ಮಂಗಳೂರು :  ಉರಿ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಸರ್ಜಿಕಲ್‌ ದಾಳಿ ಮತ್ತು ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದಲ್ಲಿ ವಾಯುದಾಳಿ ನಡೆಸಿರುವುದು ಗೊತ್ತು. ಇದರ ಜತೆಗೆ, ಭಾರತ ಮತ್ತೊಂದು ರಹಸ್ಯ ಸರ್ಜಿಕಲ್‌ ದಾಳಿ ನಡೆಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಆದರೆ, ಈ ಕುರಿತು ಯಾವುದೇ ಮಾಹಿತಿ ನೀಡದೆ ರಹಸ್ಯ ಕಾಪಾಡಿಕೊಂಡಿದ್ದಾರೆ.

ನಗರದಲ್ಲಿ ಶನಿವಾರ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಮೂರನೇ ಸರ್ಜಿಕಲ್‌ ದಾಳಿ ಕುರಿತು ಬಾಯ್ಬಿಟ್ಟರು.

‘‘ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಪಾಕ್‌ ವಿರುದ್ಧ ಮೂರು ಸರ್ಜಿಕಲ್‌ ದಾಳಿ ನಡೆಸಲಾಗಿದೆ. ಉರಿ ದಾಳಿ ಬಳಿಕ ಬಾಲಾಕೋಟ್‌ ದಾಳಿ ನಡೆಸಿ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಲಾಗಿದೆ. ಇದಲ್ಲದೆ ಇನ್ನೊಂದು ಸರ್ಜಿಕಲ್‌ ದಾಳಿ ಕೂಡ ಭಾರತದ ಕಡೆಯಿಂದ ನಡೆದಿದೆ. ಆದರೆ, ಅದು ಯಾವುದೆಂದು ನಾನು ಹೇಳುವುದಿಲ್ಲ’’ ಎಂದು ಅವರು ಹೇಳಿದರು.

ದೇಶಕ್ಕೆ ಭಯೋತ್ಪಾದನೆಯನ್ನು ಮಟ್ಟಹಾಕುವ ಸಾಮರ್ಥ್ಯವಿದೆ ಎಂಬುದನ್ನು ಭಾರತ ಜಗತ್ತಿಗೇ ತೋರಿಸಿಕೊಟ್ಟಿದೆ. ಉಗ್ರವಾದವನ್ನು ಯಾರು ಮುಂದುವರಿಸಿದರೂ ಅದಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು. ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆಸಿ ಭಾರತದ 40 ಮಂದಿ ಯೋಧರನ್ನು ಪಾಕಿಸ್ತಾನ ಹತ್ಯೆ ಮಾಡಿದೆ. ಇದರಲ್ಲಿ ಕರ್ನಾಟಕದ ಯೋಧರೊಬ್ಬರೂ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರ ಮಾತೆಯರ ಶಪಥವನ್ನು ಪ್ರತಿ ದಾಳಿ ನಡೆಸುವ ಮೂಲಕ ಭಾರತ ಈಡೇರಿಸಿದೆ. 56 ಇಂಚಿನ ಪ್ರಧಾನಿಯ ಎದೆಗಾರಿಕೆ ಬಗ್ಗೆ ಕುಹಕದ ಮಾತನಾಡುವ ಪ್ರತಿಪಕ್ಷಗಳಿಗೆ ಪ್ರಧಾನಿ 65 ಇಂಚಿನ ಎದೆಗಾರಿಕೆಯನ್ನೇ ತೋರಿಸಿಕೊಟ್ಟಿದ್ದಾರೆ ಎಂದು ರಾಜನಾಥ್‌ ಸಿಂಗ್‌ ಟಾಂಗ್‌ ನೀಡಿದರು.

ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಭಾರತ ಎಂದಿಗೂ ಸುಮ್ಮನೆ ಕೂರುವುದಿಲ್ಲ. ಉಗ್ರರನ್ನು ಪೋಷಿಸಿದರೆ ಅಥವಾ ಬೆಂಬಲಿಸಿ ಆಶ್ರಯ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಇದಕ್ಕಾಗಿಯೇ ಭಾರತದ ಮೇಲೆ ಪಾಕಿಸ್ತಾನ ಅಮೆರಿಕದ ಯುದ್ಧಾಸ್ತ್ರಗಳನ್ನು ಬಳಸಿದ ಬಗ್ಗೆ ಪುರಾವೆ ಒದಗಿಸಿತ್ತು. ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ಗೆ ಆಶ್ರಯ ಕೊಟ್ಟಿರುವುದು ಅಮೆರಿಕ ಕಾರ್ಯಾಚರಣೆಯಿಂದ ಜಗತ್ತಿಗೇ ಗೊತ್ತಾಗಿದೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಮತ್ತೆ ಭಾರತದ ಮೇಲೆ ಸಮರಕ್ಕೆ ಹವಣಿಸುತ್ತಿದೆ. ಆದರೆ, ಭಾರತ ಎಂದಿಗೂ ಯಾರಿಗೂ ಜಗ್ಗುವುದಿಲ್ಲ. ಭಯೋತ್ಪಾದನೆಯನ್ನು ಹೇಗೆ ಎದುರಿಸಬೇಕು ಎಂಬುದು ದೇಶಕ್ಕೆ ಚೆನ್ನಾಗಿ ಗೊತ್ತು. ಹಾಗಾಗಿಯೇ ಬಾಲಾಕೋಟ್‌ ದಾಳಿ ವೇಳೆ ಜಗತ್ತಿನ ಯಾವುದೇ ದೇಶ ಪಾಕಿಸ್ತಾನದ ಬೆಂಬಲಕ್ಕೆ ಬಂದಿಲ್ಲ. ಈ ಕಾರ್ಯಾಚರಣೆಯ ಸುಳಿವು ಕೂಡ ಪಾಕ್‌ಗೆ ಸಿಕ್ಕಿರಲಿಲ್ಲ. ಮುಂದೆಯೂ ಪಾಕಿಸ್ತಾನ ಕಾಲುಕೆರೆದು ಜಗಳಕ್ಕೆ ಬಂದರೆ ಜನ್ಮಜಾಲಾಡಿಸಲು ದೇಶ ಸಿದ್ಧವಿದೆ ಎಂದು ಗುಡುಗಿದರು.

ಅಗ್ರಮಾನ್ಯ ರಾಷ್ಟ್ರಗಳ ಸಾಲಿಗೆ ಭಾರತ: 2028ರ ವೇಳೆಗೆ ಜಗತ್ತಿನ ಮೂರು ಅಗ್ರಮಾನ್ಯ ರಾಷ್ಟ್ರಗಳ ಸಾಲಿನಿಂದ ಒಂದು ರಾಷ್ಟ್ರ ಹೊರಬೀಳಲಿದ್ದು, ಆ ಜಾಗಕ್ಕೆ ಭಾರತ ಸೇರ್ಪಡೆಯಾಗಲಿದೆ. ಪ್ರಸಕ್ತ ಅಮೆರಿಕ, ರಷ್ಯಾ ಹಾಗೂ ಚೀನಾ ಅಗ್ರಮಾನ್ಯ ರಾಷ್ಟ್ರಗಳ ಸಾಲಿನಲ್ಲಿವೆ. ಇವುಗಳಲ್ಲಿ ಒಂದು ರಾಷ್ಟ್ರ ಹೊರಬಿದ್ದು, ಅಲ್ಲಿಗೆ ಭಾರತ ಸೇರ್ಪಡೆಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸ್ಥಿರ ಸರ್ಕಾರ ತನ್ನಿ: ಗೃಹ ಸಚಿವ

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಕಿಚಡಿ ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್‌ನ ಅಣತಿಯಂತೆ ಮುಖ್ಯಮಂತ್ರಿ ಅಧಿಕಾರ ನಡೆಸುತ್ತಿದ್ದಾರೆ. ಇಲ್ಲಿ ಸ್ಥಿರ ಸರ್ಕಾರ ರಚನೆಯಾಗಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಬೇಕು. ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲವನ್ನು ಪೂರ್ತಿಯಾಗಿ ಮನ್ನಾ ಮಾಡಿಲ್ಲ. ‘ಕಿಸಾನ್‌ ಸಮ್ಮಾನ್‌’ ಯೋಜನೆ ಮೂಲಕ ರೈತರ ಖಾತೆಗೆ ವಾರ್ಷಿಕ .6 ಸಾವಿರ ಜಮೆ ಮಾಡುವ ಯೋಜನೆಗೆ ರಾಜ್ಯ ಸರ್ಕಾರ ರೈತರ ಪಟ್ಟಿನೀಡದೆ ಅಡ್ಡಗಾಲು ಹಾಕುತ್ತಿದೆ ಎಂದರು.