Asianet Suvarna News Asianet Suvarna News

ಸೋಲುವ ಚುನಾವಣೆ ಉಸಾಬರಿ ನಮಗೇಕೆ ಎಂದರಂತೆ ಶರದ್ ಪವಾರ್, ದೇವೇಗೌಡ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ನಂತರ ಡಿಕೆಶಿ ಹೈಕಮಾಂಡನ್ನು ಭೇಟಿ ಮಾಡಿದಾಗ, ‘ಯಾಕೆ ಶಿವಕುಮಾರ್‌, ರಾಜ್ಯದ ಎಲ್ಲ ನಾಯಕರೂ ನಿಮ್ಮನ್ನು ಕಂಡರೆ ಉರಿಯುತ್ತಾರೆ? ಸ್ವಲ್ಪ ಸಂಬಂಧ ಸುಧಾರಿಸಿಕೊಳ್ಳಿ' ಎಂಬ ಸಲಹೆ ಬಂತಂತೆ. ಬೇಸರಗೊಂಡ ಡಿಕೆಶಿ, ‘ನಾನು ನೇರವಾಗಿ ‘ಫುಟ್‌ಬಾಲ್‌' ಆಡಿದೆ. ಆದರೆ ನಮ್ಮ ನಾಯಕರು ‘ಚೆಸ್‌' ಆಡಿ ನನ್ನನ್ನು ಸೋಲಿಸಿಬಿಟ್ಟರು' ಎಂದು ಹೊರಗೆ ಹೇಳುತ್ತಿದ್ದಾರೆ.

india gate 2017 june 13 pranab mukherjee

ಇಂಡಿಯಾ ಗೇಟ್‌ | ದೆಹಲಿಯಿಂದ ಕಂಡ ರಾಜಕಾರಣ

ಗಾಂಧಿ ಮೊಮ್ಮಗ ಕಾಂಗ್ರೆಸ್‌ ಅಭ್ಯರ್ಥಿ?
ಸರ್ವಸಮ್ಮತ ರಾಷ್ಟ್ರಪತಿ ಆಯ್ಕೆಗೆ ಕಾಂಗ್ರೆಸ್‌ ಸೇರಿದಂತೆ ದೇಶದ ಎಲ್ಲ ರಾಜಕೀಯ ಪಕ್ಷಗಳ ಜೊತೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೇಂದ್ರದ ಹಿರಿಯ ಮೂವರು ಸಚಿವರ ತಂಡವೊಂದನ್ನು ರಚಿಸಿದ್ದಾರೆ. ಆದರೆ ಚುನಾವಣೆ ಇಲ್ಲದೆ ಸರ್ವಸಮ್ಮತ ರಾಷ್ಟ್ರಪತಿ ಆಯ್ಕೆಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸ್ಪಷ್ಟವಾಗಿ ‘ಇಲ್ಲ' ಎಂದು ಹೇಳಿಬಿಟ್ಟಿದ್ದಾರಂತೆ. ಕಳೆದ ವಾರ ನಡೆದ ಕಾಂಗ್ರೆಸ್‌ ಕಾರ‍್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆ ವಿಷಯ ಚರ್ಚೆಗೆ ಬಂದಾಗ ಮಧ್ಯ ಪ್ರವೇಶಿಸಿದ ರಾಹುಲ್‌, ‘ಪ್ರಣಬ್‌ರನ್ನೇ ಮುಂದುವರೆಸು​ವು​ದಾದರೆ ಸರಿ, ಇಲ್ಲವಾದಲ್ಲಿ ಸರ್ಕಾರ ಯಾರನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿ​ದರೂ ಕೂಡ ನಾವು ಅಭ್ಯರ್ಥಿ ಹಾಕಲೇಬೇಕಾಗುತ್ತದೆ. ಸರ್ಕಾರ ಹೇಳಿದ ಅಭ್ಯರ್ಥಿಯನ್ನು ಒಪ್ಪಿಕೊಂಡಲ್ಲಿ ದೇಶಾದ್ಯಂತ ನಮ್ಮ ಕಾರ್ಯ​​ಕರ್ತರಿಗೆ ಕೆಟ್ಟಸಂದೇಶ ಹೋಗುತ್ತದೆ. ಹೀಗಾಗಿ ಸರ್ವ​ಸಮ್ಮತಿ​ಯ ಪ್ರಶ್ನೆಯೇ ಇಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ರಾಹುಲ್‌ ಹೀಗೆ ಹೇಳಿದ ಮೇಲೆ ದಾರಿ ತೋಚದೆ ಉಳಿದ ನಾಯಕರು ‘ರಾಹುಲ್‌ ಜಿ ಸಹಿ ಬೋಲ… ರಹೇ ಹೈ' ಎಂದು ಅನು​ಮೋದಿ​ಸಿದ​ರಂತೆ. ಅಂದ ಹಾಗೆ ನಾಳೆ ವಿಪಕ್ಷಗಳು ರಾಷ್ಟ್ರಪತಿ ಚುನಾ​ವಣೆ ರಣತಂತ್ರ ಹೆಣೆ​ಯಲು ಸಭೆ ಸೇರುತ್ತಿದ್ದು, ಬಹುತೇಕ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲ​​ಕೃಷ್ಣ ಗಾಂಧಿ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಕಡೆಯಿಂದ ಅಭ್ಯರ್ಥಿ​ಯಾಗಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಮತ್ತು ಶರದ್‌ ಪವಾರ್‌ ಅವರಿಗೆ ಚುನಾವಣೆಗೆ ನಿಲ್ಲಿ ಎಂದು ಸ್ವತಃ ಸೋನಿಯಾ ಅವರೇ ಕೇಳಿಕೊಂಡರೂ ಇಬ್ಬರೂ ‘ಅಯ್ಯೋ, ಸೋಲೋ ಚುನಾವಣೆ ಉಸಾಬರಿ ನಮಗೇಕೆ' ಎಂದು ಮೈ ಕೊಡವಿಕೊಂಡರಂತೆ. 

