ಲಾಹೋರ್‌[ಮಾ.03]: ತನ್ನ ವಶದಲ್ಲಿದ್ದ ಭಾರತೀಯ ವಾಯುಪಡೆಯ ಯೋಧ ಅಭಿನಂದನ್‌ ಅವರನ್ನು ವಾಘಾ ಗಡಿಯಲ್ಲಿ ಶುಕ್ರವಾರದಂದು ಭಾರತಕ್ಕೆ ಹಸ್ತಾಂತರಿಸಿದೆ. ಆದರೆ ಇದಕ್ಕೂ ಮೊದಲು ಹಸ್ತಾಂತರದ ಉಸ್ತುವಾರಿ ನೋಡಿಕೊಳ್ಳಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖುದ್ದು ಲಾಹೋರ್ ಗೆ ಬಂದಿದ್ದರೆಂಬ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಈ ಕುರಿತಾಗಿ ಮಾಹಿತಿ ನೀಡುತ್ತಾ "ಪ್ರಧಾನ ಮಂತ್ರಿ ಖಾನ್ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ಲಾಹೋರ್‌ಗೆ ಆಗಮಿಸಿದ್ದರು" ಎಂದು ತಿಳಿಸಿದ್ದಾರೆ.

ಅಭಿನಂದನ್ ರನ್ನು ಇಸ್ಲಮಾಬಾದ್ ನಿಂದ ವಾಘಾ ಗಡಿಗೆ ಕರೆ ತರುವುದಕ್ಕೂ ಮೊದಲು ಪ್ರಧಾನಿ ಇಮ್ರಾನ್ ಖಾನ್ ಅತಿ ಹೆಚ್ಚು ಭದ್ರತೆಯೊಂದಿಗೆ ಲಾಹೋರ್ ಗೆ ಬಂದಿಳಿದಿದ್ದರು. ಇದಾದ ಬಳಿಕ ಅಭಿನಂದನ್ ರನ್ನು ಪಾಕ್ ಸೇನೆಯ ವಾಘಾ ಬಾರ್ಡರ್ ಗೆ ತೀವ್ರ ಭದ್ರತೆಯೊಂದಿಗೆ ಕರೆ ತಂದಿದ್ದರು ಎಂದು ಮೂಲಗಳು ತಿಳಿಸಿವೆ.