ಹೆಸರು, ವಿಳಾಸ ಬಹಿರಂಗಪಡಿಸಲಾಗದ ಗುಪ್ತಚರ ಸಿಬ್ಬಂದಿಗೆ ಸೇವಾ ಪ್ರಶಸ್ತಿ| ಈವರೆಗೆ ಇವರಿಗೆ ಪ್ರಶಸ್ತಿಯೇ ಇರಲಿಲ್ಲ? ಆದರೆ ಈ ಬಾರಿ 37 ಸಿಬ್ಬಂದಿಗೆ ಉತ್ತಮ ಸಾಧನೆಗಾಗಿ ಗೌರವ
ನವದೆಹಲಿ[ಏ.01]: ಗುಪ್ತಚರ ದಳದ 132 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉತ್ತಮ ಸಾಧನೆ ತೋರಿದ ಗುಪ್ತಚರ ಸಿಬ್ಬಂದಿಗೆ ‘ಕುಶಲತಾ ಪ್ರಶಸ್ತಿ’ ನೀಡಲು ನಿರ್ಧರಿಸಲಾಗಿದೆ.
ಸದಾ ಗುಪ್ತಗಾಮಿನಿಯ ರೀತಿಯಲ್ಲಿ ತೆರೆಮರೆಯಲ್ಲೇ ಕೆಲಸ ಮಾಡುತ್ತಿದ್ದ ಗುಪ್ತಚರ ದಳದ ಸಿಬ್ಬಂದಿಗೆ ಈವರೆಗೆ ಪ್ರಶಸ್ತಿ ಎಂಬುದೇ ಇರಲಿಲ್ಲ. ಆದರೆ ಈ 132 ವರ್ಷದ ಇತಿಹಾಸದ ದಿನಗಳನ್ನು ಬದಿಗೆ ಸರಿಸಿ ಇದೇ ಮೊದಲ ಬಾರಿ ‘ಅಸಾಧಾರಣ ಅಸೂಚನಾ ಕುಶಲತಾ ಪದಕ’ ಹೆಸರಿನಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ರಾಜ್ಯಗಳು ಹಾಗೂ ಕೇಂದ್ರ ಗುಪ್ತಚರ ದಳದ ಸಿಬ್ಬಂದಿಗಳು ಪ್ರಶಸ್ತಿ ಪಡೆಯಲು ಅರ್ಹರು. ಮೊದಲ ಪ್ರಶಸ್ತಿ ಪಟ್ಟಿಯಲ್ಲಿ ಮೂವರು ಐಪಿಎಸ್ ಅಧಿಕಾರಿಗಳು ಹಾಗೂ 34 ಇತರ ಗುಪ್ತದಳ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕಾಶ್ಮೀರದಲ್ಲಿ ಉತ್ತಮ ಪತ್ತೇದಾರಿ ಕೆಲಸ ಮಾಡಿದ್ದಕ್ಕೆ, ಉಗ್ರರಿಗೆ ಬರುವ ಹಣದ ಹರಿವಿನ ಸುಳಿವು ನೀಡಿದ್ದಕ್ಕೆ ಹಾಗೂ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಗಾಗಿ ಇವರನ್ನು ಪ್ರಶಸಿಗೆ ಗುರುತಿಸಲಾಗಿದೆ.
‘ಆದರೆ ಪ್ರಶಸ್ತಿ ವಿಜೇತರ ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲ. ಏಕೆಂದರೆ ಪತ್ತೇದಾರಿ ಸಿಬ್ಬಂದಿ ಗುಪ್ತವಾಗಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
