ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಾಗಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು ಜ್ವರದ ಜತೆಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಪರೀಕ್ಷಿಸಿದಾಗ ಎಚ್‌1ಎನ್‌1 ಪತ್ತೆಯಾಗಿದೆ. ಹೀಗಾಗಿ ಭಾರತ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಶಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಅಗತ್ಯ ಸಲಹೆ ಸೂಚನೆ, ಚಿಕಿತ್ಸಾ ನಂತರದ ಅನುಸರಣೆ ಮುಂತಾದ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಿನಲ್ಲಿ ನಡೆಸಲು ಆರೋಗ್ಯ ಇಲಾಖೆ ಆಯುಕ್ತರು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಎಚ್‌1ಎನ್‌1 ಭೀತಿ ತೀವ್ರಗೊಂಡಿದೆ. ಸೆಪ್ಟೆಂಬರ್‌ ತಿಂಗಳ 21 ದಿನದಲ್ಲೇ 102 ಎಚ್‌1ಎನ್‌1 ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಆಸ್ಪತ್ರೆಗಳಲ್ಲೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಾಗಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು ಜ್ವರದ ಜತೆಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಪರೀಕ್ಷಿಸಿದಾಗ ಎಚ್‌1ಎನ್‌1 ಪತ್ತೆಯಾಗಿದೆ. ಹೀಗಾಗಿ ಭಾರತ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಶಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಅಗತ್ಯ ಸಲಹೆ ಸೂಚನೆ, ಚಿಕಿತ್ಸಾ ನಂತರದ ಅನುಸರಣೆ ಮುಂತಾದ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಿನಲ್ಲಿ ನಡೆಸಲು ಆರೋಗ್ಯ ಇಲಾಖೆ ಆಯುಕ್ತರು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

2018ರ ಜನವರಿಯಿಂದ ಸೆಪ್ಟೆಂಬರ್‌ 21ರವರೆಗೆ ಒಟ್ಟು 3,876 ಶಂಕಿತ ಮಾದರಿಗಳನ್ನು ಪರೀಕ್ಷಿಸಿದಾಗ 139 ಪ್ರಕರಣ ದೃಢಪಟ್ಟಿದೆ. ಕಳೆದ ವರ್ಷ ಇದೇ ಸಮಯಕ್ಕೆ 13,849 ಶಂಕಿತ ಮಾದರಿ ಪರೀಕ್ಷಿಸಿದ್ದು 3134 ಪ್ರಕರಣ ದೃಢಪಟ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ದೃಢ ಪಟ್ಟಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ಸೆಪ್ಟೆಂಬರ್‌ ತಿಂಗಳ 21 ದಿನದಲ್ಲೇ 102 ಪ್ರಕರಣಗಳು ಖಚಿತಪಟ್ಟಿವೆ. ಇದು ಆತಂಕಕಾರಿ ವಿಷಯವಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಎಚ್‌1ಎನ್‌1 ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಚ್‌1ಎನ್‌1 ಪ್ರಕರಣಗಳು ವರದಿಯಾದ ಮನೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಪತ್ತೆಗಾಗಿ ಆರೋಗ್ಯ ಕಾರ್ಯಕರ್ತರುಗಳಿಂದ ಸಕ್ರಿಯ ಸಮೀಕ್ಷೆ ನಡೆಸಬೇಕು. ಸಂಶಯಾಸ್ಪದ ‘ಸಿ’ ವರ್ಗದ ಪ್ರಕರಣಗಳಲ್ಲಿ ಗಂಟಲಿನ ದ್ರವ (ಸ್ವಾಬ್‌) ಮಾದರಿಯನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಬೇಕು. ಕ್ಷಿಪ್ರ ಕಾರ್ಯಾಚರಣೆ ತಂಡದ ಸದಸ್ಯರುಗಳ ವಿವರ ಹಾಗೂ ಕಾರ್ಯಾಚರಣೆ ನಡೆಸಿದ ಮಾಹಿತಿ ಬಗ್ಗೆ ನಿರಂತರವಾಗಿ ವರದಿ ಸಲ್ಲಿಸಬೇಕು.

ರೋಗ-ಲಕ್ಷಣಗಳು ಪತ್ತೆಯಾದ ವ್ಯಕ್ತಿಯ ನಿಕಟವರ್ತಿಗಳು ಹಾಗೂ ಕಾಯಿಲೆ ಇರುವವರಿಗೆ ಮಾರ್ಗಸೂಚಿಯಂತೆ ಬಿ ಮತ್ತು ಸಿ ವರ್ಗದ ರೋಗಿಗಳಿಗೆ ಒಂದು ಗಂಟೆ ಒಳಗಾಗಿ ಟಾಮಿಫ್ಲೋ ಮಾತ್ರೆ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡುವುದು. ಹಾಗೂ ‘ಎ’ (ಖಚಿತಪಟ್ಟಿರುವ) ವರ್ಗೀಕರಣದಲ್ಲಿರುವ ರೋಗಿಗಳ ಬಗ್ಗೆ ತೀವ್ರ ಎಚ್ಚರವಹಿಸಬೇಕು ಎಂದು ಸೂಚಿಸಿದ್ದಾರೆ.

ಜತೆಗೆ ತಾಲೂಕು, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆ ಸೇರಿದಂತೆ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಬೇಕು. ಎಚ್‌1ಎನ್‌1 ಚಿಕಿತ್ಸೆಗೆ ಬೇಕಾದ ಔಷಧಿಗಳು ಕೊರತೆಯಿದ್ದರೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಉಚಿತ ಔಷಧಿ ವಿತರಣೆ ಮಾಡಲಾಗುವುದು. ಹೀಗಾಗಲೇ ಈ ಸಂಬಂಧ ಅನುದಾನ ಬಿಡುಗಡೆ ಮಾಡಿದ್ದು, ಬಳಸಿಕೊಂಡು ಸೂಕ್ತ ಔಷಧಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.