ಭಾರತೀಯ ರೈಲುಗಳ ಶುಚಿತ್ವಕ್ಕೆ ಪ್ರಯಾಣಿಕರಿಂದ ರೇಟಿಂಗ್‌ಕಡಿಮೆ ರೇಟಿಂಗ್‌ ಪಡೆದ್ರೆ, ಗುತ್ತಿಗೆದಾರರ ಪೇಮೆಂಟ್‌ ಕಟ್‌ರೈಲು, ನಿಲ್ದಾಣಗಳ ನೈರ್ಮಲ್ಯಕ್ಕಾಗಿ ಇಲಾಖೆ ಹೊಸ ಪ್ಲಾನ್‌

ನವದೆಹಲಿ: ರೈಲು ಮತ್ತು ರೈಲ್ವೆ ನಿಲ್ದಾಣಗಳ ಗುಣಮಟ್ಟಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಇದೀಗ ರೈಲು ನಿಲ್ದಾಣಗಳ ಮತ್ತು ರೈಲುಗಳ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಪ್ರಯಾಣಿಕರು ರೇಟಿಂಗ್‌ ನೀಡುವ ವ್ಯವಸ್ಥೆ ಜಾರಿಗೆ ನಿರ್ಧರಿಸಿದೆ. ಪ್ರಯಾಣಿಕರ ರೇಟಿಂಗ್‌ ಆಧರಿಸಿ, ಸ್ವಚ್ಛ ಕಾರ್ಯಕ್ಕೆ ನಿಯೋಜನೆಯಾಗಿರುವ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗುತ್ತದೆ.

ಪ್ರಯಾಣಿಕರ ಫೀಡ್‌ಬ್ಯಾಕ್‌ಗಳನ್ನು ಜಿಪಿಎಸ್‌ ಆಧಾರಿತ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗುತ್ತದೆ. ರೈಲ್ವೆ ನಿಲ್ದಾಣ ಮತ್ತು ರೈಲುಗಳ ಸ್ವಚ್ಛತೆಗೆ ಅನುಗುಣವಾಗಿ ಪ್ರಯಾಣಿಕರು ನೀಡುವ ರೇಟಿಂಗ್‌ ಆಧರಿಸಿ, ಗುತ್ತಿಗೆದಾರರಿಗೆ ಪಾವತಿಸಲು ನಿರ್ಧರಿಸಲಾಗಿದ್ದು, ಸ್ವಚ್ಛತೆ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿ ರೇಟಿಂಗ್‌ ನೀಡಿದಲ್ಲಿ, ಗುತ್ತಿಗೆದಾರರ ಮೇಲೆ ಶೇ.30ರಷ್ಟುದಂಡ ವಿಧಿಸಲಾಗುತ್ತದೆ.

ಉಳಿದಂತೆ ಸ್ವಚ್ಛತೆಗಾಗಿನ ಸಿಬ್ಬಂದಿಗಳ ಹಾಜರಾತಿ, ಶುಚಿತ್ವ ಸೇರಿದಂತೆ ಇತರ ಅಂಶಗಳು ರೈಲ್ವೆ ಇಲಾಖೆಯಿಂದ ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಾದ ಹಣದ ಮೇಲೆ ಪರಿಣಾಮ ಉಂಟಾಗಲಿದೆ. ಪ್ರಯಾಣಿಕರ ರೇಟಿಂಗ್‌ ಆಧರಿಸಿಯೇ ಗುತ್ತಿಗೆದಾರರ ಮೇಲೆ ದಂಡ ವಿಧಿಸಬೇಕೆ ಅಥವಾ ಪ್ರೋತ್ಸಾಹಕ ಹಣ ನೀಡಬೇಕೆ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ.