ನಗರದಲ್ಲಿ ಆರಂಭಿಸಲಾಗಿರುವ ‘ಇಂದಿರಾ ಕ್ಯಾಂಟೀನ್’ಗಳಲ್ಲಿ ನೀಡುತ್ತಿರುವ ಊಟ, ತಿಂಡಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಸದ್ಯ ಮೂರು ಹೊತ್ತಿನಲ್ಲಿ 900 ಜನರಿಗೆ ಸೀಮಿತವಿರುವ ಆಹಾರ ನೀಡಿಕೆಯನ್ನು 1500೦ ಜನರಿಗೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂದು ಮೇಯರ್ ಜಿ. ಪದ್ಮಾವತಿ ಹೇಳಿದ್ದಾರೆ.

ಬೆಂಗಳೂರು(ಆ.31): ನಗರದಲ್ಲಿ ಆರಂಭಿಸಲಾಗಿರುವ ‘ಇಂದಿರಾ ಕ್ಯಾಂಟೀನ್’ಗಳಲ್ಲಿ ನೀಡುತ್ತಿರುವ ಊಟ, ತಿಂಡಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಸದ್ಯ ಮೂರು ಹೊತ್ತಿನಲ್ಲಿ 900 ಜನರಿಗೆ ಸೀಮಿತವಿರುವ ಆಹಾರ ನೀಡಿಕೆಯನ್ನು 1500೦ ಜನರಿಗೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂದು ಮೇಯರ್ ಜಿ. ಪದ್ಮಾವತಿ ಹೇಳಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.16ರಿಂದ ಆರಂಭವಾಗಿರುವ 101 ಇಂದಿರಾ ಕ್ಯಾಂಟೀನ್‌'ಗಳಲ್ಲಿ ಇಲ್ಲಿಯವರೆಗೆ ಸುಮಾರು 13ರಿಂದ 14 ಲಕ್ಷ ಜನರು ಆಹಾರ ಸೇವಿಸಿದ್ದಾರೆ. ಅನೇಕ ಕ್ಯಾಂಟೀನ್‌ಗಳಲ್ಲಿ ಸದ್ಯ ನೀಡುತ್ತಿರುವ ತಿಂಡಿ, ಊಟದ ಸಂಖ್ಯೆ ಹೆಚ್ಚಿಸಲು ಮನವಿಗಳು ಬಂದಿವೆ. ಹಾಗಾಗಿ ಮುಖ್ಯಮಂತ್ರಿ ಅವರು ಸದ್ಯ ಪ್ರತಿ ಹೊತ್ತು 300 ಜನರಿಗೆ ನೀಡಲಾಗುತ್ತಿರುವ ಊಟ, ತಿಂಡಿ ಸಂಖ್ಯೆಯನ್ನು 500೦ ಜನರಿಗೆ ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು 2ನೇ ಹಂತದಲ್ಲಿ ಬಾಕಿ 97 ಕ್ಯಾಂಟೀನ್‌'ಗಳ ಉದ್ಘಾಟನೆ ನಡೆಯಲಿದೆ. ಆ ಬಳಿಕ ಊಟ, ತಿಂಡಿ ಸಂಖ್ಯೆ ಹೆಚ್ಚಿಸುವ ಬಗ್ಗೆ ಸೂಕ್ತ ನಿರ್ಧಾ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡಿಮೆ ದರದಲ್ಲಿ ಆಹಾರ ಸಿಗುವಂತೆ ಮಾಡಲು ಆ. 16ರಂದು 101 ವಾರ್ಡ್'ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಅದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈವರೆಗೆ 14 ಲಕ್ಷ ಜನರು ಕ್ಯಾಂಟೀನ್ ನಲ್ಲಿ ಆಹಾರ ಸೇವಿಸಿದ್ದಾರೆ. ಅಲ್ಲದೆ, ಅನೇಕ ಕ್ಯಾಂಟೀನ್‌'ಗಳಲ್ಲಿ ಆಹಾರದ ನೀಡುವ ಸಂಖ್ಯೆ ಹೆಚ್ಚಿಸುವಂತೆ ಮನವಿಗಳು ಬರುತ್ತಿವೆ. ಆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 2ರಂದು ನಡೆಯಲಿರುವ 2ನೇ ಹಂತದಲ್ಲಿನ 97 ಕ್ಯಾಂಟೀನ್‌'ಗಳ ಉದ್ಘಾಟನೆ ನಂತರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