ರಾಷ್ಟ್ರಪತಿಯ ಆಧಾರ್‌ ಕಾರ್ಡ್‌ ನಾಪತ್ತೆ!
ಸರ್ಕಾರ ಮತ್ತು ವಿಪಕ್ಷಗಳು ಹೊಸ ರಾಷ್ಟ್ರಪತಿ ಹುಡುಕಾಟದಲ್ಲಿದ್ದರೆ ರಾಷ್ಟ್ರ​ಪತಿ ಭವನದಲ್ಲಿ ಮಾತ್ರ ಬೇರೆಯೇ ಸರ್ಚ್ ಆಪರೇಷನ್‌ ನಡೆ​ಯು​ತ್ತಿದೆ. ದೇಶದ ಮೊದಲ ಪ್ರಜೆ ಪ್ರಣಬ್‌ ಮುಖರ್ಜಿ ತಮ್ಮ ಆಧಾರ್‌ ಕಾರ್ಡನ್ನು ಕಳೆದುಕೊಂಡಿದ್ದು, ರೈಸೀನಾ ಹಿಲ್‌ ಕಟ್ಟಡದಲ್ಲಿ 15 ದಿನದಿಂದ ಸಿಬ್ಬಂದಿಗೆ ಆಧಾರ್‌ ಕಾರ್ಡ್‌ ಹುಡುಕೋದೇ ಕೆಲಸವಾಗಿದೆ​ಯಂತೆ. ವಿಷಯ ಗೊತ್ತಾದ ನಂತರ ಪ್ರಣಬ್‌'ರನ್ನು ಭೇಟಿಯಾದ ಪತ್ರಕರ್ತರು, ‘ಆಧಾರ್‌ ಕಾರ್ಡ್‌ ಯಾಕೆ? ಮತ್ತೊಮ್ಮೆ ನಾಮಪತ್ರ ಏನಾದರೂ ಸಲ್ಲಿ​ಸು​ತ್ತಿ​ದ್ದೀರಾ' ಎಂದು ಕೇಳಿದಾಗ ರಾಷ್ಟ್ರಪತಿಗಳು ‘ನೋ ಚಾನ್ಸ್‌, ನಾನು ಎಲ್ಲ ಸಾಮಾನು, ಸರಂಜಾಮು ಹಾಗೂ ಪುಸ್ತಕಗಳನ್ನು ಜೋಡಿಸು​ತ್ತಿ​ದ್ದೇನೆ. ಆಧಾರ್‌ ಕಾರ್ಡ್‌ ಕಾಣದೆ ಇದ್ದುದರಿಂದ ಹುಡುಕುತ್ತಿದ್ದೇನೆ ಅಷ್ಟೇ. ನೀವು ಇದರಲ್ಲಿ ಅರ್ಥ ಶೋಧಿಸಬೇಡಿ' ಎಂದು ಹೇಳಿ ಜೋರಾಗಿ ನಕ್ಕರಂತೆ. 

