ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ನಿರ್ಮಿಸುವ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ, ಥಾಯ್ಲೆಂಡ್‌ನ ಅಯುಥ್ಯಾ ಎಂಬಲ್ಲಿ ವೈಭವೋಪೇತ ರಾಮ ಮಂದಿರ ನಿರ್ಮಾಣಕ್ಕೆ ರಾಮಜನ್ಮಭೂಮಿ ನಿರ್ಮಾಣ ನ್ಯಾಸ್ ಟ್ರಸ್ಟ್ ಬುಧವಾರ ಭೂಮಿ ಪೂಜೆ ನೆರವೇರಿಸಿದೆ. 

ಈ ಮೂಲಕ ಜಾಗತಿಕ ಮಟ್ಟದಲ್ಲಿ ರಾಮನ ಹಿರಿಮೆ ಸಾರಲು ಮುಂದಾಗಿದೆ. ಭಾರತದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ, ಅಲ್ಲಿ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಹೀಗಾಗಿ ಥಾಯ್ಲೆಂಡ್‌ನ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಿಸಿದ್ದೇವೆ. 2019ರಲ್ಲಿ  ಭಾರತದಲ್ಲೂ ಇದೇ ರೀತಿಯ ನಿರ್ಮಾಣ ಕಾರ್ಯ ಆರಂಭವಾಗುವ ವಿಶ್ವಾಸವಿದೆ ಎಂದು ರಾಮ ಜನ್ಮಭೂಮಿ ನಿರ್ಮಾಣ ನ್ಯಾಸ್ ಟ್ರಸ್ಟ್‌ನ ಅಧ್ಯಕ್ಷ ಮಹಾಂತ ಜನ್ಮೇಜಯ ಶರಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಥಾಯ್ಲೆಂಡ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಒಂದಾ ಅಯುಥ್ಯಾ, 15 ನೇ ಶತಮಾನದಲ್ಲಿ ಥಾಯ್ಲೆಂಡ್‌ನ ರಾಜಧಾನಿ ಯಾಗಿತ್ತು. ಅಯುಥ್ಯಾ ಎಂದರೆ ಸ್ಥಳೀಯ ಭಾಷೆಯಲ್ಲಿ ಅಯೋಧ್ಯೆ ಎಂದೇ ಅರ್ಥ ಇದೇ ನಗರದ ಮಧ್ಯಭಾಗದಲ್ಲಿ ಹಾದು ಹೋಗುವ ಚಾವೋ ಫ್ರಯಾ ನದಿಯ ದಡದಲ್ಲಿ ಹೊಸ ಮಂದಿರ ನಿರ್ಮಿಸಲಾಗುವುದು ಎಂದು ಮಹಾಂತ ಹೇಳಿದ್ದಾರೆ.

ಇತಿಹಾಸ: 15 ನೇ ಶತಮಾನದ ಅವಧಿಯಲ್ಲಿ ಬರ್ಮಾ ಸೈನಿಕರು ಈ ನಗರದ ಮೇಲೆ ದಾಳಿ ನಡೆಸಿ ವಶಪಡಿಸಿ ಕೊಂಡ ಬಳಿಕ ಹೊಸ ರಾಜಮನೆತನ ಉದಯವಾಯಿ ತಂತೆ. ಈ ರಾಜ್ಯದ ರಾಜ ತನ್ನನ್ನು ತಾನು ರಾಮ ಎಂದು ಕರೆದುಕೊಂಡು, ನಗರಕ್ಕೆ ಅಯುಥ್ಯಾ ಎಂದು ಹೆಸರಿಟ್ಟ. ಈ ರಾಜ ಬುದ್ಧನ ಅನುಯಾಯಿಯಾಗಿದ್ದರೂ, ತನ್ನನ್ನು ತಾನು ದೇವತೆಯಾದ ರಾಮ ಎಂದೇ ಕರೆದುಕೊಳ್ಳುತ್ತಿದ್ದ ಎಂದು ಎಂದು ಥಾಯ್ಲೆಂಡ್‌ನಲ್ಲಿ ರಾಮಾಯಣ ಎಂದು ಕರೆಯಲಾಗುವ ರಾಮಕೇನ್ ಎಂಬ ಮಹಾಕಾವ್ಯದಲ್ಲಿದೆ.