರದ ಹಿನ್ನೆಲೆಯಿರುವ ನಾಯಕಿ ಎನ್ನುವುದು ಅವರಿಗಿರುವ ಪ್ಲಸ್‌ ಪಾಯಿಂಟ್‌. ಆದಿವಾಸಿ ನಾಯಕಿಯನ್ನು ಅಭ್ಯರ್ಥಿ ಮಾಡಿದಲ್ಲಿ ನವೀನ್‌ ಪಟ್ನಾಯಕ್‌, ಮಮತಾ ಬ್ಯಾನರ್ಜಿ, ಶಿಬು ಸೊರೇನ್‌ ಮುಂತಾದವರು ವಿಪಕ್ಷಗಳ ಜೊತೆ ನಿಲ್ಲಲು ಸಾಧ್ಯವಾಗುವುದಿಲ್ಲ ಎನ್ನುವುದು ಒಂದು ಅಂಶವಾದರೆ ಆದಿವಾಸಿ ನಾಯಕಿಯನ್ನು ವಿರೋಧಿಸಲು ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಕೂಡ ಹಿಂದೇಟು ಹಾಕಬಹುದು. ಒಟ್ಟಾರೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರ​ಬೀಳ​ಲಿದ್ದು, ಮುಂದಿನ ಒಂದು ವಾರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂದು ನಿರ್ಧರಿಸಲಾಗುತ್ತದೆ. ವಿಪಕ್ಷಗಳು ಕೂಡ ಬಿಜೆಪಿ ಅಭ್ಯರ್ಥಿ ಯಾರು ಎಂಬುದನ್ನು ನೋಡಿಕೊಂಡೇ ಮುಂದೆ ಹೆಜ್ಜೆ ಇಡಲಿವೆಯಂತೆ. ಆದರೆ ಬಿಜೆಪಿ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿ​​​ದರೂ ವಿಪಕ್ಷಗಳ ಅಭ್ಯರ್ಥಿ ಗೆಲ್ಲೋಕೆ ಸಾಧ್ಯವೇ ಇಲ್ಲ ಎಂದು ಸ್ವತಃ ಸೀತಾರಾಂ ಯೆಚೂರಿ ಮಲೆಯಾಳಿ ಪತ್ರಕರ್ತರ ಎದುರು ಹೇಳಿಬಿಟ್ಟಿದ್ದಾರೆ. 

ಭಲೇ ಭಲೇ ಸಿದ್ದು:
ಕಾಂಗ್ರೆಸ್‌'ನಲ್ಲಿದ್ದ ಘಟಾನುಘಟಿ ಮುಖ್ಯಮಂತ್ರಿಗಳಿಗೆ ಸಾಧ್ಯವಾಗದೆ ಇರುವುದು ವಲಸೆ ಬಂದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ​ನವರಿಗೆ ಸಾಧ್ಯವಾಗುತ್ತಿರುವುದಕ್ಕೆ ದೆಹಲಿ ಕಾಂಗ್ರೆಸ್‌ ದಿಗ್ಗಜರೇ ಅವಾಕ್ಕಾಗಿದ್ದಾರೆ. ಸಂಪುಟ ಪುನಾರಚನೆಯಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರ ಆಯ್ಕೆವರೆಗೆ ಸಿದ್ದು ಹೇಳಿದ್ದಕ್ಕೆಲ್ಲ ಕಾಂಗ್ರೆಸ್‌ ಹೈಕಮಾಂಡ್‌ ತಲೆ ಅಲ್ಲಾಡಿಸುತ್ತಿರುವುದಕ್ಕೆ ಅಹ್ಮದ್‌ ಪಟೇಲ್‌, ಗುಲಾಂ ನಬಿ ಆಜಾದ್‌, ಕಮಲನಾಥ್‌, ಆನಂದ್‌ ಶರ್ಮಾ, ಅಂಬಿಕಾ ಸೋನಿ ತರಹದ ​ನಾಯಕರೇ ಚಕಿತರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ವಿರುದ್ಧ ಕತ್ತಿ ಮಸೆಯಬಲ್ಲ ನಾಯಕನೇ ಅಧ್ಯಕ್ಷನಾಗುವ ಪರಂಪರೆ ಇರು​ವಾಗ ಸಿದ್ದು ಹೇಳಿದ್ದನ್ನೇ ಸೋನಿಯಾ ಮತ್ತು ರಾಹುಲ್‌ ಕೇಳುತ್ತಿ​ರುವುದು ಗಾಂಧಿ ಕುಟುಂಬದ ನಿಷ್ಠರನ್ನು ಸುಸ್ತು ಮಾಡಿದೆ. ವೀರಭದ್ರ ಸಿಂಗ್‌, ತರುಣ್‌ ಗೊಗೋಯಿ, ಉಮನ್‌ ಚಾಂಡಿ, ಅಮರಿಂದರ್‌ ಸಿಂಗ್‌ ಅವರಿಗೆ ಸಿಗದ ಸ್ವಾತಂತ್ರ್ಯ ಸಿದ್ದರಾಮಯ್ಯನವರಿಗೆ ಸಿಗುತ್ತಿರುವ ಬಗ್ಗೆ ದೆಹಲಿ ಕಾಂಗ್ರೆಸ್‌ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌'ನ ಉತ್ತರ ಭಾರತದ ಹಿರಿಯ ನಾಯಕರೊಬ್ಬರು ಪತ್ರಕರ್ತರ ಎದುರು ‘ಸಿದ್ದರಾಮಯ್ಯ ದೇವೇಗೌಡರ ಶಿಷ್ಯರಲ್ಲವೇ? ಯಾವ ಬಾಂಬ್‌ ಎಲ್ಲಿ ಇಟ್ಟರೆ ಯಾವ ಬಾಗಿಲು ತೆರೆಯುತ್ತದೆ ಎಂದು ಚೆನ್ನಾಗಿ ಅರಿತುಕೊಂಡಿದ್ದಾರೆ ಬಿಡಿ' ಎಂದು ಹೇಳಿಕೊಂಡಿದ್ದಾರೆ. ದಿಗ್ವಿಜಯ್ ಸಿಂಗ್‌ರಿಂದ ಹಿಡಿದು ಅಹ್ಮದ್‌ ಪಟೇಲ್‌'ವರೆಗೆ ಎಲ್ಲರೂ ಡಿ.ಕೆ.ಶಿವಕುಮಾರ್‌ರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾತರರಾಗಿದ್ದಾಗ ಸಿದ್ದರಾಮಯ್ಯ ಖರ್ಗೆಯನ್ನು ಜೊತೆಯಲ್ಲಿಟ್ಟುಕೊಂಡು ಆಡಿದ ಆಟದಲ್ಲಿ ಘಟಾನುಘಟಿಗಳು ಚಿತ್‌ ಆಗಿ ಅಸಹಾಯಕರಾಗಿದ್ದರಂತೆ.

ರಾಷ್ಟ್ರಪತಿಗೆ ಕೇವಲ 3 ಬೆಡ್‌ ರೂಂ:
ಬ್ರಿಟಿಷ್‌ ಆಡಳಿತದಲ್ಲಿ ವೈಸರಾಯ್‌'ಗಾಗಿ 300 ಎಕರೆಯಲ್ಲಿ ಕಟ್ಟಿಸಿದ್ದ ಆಗಿನ ವೈಸರಾಯ್‌ ಹೌಸ್‌ ಅಂದರೆ ಈಗಿನ ರಾಷ್ಟ್ರಪತಿ ಭವನದಲ್ಲಿ ಬರೋಬ್ಬರಿ 330 ಕೋಣೆಗಳಿವೆ. ಆದರೂ ಮೊದಲ ಪ್ರಜೆಗೆ ಉಪಯೋಗಿಸಲು ಸಿಗುವುದು ಕೇವಲ 3 ಬೆಡ್‌ ರೂಂ ಮಾತ್ರವಂತೆ. ಪ್ರಣಬ್‌ ಮುಖರ್ಜಿ 3 ಬೆಡ್‌ ರೂಂ ಸಾಕಾಗೋಲ್ಲ, ಕನಿಷ್ಠ 5 ಬೆಡ್‌ ರೂಂ ಆದರೂ ಬೇಕು. ಒಳಗಡೆ ಸ್ನಾನದ ಮನೆ ದೊಡ್ಡದು ಮಾಡಿಕೊಡಿ ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ನವೀಕರಣ ಮಾಡಿಸಿಕೊಂಡಿದ್ದಾರಂತೆ. ಇನ್ನೊಂದು ಸಮಸ್ಯೆ ಎಂದರೆ ರಾಷ್ಟ್ರಪತಿಗಳ ಕುಟುಂಬಕ್ಕೆ ಇಲ್ಲಿ ಒಂಟಿತನ ತುಂಬಾ ಕಾಡುತ್ತಿದೆಯಂತೆ. ಬೆಳಗ್ಗೆ ವಾಯುವಿಹಾರದಿಂದ ಹಿಡಿದು ರಾತ್ರಿ ಊಟದವರೆಗೆ ಬರೀ ಪ್ರೊಟೋಕಾಲ್‌ನಲ್ಲಿಯೇ ಚಟುವಟಿಕೆ ನಡೆಸಬೇಕು. ಮೊದಲ ಪ್ರಜೆಯ ಯೋಗಕ್ಷೇಮ ನೋಡಿಕೊಳ್ಳಲೆಂದು ಇಲ್ಲಿ 2 ಸಾವಿರ ಸಿಬ್ಬಂದಿಯಿದ್ದಾರೆ. 1931ರಲ್ಲಿ ಇಲ್ಲಿ ಇರಲು ಬಂದ ಲಾರ್ಡ್‌ ಇರ್ವಿನ್‌ಗೆ ಇಷ್ಟು ದೊಡ್ಡ ಕಟ್ಟಡದ ರಸ್ತೆಗಳೇ ನೆನಪಿನಲ್ಲಿ ಇರುತ್ತಿರಲಿಲ್ಲವಂತೆ. ಕೊನೆಯ ವೈಸರಾಯ್‌ ಹೆಂಡತಿ ಲೇಡಿ ಮೌಂಟ್‌ ಬ್ಯಾಟನ್‌ಗೆ ವಿಪರೀತ ಒಂಟಿತನ ಕಾಡುತ್ತಿತ್ತಂತೆ. ಹೀಗಾಗಿಯೇ ಏನೋ ಬ್ರಿಟಿಷರ ಈ ಪಳೆಯುಳಿಕೆಯನ್ನು ಮಹಾತ್ಮ ಗಾಂಧೀಜಿ ಆಸ್ಪತ್ರೆಯಾಗಿ ರೂಪಾಂತರಿಸಿ ಎಂದು ಸಲಹೆ ನೀಡಿದ್ದರಂತೆ. 