ಪುಸ್ತಕಪ್ರಿಯ ಪ್ರಣಬ್‌:
ಜು.24ಕ್ಕೆ ರಾಷ್ಟ್ರಪತಿ ಭವನ ಬಿಡಲಿರುವ ಪ್ರಣಬ್‌ ಮುಖರ್ಜಿ ಅವ​ರ​ನ್ನು ಭೇಟಿಯಾಗಿದ್ದ ನಗರಾಭಿವೃದ್ಧಿ ಇಲಾಖೆಯ ಅಧಿ​ಕಾರಿ​ಗಳು ನಿವೃತ್ತಿÜ ನಂತರ ಕೊಡಬೇಕಾದ ನಿವಾಸದ ಬಗ್ಗೆ ಕೇಳಿದರಂತೆ. ‘ನೋಡಿ ನನಗೆ ಗ್ರಂಥಾಲಯಕ್ಕೆ ವಿಶಾಲ ಜಾಗ ಬೇಕು. ಉಳಿ​ದಂತೆ ಯಾವ ಮನೆ​​ಯನ್ನಾದರೂ ಕೊಡಿ' ಎಂದು ಹೇಳಿದರಂತೆ. ಪ್ರಣಬ್‌ ಬಳಿ 15 ಸಾವಿ​ರಕ್ಕೂ ಹೆಚ್ಚು ಪುಸ್ತಕಗಳಿದ್ದು, ಪ್ರೀತಿಯ ಮಗಳು ಶರ್ಮಿಷ್ಠಾ ಬಿಟ್ಟ​ರೆ ಇನ್ಯಾರಿಗೂ ಪುಸ್ತಕ ಮುಟ್ಟಲು ಬಿಡುವುದಿ​ಲ್ಲ​ವಂತೆ. ಈಗ ಭವನ ಬಿಡುವ ದಿನಗಳು ಹತ್ತಿರ ಬರುತ್ತಿದ್ದಂತೆ ಸ್ವತಃ ಮುಖರ್ಜಿ ಅವರೇ ಮಗಳೊಂದಿಗೆ ಪುಸ್ತಕಗಳ ನಂಬರಿಂಗ್‌ ಮಾಡುತ್ತಿದ್ದಾರಂತೆ. 