4 ಅಡುಗೆ ಮನೆಗಳು ಸಿದ್ಧ:

ಇದೇ ವೇಳೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕ್ಯಾಂಟೀನ್‌'ಗಳಿಗೆ ಆಹಾರ ಪೂರೈಕೆಗೆ ಹೆಬ್ಬಾಳ, ಚಿಕ್ಕಪೇಟೆ, ಸರ್ವಜ್ಞನಗರ ಮತ್ತು ದಾಸರಹಳ್ಳಿಯಲ್ಲಿ ಒಟ್ಟು ನಾಲ್ಕು ಅಡುಗೆ ಮನೆಗಳ ನಿರ್ಮಾಣ ಕಾರ್ಯ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಈವರೆಗೆ ತಾತ್ಕಾಲಿಕ ಅಡುಗೆ ಮನೆಗಳಿಂದ ಆಹಾರ ತಯಾರಿಸಿ ಪೂರೈಸಲಾಗುತ್ತಿತ್ತು. ನಾಲ್ಕು ಕ್ಯಾಂಟೀನ್‌'ಗಳು ಪೂರ್ಣಗೊಂಡ ಬಳಿಕ ಆಹಾರ ಪೂರೈಕೆಗೆ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುವುದು. ಬಳಿಕ ಅಲ್ಲಿಂದಲೇ ಆಹಾರ ತಯಾರಿಕೆ ಮತ್ತು ಸರಬರಾಜು ನಡೆಯುತ್ತದೆ ಎಂದರು.

2ನೇ ಹಂತದಲ್ಲಿ ಉದ್ಘಾಟನೆಯಾಗಬೇಕಿರುವ 97 ಕ್ಯಾಂಟೀನ್‌ಗಳ ಪೈಕಿ 56 ಕ್ಯಾಂಟೀನ್ ಗಳು ಸಿದ್ಧವಾಗಿವೆ. ಉಳಿದ 41 ಕ್ಯಾಂಟೀನ್‌'ಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದೆ. ಅದಕ್ಕಾಗಿ ಬೇರೆ ಬೇರೆ ಇಲಾಖೆಗಳ ಜಾಗ ಪಡೆಯಲಾಗುತ್ತಿದೆ ಎಂದರು.

ಆರೋಪ ನಿರಾಧಾರ:

ಬಿಬಿಎಂಪಿ ಕಸ ವಿಲೇವಾರಿ ಕಾಂಪ್ಯಾಕ್ಟರ್ ಮತ್ತು ಕಸಗುಡಿಸುವ ಯಂತ್ರ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಸಚಿವ ಕೆ.ಜೆ. ಜಾರ್ಜ್ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಮಾಡಿರುವ ಆರೋಪ ನಿರಾ‘ಾರ ಎಂದು ಮೇಯರ್ ಜಿ. ಪದ್ಮಾವತಿ ಹೇಳಿದ್ದಾರೆ. ಬಿಜೆಪಿಯವರಿಗೆ ಒಬ್ಬ ಮುಖ್ಯಮಂತ್ರಿ ಹುದ್ದೆಯಲ್ಲಿರುವವರ ಬಗ್ಗೆ ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಪರಿಜ್ಞಾನವೂ ಇಲ್ಲದಾಗಿದೆ. ಎನ್.ಆರ್.ರಮೇಶ್ ಬಾಯಿಗೆ ಬಂದಂತೆ ಮಾತನಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಮುಖ್ಯಮಂತ್ರಿ ಅವರ ಬಗ್ಗೆ ಮಾತನಾಡುವುದಕ್ಕೂ ಮುನ್ನ ತಮ್ಮ ಅರ್ಹತೆ ಏನು ಎಂಬುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.