ನವದೆಹಲಿ[ಜು.20]: ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ, ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ಉಮಾ ಭಾರತಿ ಮತ್ತಿತರರು ಆರೋಪಿಗಳಾಗಿರುವ ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಮುಂದಿನ 9 ತಿಂಗಳೊಳಗೆ ಪ್ರಕಟಿಸುವಂತೆ ಉತ್ತರಪ್ರದೇಶದ ವಿಚಾರಣಾ ನ್ಯಾಯಾಲಯಕ್ಕೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಸೂಚನೆ ನೀಡಿದೆ.

ಮುಂದಿನ ಆರು ತಿಂಗಳೊಳಗೆ ಪ್ರಕರಣ ಸಾಕ್ಷ್ಯ ದಾಖಲು ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಆರ್‌.ಎಫ್‌. ನಾರಿಮನ್‌ ಹಾಗೂ ಸೂರ್ಯಕಾಂತ್‌ ಅವರಿದ್ದ ಪೀಠ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರು ಸೆ.30ರಂದು ನಿವೃತ್ತರಾಗಲಿದ್ದಾರೆ. ಮುಂದಿನ 4 ವಾರಗಳಲ್ಲಿ ಅವರ ಅವಧಿಯನ್ನು ವಿಸ್ತರಿಸಬೇಕು. ಸೇವಾವಧಿ ವಿಸ್ತರಣೆ ಬಾಬ್ರಿ ಪ್ರಕರಣದ ವಿಚಾರಣೆಗಷ್ಟೇ ಅನ್ವಯವಾಗುತ್ತದೆ. ಈ ಅವಧಿಯಲ್ಲಿ ಅವರು ಅಲಹಾಬಾದ್‌ ಹೈಕೋರ್ಟಿನ ಆಡಳಿತಾತ್ಮಕ ನಿಯಂತ್ರಣದಲ್ಲೇ ಮುಂದುವರಿಯಲಿದ್ದಾರೆ ಎಂದೂ ಸ್ಪಷ್ಟಪಡಿಸಿದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಪ್ರತಿ ನಿತ್ಯ ವಿಚಾರಣೆ ನಡೆಸಿ, ಎರಡು ವರ್ಷದಲ್ಲಿ ತೀರ್ಪು ಪ್ರಕಟಿಸಬೇಕು ಎಂದು 2017ರ ಏ.19ರಂದು ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಪ್ರಕರಣದ ವಿಚಾರಣೆ ಅಂತಿಮ ಘಟ್ಟತಲುಪಿದ್ದು, ಅದನ್ನು ಇತ್ಯರ್ಥಗೊಳಿಸಲು ಇನ್ನೂ ಆರು ತಿಂಗಳು ಸಮಯಾವಕಾಶ ಬೇಕು ಎಂದು ವಿಶೇಷ ನ್ಯಾಯಾಧೀಶರು ಸೋಮವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.

1992ರ ಡಿ.6ರಂದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದ ವಿನಯ್‌ ಕಟಿಯಾರ್‌, ಸಾಧ್ವಿ ರಿತಾಂಬರ ಅವರೂ ಆರೋಪಿಗಳಾಗಿದ್ದಾರೆ.