ಇನ್ನೇರಡು ವರ್ಷದಲ್ಲಿ ಕೇಂದ್ರ ಸರ್ಕಾರ ಏನು ಮಾಡಲಿದೆ?| 2 ವರ್ಷದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಎಫ್‌ಡಿಐ ನಿರೀಕ್ಷೆ| ಜಪಾನ್, ದ.ಕೊರಿಯಾ, ಚೀನಾ, ರಷ್ಯನ್ ಕಂಪನಿಗಳಿಂದ ಹೂಡಿಕೆ| ವಿದೇಶಿ ನೇರ ಬಂಡವಾಳ ಹೂಡಿಕೆ ಕೇಂದ್ರ ಸರ್ಕಾರದ ಪ್ರಮುಖ ಗುರಿ| ಹೂಡಿಕೆದಾರರನ್ನು ಆಕರ್ಷಿಸಲು ಕೈಗಾರಿಕಾ ಕ್ಲಸ್ಟರ್‌ಗಳ ಸೃಷ್ಟಿ

ನವದೆಹಲಿ(ಡಿ.27): ಮುಂದಿನ ಎರಡು ವರ್ಷದಲ್ಲಿ 100 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ ಕೇಂದ್ರ ಸರ್ಕಾರದ ಪ್ರಮುಖ ಗುರಿ ಎಂದು ಕೇಂದ್ರ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ಜಪಾನ್, ದಕ್ಷಿಣ ಕೊರಿಯಾ, ಚೀನಾ ಮತ್ತು ರಷ್ಯಾ ದೇಶದ ಕಂಪನಿಗಳು ಹೂಡಿಕೆ ಮಾಡಿ ಕಾರ್ಯಾರಂಭಿಸಲು, ವಿಶೇಷ ಕೈಗಾರಿಕಾ ಕ್ಲಸ್ಟರ್ ಸೃಷ್ಟಿಸುವುದು ಭಾರತದ ಪ್ರಮುಖ ಗುರಿಯಾಗಿದೆ ಎಂದು ಸುರೇಶ್ ಪ್ರಭು ಹೇಳಿದರು.

ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ಹೂಡಿಕೆ ಮಾಡಬಲ್ಲ ದೇಶಗಳು ಹಾಗೂ ವಲಯಗಳನ್ನು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದಿಂದ ಗುರುತಿಸಲಾಗುವುದು ಎಂದು ಸುರೇಶ್ ಪ್ರಭು ಮಾಹಿತಿ ನೀಡಿದ್ದಾರೆ.

ವಿವಿಧ ವಲಯಗಳಿಂದ 100 ಬಿಲಿಯನ್ ಎಫ್‌ಡಿಎ ಭಾರತಕ್ಕೆ ಹರಿದುಬರಬೇಕೆಂಬ ಗುರಿ ಹೊಂದಲಾಗಿದೆ. ಇಷ್ಟು ಅಗಾಧ ಪ್ರಮಾಣದ ಹೂಡಿಕೆ ಮಾಡಬಲ್ಲ ಕಂಪನಿಗಳು, ವಲಯಗಳು ಮತ್ತು ದೇಶಗಳನ್ನು ಗುರುತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. 

ಮುಂದಿನ ವರ್ಷ ಸಾಗರೋತ್ತರ ಹೂಡಿಕೆದಾರರನ್ನು ಆಕರ್ಷಿಸಲು ಕೈಗಾರಿಕಾ ಕ್ಲಸ್ಟರ್‌ಗಳನ್ನು ಸೃಷ್ಟಿಸಲಾಗುವುದು, ಭಾರತದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಚೀನಾ ಒಪ್ಪಿಕೊಂಡಿದ್ದು, ಭಾರತದಲ್ಲ ಕಾರ್ಖಾನೆ ಸ್ಥಾಪಿಸಲು ಉತ್ಸುಕವಾಗಿರುವ ಕಂಪನಿಗಳ ಪಟ್ಟಿಯನ್ನು ನೀಡಿದೆ. 

ಇದೇ ರೀತಿಯಲ್ಲಿ ಯುರೋಪ್ ಮತ್ತು ಅಮೆರಿಕಾ ಮತ್ತಿತರ ರಾಷ್ಟ್ರಗಳ ಕಂಪನಿಗಳನ್ನೂ ಸ್ವಾಗತಿಸಲಾಗುವುದು. ಭಾರತದಲ್ಲಿ ಅವುಗಳಿಗೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಸುರೇಶ್ ಪ್ರಭು ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ.