ನವದೆಹಲಿ[ಆ.31]: ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಬಿಐ ಶುಕ್ರವಾರ ದೇಶಾದ್ಯಂತ 150 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದೆ.

ಬೆಂಗಳೂರು, ದೆಹಲಿ, ಜೈಪುರ, ಜೋಧ್‌ಪುರ, ಗುವಾಹಟಿ, ಶ್ರೀನಗರ, ಶಿಲ್ಲಾಂಗ್‌, ಚಂಡೀಗಢ, ಶಿಮ್ಲಾ, ಚೆನ್ನೈ, ಮಧುರೈ, ಕೋಲ್ಕತಾ, ಹೈದರಾಬಾದ್‌, ಮುಂಬೈ, ಪುಣೆ, ಗಾಂಧಿನಗರ, ಗೋವಾ, ಭೋಪಾಲ್, ಜಬಲ್ಪುರ, ನಾಗ್ಪುರ, ಪಾಟ್ನಾ, ರಾಂಚಿ, ಗಾಜಿಯಾಬಾದ್‌, ಲಖನೌ ಹಾಗೂ ಡೆಹ್ರಾಡೂನ್‌ ಸೇರಿ ಹಲವೆಡೆ ಕೇಂದ್ರ ಸರ್ಕಾರದ ಇಲಾಖೆ, ಕೇಂದ್ರಾಡಳಿತ ಪ್ರದೇಶ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ ಸಿಬಿಐ ದಾಳಿ ನಡೆಸಿದೆ.

ಹೆಚ್ಚು ಭ್ರಷ್ಟಾಚಾರ ನಡೆಯುವ ಕಚೇರಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸಿಬಿಐ ದಾಳಿ ನಡೆಸಿದೆ. ರೈಲ್ವೇ, ಕಲ್ಲಿದ್ದಲು, ವೈದ್ಯಕೀಯ, ಅಬಕಾರಿ, ಬ್ಯಾಂಕ್‌, ನಗರ ಪಾಲಿಕೆ, ಜಿಎಸ್‌ಟಿ ಕಚೇರಿ, ಬಂದರು ಹಾಗೂ ಹೆದ್ದಾರಿ ಪ್ರಾಧಿಕಾರ, ಏರ್‌ಪೋರ್ಟ್‌ ಪ್ರಾಧಿಕಾರ ಸೇರಿ ಹಲವು ಸರ್ಕಾರಿ ಕಚೇರಿಗಳ ಸಿಬಿಐ ಅಚ್ಚರಿಯ ದಾಳಿ ನಡೆಸಿ ಭ್ರಷ್ಟಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ಜನ ಜೀವನ ಸುಗಮಗೊಳಿಸಲು ಪ್ರಯತ್ನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಸಲಹೆಯಂತೆ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.