Asianet Suvarna News Asianet Suvarna News

ಗುತ್ತಿಗೆದಾರರ ಬಳಿ ಸಿಕ್ಕಿದ್ದು 6.7 ಕೋಟಿ ಅಕ್ರಮ ಹಣ!

 ರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಅಕ್ರಮ ಹಣ ಸಾಗಣೆ ಮೇಲೆ ನಿಗಾ ವಹಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಗುತ್ತಿಗೆದಾರರ ಮೇಲೆ ನಡೆಸಿದ ದಾಳಿ ಪ್ರಕರಣ ಸೇರಿದಂತೆ ಒಟ್ಟು 10.62 ಕೋಟಿ ರು. ನಗದು ಮತ್ತು 1.33 ಕೋಟಿ ರು. ಮೌಲ್ಯದ ಚಿನ್ನಾಭರಣಗಳನ್ನು ರಾಜ್ಯದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
 

Income Tax Officers Raid

 ಬೆಂಗಳೂರು :  ರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಅಕ್ರಮ ಹಣ ಸಾಗಣೆ ಮೇಲೆ ನಿಗಾ ವಹಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಗುತ್ತಿಗೆದಾರರ ಮೇಲೆ ನಡೆಸಿದ ದಾಳಿ ಪ್ರಕರಣ ಸೇರಿದಂತೆ ಒಟ್ಟು 10.62 ಕೋಟಿ ರು. ನಗದು ಮತ್ತು 1.33 ಕೋಟಿ ರು. ಮೌಲ್ಯದ ಚಿನ್ನಾಭರಣಗಳನ್ನು ರಾಜ್ಯದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ 10 ಮತ್ತು ಬೆಂಗಳೂರಿನಲ್ಲಿ ಒಬ್ಬರು ಗುತ್ತಿಗೆದಾರರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಲಭ್ಯವಾದ ನಗ-ನಾಣ್ಯ, ಆಸ್ತಿಯ ವಿವರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈ ಪೈಕಿ ನಾಲ್ವರು ಗುತ್ತಿಗೆದಾರರ ನಿವಾಸದಲ್ಲಿ 6.76 ಕೋಟಿ ರು. ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಜಪ್ತಿಯಾದ 6.76 ಕೋಟಿ ರು.ಗಳು 500 ರು. ಮತ್ತು 2 ಸಾವಿರ ರು. ನೋಟುಗಳಲ್ಲಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನುಳಿದ ಏಳು ಮಂದಿ ಗುತ್ತಿಗೆದಾರರ ನಿವಾಸದಲ್ಲಿ ಏನು ದೊರೆತಿದೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.

6.76 ಕೋಟಿ ರು. ಬಗ್ಗೆ ನಾಲ್ವರು ಗುತ್ತಿಗೆದಾರರು ತಮ್ಮ ವ್ಯವಹಾರಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ ಪುಸ್ತಕದಲ್ಲಿಯೂ ಉಲ್ಲೇಖ ಮಾಡಿಲ್ಲ. ಇನ್ನು, ಈ ಗುತ್ತಿಗೆದಾರರು ಬೇನಾಮಿ ಹೆಸರುಗಳಲ್ಲಿ ಲಾಕರ್‌ನಲ್ಲಿ ಕೋಟ್ಯಂತರ ರು. ನಗದು, ಅಘೋಷಿತ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನಿಟ್ಟಿರುವುದು ಪತ್ತೆಯಾಗಿತ್ತು. ಕೋಟ್ಯಂತರ ರು. ಗೌಪ್ಯವಾಗಿಟ್ಟು ಅದನ್ನು ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ದಾಳಿ ನಡೆಸಲಾದ ಗುತ್ತಿಗೆದಾರರು ಕೆಲ ರಾಜಕೀಯ ಮುಖಂಡರ ಆಪ್ತರಾಗಿದ್ದಾರೆ. ಮತದಾರರಿಗೆ ಹಣ ಹಂಚುವ ಉದ್ದೇಶದಿಂದ ಹಣ ಬಚ್ಚಿಟ್ಟಿದ್ದರು. ಸರ್ಕಾರದಿಂದ ಗುತ್ತಿಗೆ ನೀಡುವ ಸಂಬಂಧ ರಾಜಕಾರಣಿಗಳು ಮತ್ತು ಗುತ್ತಿಗೆದಾರರ ನಡುವೆ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ.

ಚುನಾವಣೆ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡಲು ಕೋಟ್ಯಂತರ ರು. ನೀಡಲು ಒಪ್ಪಿಕೊಂಡ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಗುತ್ತಿಗೆದಾರರೊಂದಿಗೆ ಒಡನಾಟ ಹೊಂದಿರುವ ರಾಜಕಾರಣಿಗಳು ಮತ್ತವರ ಆಪ್ತರ ಮೇಲೆ ಐಟಿ ಇಲಾಖೆ ತೀವ್ರ ನಿಗಾ ವಹಿಸಿದೆ. ಶೀಘ್ರದಲ್ಲಿಯೇ ಅವರ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Follow Us:
Download App:
  • android
  • ios