ಕಟ್ಟಾ ಸೂಟ್‌'ಕೇಸ್‌:
ಇತ್ತೀಚೆಗೆ ದೆಹಲಿ ಕರ್ನಾಟಕ ಭವನದಲ್ಲಿ ಪತ್ರಕರ್ತರೊಂದಿಗೆ ಬಿಜೆಪಿ ಶಾಸಕರಾದ ಸಿ.ಟಿ.ರವಿ ಮತ್ತು ಲಕ್ಷ್ಮಣ್‌ ಸವದಿ ಹರಟೆ ಹೊಡೆಯುತ್ತಿದ್ದರು. ಆಗ ಅಲ್ಲಿಗೆ ಬಂದವರು ಕಟ್ಟಾಸುಬ್ರಮಣ್ಯ ನಾಯ್ಡು. ಅವರ ಹಿಂದೆ ಮೂರು ದೊಡ್ಡ ಸೂಟ್‌'ಕೇಸ್‌ಗಳನ್ನೂ ಹಿಂಬಾಲಕರು ತೆಗೆದುಕೊಂಡು ಬರುತ್ತಿದ್ದರು. ಆಗ ಅಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ‘ಏನ್ರೀ ಕಟ್ಟಾ ಭಾರೀ ಸೂಟ್‌'ಕೇಸ್‌ ತಗೊಂಡು ಬಂದಿದ್ದೀರಿ. ಮೋದಿ ಸರ್ಕಾರದಲ್ಲಿ ಸೂಟ್‌'ಕೇಸ್‌ ವ್ಯವಹಾರ ನಡೆಯೋಲ್ಲ ಎಂದು ನಿಮ್ಮ ನಾಯಕರು ಭಾಷಣ ಮಾಡುತ್ತಾರೆ ಏನ್‌ ಕಥೆ' ಎಂದು ತಮಾಷೆ ಮಾಡಿದರು. ಈ ಮಾತು ಕೇಳಿದ ನಾಯ್ಡು ಅರ್ಧ ಬಾಗಿ, ‘ಅಣ್ಣಾ ಮೊದಲೇ ಬಾಳಾ ನೊಂದಿದ್ದೀನಿ. ಇನ್ನಷ್ಟು ಗಾಯದ ಮೇಲೆ ಬರೆ ಎಳೆಯಬೇಡಣ್ಣ' ಎಂದು ಕೈ ಮುಗಿದರು. 

ಬಿಜೆಪಿಯಲ್ಲಿ ಇದ್ದಂಗೆ ಕಾಂಗ್ರೆಸ್‌'ನಲ್ಲಿ ಲಕ್ಷ್ಮೀ:
ಕರ್ನಾಟಕ ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆ ಅವರಿಂದಾಗಿ ಜಗಳ​ಗ​ಳು ಆಗುತ್ತಿವೆ ಎಂದು ಈಶ್ವರಪ್ಪ ದೂರು ನೀಡಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇತ್ತೀಚೆಗೆ ದೆಹಲಿಗೆ ಬಂದಿದ್ದ ಸತೀಶ್‌ ಜಾರಕಿ​ಹೊಳಿ ರಾಹುಲ್‌ ಅವರನ್ನು ಭೇಟಿಯಾಗಿ ‘ಲಕ್ಷ್ಮೀ ಹೆಬ್ಬಾಳ್ಕರ್‌ ಕಾಂಗ್ರೆಸ್‌ನಲ್ಲಿರುವ ಶೋಭಾ ಇದ್ದ ಹಾಗೆ ಸರ್‌. ಅವರಿಂದಾ​ಗಿ​ಯೇ ನಮ್ಮಲ್ಲಿ ಬಹಳಷ್ಟು ಜಗಳಗಳಾಗಿವೆ. ಉತ್ತರ ಕರ್ನಾಟಕದಲ್ಲಿ ಎಲ್ಲ ಕಡೆ ಹಸ್ತಕ್ಷೇಪ ಮಾಡುತ್ತಾರೆ. ಹಿರಿಯ ನಾಯಕರ ಬಗ್ಗೆ ಗೌರವ​ವಿಲ್ಲ. ಜಾರಕಿಹೊಳಿ ಕುಟುಂಬದಲ್ಲಿ ಜಗಳ ಹೆಚ್ಚಲು ಇವರೇ ಕಾರಣ' ಎಂದು ಹೇಳಿದ್ದಾರೆ. ಅನೇಕ ಹಿರಿಯ ಸಚಿವರು ಹೇಳುವ ಪ್ರಕಾರ ದೆಹಲಿಯಲ್ಲಿ ಮುಖ್ಯಮಂತ್ರಿಗಳ ಆಪ್ತ ಗೋವಿಂದ​ರಾಜ್‌'ಗೆ ಬಿಟ್ಟರೆ ಅತ್ಯಂತ ಬೇಗ ನಾಯಕರ ಸಮಯ ಸಿಗುವುದು ಲಕ್ಷ್ಮೇ ಹೆಬ್ಬಾಳ್ಕರ್‌ಗಂತೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌
epaper.kannadaprabha.in

Follow Us:
Download App:
  • android
  • ios