ನವದೆಹಲಿ(ಜೂ.01): ಪ್ರಧಾನಿ ಮೋದಿ ಸಂಪುಟದ 56 ಸಚಿವರ ಪೈಕಿ 51 ಸಚಿವರು ಕೋಟ್ಯಧೀಶ್ವರರಾಗಿದ್ದು, ಇವರಲ್ಲಿ 22 ಸಚಿವರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.

ಈ ಕುರಿತು ವರದಿ ಪ್ರಕಟಿಸಿರುವ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, ಪ್ರಧಾನಿ ಮೋದಿ ಸೇರಿದಂತೆ ಒಟ್ಟು 56 ಸಚಿವರ ಆಸ್ತಿ ಮತ್ತು ಹಿನ್ನೆಲೆ ಕುರಿತು ಮಾಹಿತಿ ನೀಡಿದೆ. ರಾಮ್ ವಿಲಾಸ್ ಪಾಸ್ವಾನ್ ಮತ್ತು ಜೈಶಂಕರ್ ಸಂಸತ್ ಸದಸ್ಯರಲ್ಲದ ಕಾರಣಕ್ಕೆ ಇವರ ಕುರಿತು ಮಾಹಿತಿ ನೀಡಿಲ್ಲ.

ಮೋದಿ ಸಂಪುಟದಲ್ಲಿ ಸಚಿವೆಯಾಗಿರುವ ಹರ್ ಸಿಮ್ರತ್ ಕೌರ್ ಬಾದಲ್ ಒಟ್ಟು 217 ಕೋಟಿ ರೂ. ಆಸ್ತಿ ಹೊಂದುವ ಮೂಲಕ ಅತ್ಯಂತ ಶ್ರೀಮಂತ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಪಿಯೂಷ್ ಗೋಯೆಲ್ ಒಟ್ಟು 95 ಕೋಟಿ ರೂ. ಆಸ್ತಿ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಗುರುಗ್ರಾಮ್ ಸಂಸದ ರಾವ್ ಇಂದ್ರಜೀತ್ ಸಿಂಗ್ ಒಟ್ಟು 42 ಕೋಟಿ ರೂ. ಆಸ್ತಿ ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಅದರಂತೆ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅಮಿತ್ ಶಾ ಒಟ್ಟು 40 ಕೋಟಿ ರೂ. ಆಸ್ತಿ ಹೊಂದುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದರೆ, 2 ಕೋಟಿ ರೂ. ಆಸ್ತಿ ಹೊಂದಿರುವ ಪ್ರಧಾನಿ ಮೋದಿ 46ನೇ ಸ್ಥಾನದಲ್ಲಿದ್ದಾರೆ.

ಇನ್ನು ಒಟ್ಟು 22 ಸಚಿವರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ಇವರಲ್ಲಿ 16 ಸಚಿವರ ವಿರುದ್ಧ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿವೆ. ಹತ್ಯೆ ಯತ್ನ, ಕೋಮು ದಂಗೆ ಪ್ರಚೋದನೆ ಆರೋಪ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಂತ ಗಂಭೀರ ಅಪರಾಧ ಪ್ರಕರಣಗಳು ಈ 22 ಸಚಿವರ ಮೇಲಿದೆ ಎನ್ನಲಾಗಿದೆ.