ಡಿಕೆಶಿಗೆ ಶತ್ರುಗಳೇ ಹೆಚ್ಚು: ಹೈಕಮಾಂಡ್‌
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ನಂತರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಬಳಿ ಹೋಗಿದ್ದ ಡಿ.ಕೆ.ಶಿವಕುಮಾರ್‌ಗೆ "ಯಾಕೆ ಶಿವಕುಮಾರ್‌, ರಾಜ್ಯದ ಎಲ್ಲ ನಾಯಕರೂ ನಿಮ್ಮನ್ನು ಕಂಡರೆ ಉರಿ​ಯುತ್ತಾರೆ? ನನಗೆ ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡುವ ಮನ​ಸ್ಸಿ​ತ್ತು. ಆದರೆ ಎಲ್ಲರೂ ವಿರೋಧಿಸಿದರು. ನೀವು ಸ್ವಲ್ಪ ಸಂಬಂಧ ಸುಧಾ​ರಿ​ಸಿ​ಕೊಳ್ಳಿ. ನಿಮಗೆ ರಾಜ್ಯದ ನಾಯಕರಲ್ಲಿ ಒಬ್ಬರೂ ಮಿತ್ರರಿಲ್ಲ, ಎಲ್ಲರೂ ಶತ್ರುಗಳೇ" ಎಂದು ಹೇಳಿದರಂತೆ. ಏಳೆಂಟು ವರ್ಷಗಳ ಹಿಂದೆ ಶಿವಕುಮಾರ್‌ ಬಗ್ಗೆ ಸೋನಿಯಾರಿಗೆ ಅಷ್ಟೇನೂ ಒಳ್ಳೆಯ ಅಭಿ​ಪ್ರಾಯ ಇರಲಿಲ್ಲವಂತೆ. ಒಮ್ಮೆ ಶಿವಕುಮಾರ್‌ ಮೇಡಂ ಸಮಯ ಪಡೆ​​​ಯಲು ನಾಲ್ಕೈದು ದಿನ ಕೂಡ ಕಾಯ್ದಿದ್ದರಂತೆ. ಆದರೆ ಇತ್ತೀಚೆಗೆ ಹೇಗೋ ಶಿವಕುಮಾರ್‌ ಸೋನಿಯಾ ಮತ್ತು ರಾಹುಲ್‌ ಬಳಿ ಸಂಬಂಧ ಸುಧಾ​ರಿಸಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಅವರು ಇನ್ನೇನು ಅಧ್ಯಕ್ಷನಾಗಿಯೇ ಬಿಟ್ಟೆ ಎನ್ನುವ ಉಮೇದಿನಲ್ಲಿ ಪತ್ನಿ, ಮಕ್ಕಳನ್ನು ಕರೆದು​ಕೊಂಡು ಬಂದು ಸೋನಿಯಾರನ್ನು ಭೇಟಿ ಮಾಡಿಸಿ, ಶಾಲು ಹೊದಿಸಿ ಹೋಗಿದ್ದರಂತೆ. ಆದರೆ ಈಗ ಎಲ್ಲವೂ ಉಲ್ಟಾಆದ ಮೇಲೆ ಡಿಕೆಶಿ ‘ನಾನು ನೇರವಾಗಿ ‘ಫುಟ್‌ಬಾಲ್‌' ಆಡಿದೆ. ಆದರೆ ನಮ್ಮ ನಾಯ​​ಕರು ‘ಚೆಸ್‌' ಆಡಿ ನನ್ನನ್ನು ಸೋಲಿಸಿಬಿಟ್ಟರು' ಎಂದು ಬೇಸರ ಹೊರಹಾಕುತ್ತಿದ್ದಾರೆ.

ಟ್ರಕ್‌'ಗಟ್ಟಲೇ ದಾಖಲೆ:
ಜಯಲಲಿತಾ ನಿಧನದ ನಂತರ ಎರಡೆಲೆ ಚಿಹ್ನೆಗಾಗಿ ನಡೆಯುತ್ತಿರುವ ವಿವಾದ ಕೇಂದ್ರ ಚುನಾವಣಾ ಆಯೋಗಕ್ಕೆ ಹೊಸ ತಲೆ​ನೋವು ಸೃಷ್ಟಿ​ಸಿ​ದೆ. ‘ಎರಡೆಲೆ ಚಿಹ್ನೆ ನಮ್ಮದು' ಎಂದು ಹೇಳುತ್ತಿ​ರುವ ಎರಡೂ ಬಣ​ಗಳು ಪೈಪೋಟಿಯಲ್ಲಿ ಟ್ರಕ್‌ಗಟ್ಟಲೇ ದಾಖಲೆ​ಗಳ​ನ್ನು ಸಲ್ಲಿ​ಸುತ್ತಿವೆ. ದಾಖ​ಲೆಗಳನ್ನು ಜೋಡಿಸಿಡುವುದು ಸಿಬ್ಬಂದಿಗೆ ತಲೆ ನೋವಾದರೆ, ಅವೆಲ್ಲವನ್ನೂ ಓದಬೇಕಾದ ಅನಿವಾರ್ಯತೆ ಆಯುಕ್ತರಿಗೆ. 

ಮೌನಿಯಾದ ಕೇಜ್ರಿವಾಲ್‌:
ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಹೀನಾಯವಾಗಿ ಸೋತ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮೀಡಿಯಾ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಮಾತನಾಡುವುದನ್ನೇ ಬಿಟ್ಟಿದ್ದಾರೆ. ನರೇಂದ್ರ ಮೋದಿ ಬಗ್ಗೆ ಅತಿಯಾಗಿ ಟೀಕೆಗಳನ್ನು ಮಾಡಿದ್ದರಿಂದಲೇ ಸೋಲಾಗಿದೆ ಎಂದು ಕೇಜ್ರಿವಾಲ್‌'ಗೆ ಗೆಳೆಯರು ಹೇಳಿದ್ದಾರೆ. ಹೀಗಾಗಿ ದಿಲ್ಲಿಯ ಸ್ಥಳೀಯ ವಿಷಯ ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಬಗ್ಗೆ ಕೇಜ್ರಿವಾಲ್‌ ಚಕಾರ ಎತ್ತುವುದಿಲ್ಲ. ಗುಜರಾತ್‌, ಹಿಮಾಚಲ ಮತ್ತು ಕರ್ನಾಟಕದಲ್ಲಿ ಕೂಡ ಆಮ್‌ ಆದ್ಮಿ ಪಕ್ಷ ಸ್ಪರ್ಧಿಸುವುದು ಅನುಮಾನ ಎಂದು ಪಕ್ಷದ ದೆಹಲಿ ಮೂಲಗಳು ಹೇಳುತ್ತಿದ್ದು, ಒಂದು ವರ್ಷ ಕೇಜ್ರಿವಾಲ್‌ ಬರೀ ದಿಲ್ಲಿಯನ್ನೇ ಫೋಕಸ್‌ ಮಾಡುವ ನಿರ್ಧಾರ ಮಾಡಿದ್ದಾರಂತೆ. 

ಒಳ್ಳೆ ಗಿಫ್ಟ್‌ ಕೊಟ್ರಿ ಎಂದ ಸಿದ್ದೇಶ್ವರ:
ತಮ್ಮದೇ ಕೇಂದ್ರ ಸರ್ಕಾರ ಇರುವಾಗ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಿಂದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅತೀವ ಬೇಸರಗೊಂಡಿದ್ದು, ‘ಪಕ್ಷಕ್ಕೆ ನಮ್ಮ ಕುಟುಂಬ ಕೊಟ್ಟಿರುವ ಕೊಡುಗೆಗೆ ಬಹಳ ಒಳ್ಳೆಯ ರಿಟರ್ನ್‌ ಗಿಫ್ಟ್‌ ನೀಡಿದ್ದೀರಿ. ಕಳೆದ ವರ್ಷ ಹುಟ್ಟುಹಬ್ಬದ ದಿನದಂದೇ ಮಂತ್ರಿ ಸ್ಥಾನ ಕಸಿದುಕೊಂಡು ಮುಜುಗರ ಮಾಡಿದ್ರಿ. ಈಗ ಐಟಿ ದಾಳಿ ನಡೆಸಿದ್ದೀರಿ' ಎಂದು ಪಕ್ಷದ ಹಿರಿಯ ನಾಯಕರ ಬಳಿ ಹೇಳಿ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. 

ಖರ್ಗೆ ಮನದಾಳ ಅರಿಯದ ರಾಹುಲ್‌!
ಮಲ್ಲಿಕಾರ್ಜುನ ಖರ್ಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ನಂತರ ಜುಲೈ ಕೊನೆಯ ವಾರದವರೆಗೆ ದೆಹಲಿ ನಿವಾಸದಲ್ಲಿಯೇ ವಿಶ್ರಾಂತಿ ಪಡೆ​ಯ​ಲಿ​​ದ್ದಾರೆ. ದಿನವೂ ಮನೆಯಲ್ಲಿಯೇ ಫಿಸಿಯೋಥೆರಪಿ ನಡೆಯುತ್ತಿದ್ದು, ಅವರು ಸರಾಗವಾಗಿ ನಡೆದಾಡಲು ಒಂದು ತಿಂಗಳು ಬೇಕಾಗ​ಬ​ಹು​ದಂತೆ. ಖರ್ಗೆಯವರ ಜ್ಯೇಷ್ಠ ಪುತ್ರ ರಾಹುಲ್‌ ಅವರು ತಂದೆಯ ಯೋಗ​ಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಏಮ್ಸ್‌ ಆಸ್ಪತ್ರೆ​ಯಲ್ಲಿ ಶಸ್ತ್ರಚಿಕಿತ್ಸೆಗಿಂತ ಮೊದಲು ನೋಡಲು ಬಂದಿದ್ದ ರಾಹುಲ್‌ ಗಾಂಧಿ, ‘ಖರ್ಗೆಜೀ, ನೈಸರ್ಗಿಕವಾಗಿರಿ. ವಯಸ್ಸಾದ ನಂತರ ಮಂಡಿ ಸವೆತ ಸಹಜ. ಆದರೆ ಇದಕ್ಕೆ ಅನೈಸರ್ಗಿಕವಾಗಿ ಶಸ್ತ್ರ ಕ್ರಿಯೆ ನಡೆಸಿ ಏನನ್ನೋ ಕೂರಿಸುವುದು ಸರಿಯಲ್ಲ. ಆಪರೇಷನ್‌ ಬೇಡವೇ ಬೇಡ' ಎಂದೆಲ್ಲ ಹೇಳಿದರಂತೆ. ನಂತರ ವೈದ್ಯರು ಬಂದು ರಾಹುಲ್‌ ಅವರಿಗೆ ಎಲ್ಲವನ್ನೂ ವಿವರಿಸಬೇಕಾಯಿತಂತೆ. 2018ರಲ್ಲಿ ಮುಖ್ಯ​ಮಂತ್ರಿ​​ಯಾಗುವ ಆಸೆ ಇಟ್ಟುಕೊಂಡಿರುವ ಖರ್ಗೆ ಸಾಹೇಬರು ಫಿಟ್‌ ಆ್ಯಂಡ್‌ ಫೈನ್‌ ಆಗುತ್ತಿರುವುದು ರಾಹುಲ್‌'ಗೆ ಅರ್ಥವಾದಂತಿಲ್ಲ.

ಕನ್ನಡ ಕಲಿಯುತ್ತಿರುವ ಸಚಿವೆ ನಿರ್ಮಲಾ:
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಕನ್ನಡ ಕಲಿಯಲು ಶಿಕ್ಷಕರೊಬ್ಬರನ್ನು ನೇಮಿಸಿ​ಕೊಂಡಿದ್ದು, 2018ರ ಚುನಾವಣೆಗೆ ಓದಲು, ಬರೆಯಲು ಕಲಿ​ಯ​ಬೇಕೆಂದು ನಿರ್ಧರಿಸಿದ್ದಾರಂತೆ. 15 ವರ್ಷ ಕರ್ನಾಟಕದಿಂದ ಆಯ್ಕೆ​​ಯಾಗಿದ್ದರೂ ಕನ್ನಡ ಕಲಿಯದ ವೆಂಕಯ್ಯ ನಾಯ್ಡುಗಿಂತ ನಿರ್ಮಲಾ ಸ್ವಲ್ಪ ವಾಸಿ. ಆದರೆ ತೋರಿಕೆಗೆ ಕನ್ನಡ ಕಲಿತರೆ ಸಾಲದು, ದಿಲ್ಲಿ​​​ಯಲ್ಲಿ ಕನ್ನಡಕ್ಕೆ ಆಗಬೇಕಾದ ಕೆಲಸ ಮಾಡಿಕೊಡುವುದೂ ಮುಖ್ಯ ಎಂದು ಮೇಡಂಗೆ ಯಾರಾದರೂ ತಿಳಿಸಿಕೊಡಬೇಕಿದೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌
epaper.kannadaprabha.in

Follow Us:
Download App:
  • android
  • ios