ಇಸ್ಲಾಮಾಬಾದ್‌ (ಆ. 21): ಪಾಕಿಸ್ತಾನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಅವರು ವೆಚ್ಚ ಕಡಿತ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅದರ ಮೊದಲ ಭಾಗವಾಗಿ, ಪಾಕಿಸ್ತಾನ ಪ್ರಧಾನಿಗಳಿಗೆ ವಾಸಿಸುವ ಬಂಗಲೆ, 524 ಸೇವಕರು ಹಾಗೂ 80 ಐಷಾರಾಮಿ ಕಾರುಗಳನ್ನು ಅವರು ತ್ಯಜಿಸಿದ್ದಾರೆ.

ಪ್ರಧಾನಿಗಳ ಅಧಿಕೃತ ನಿವಾಸದ ಬದಲಿಗೆ ತಮ್ಮ ಸೇನಾ ಕಾರ್ಯದರ್ಶಿಯ ಮೂರು ಕೋಣೆಗಳ ಮನೆಯಲ್ಲಿ ಅವರು ಸೋಮವಾರದಿಂದ ವಾಸ್ತವ್ಯ ಆರಂಭಿಸಿದ್ದಾರೆ. 524 ಸೇವಕರ ಪೈಕಿ ಇಬ್ಬರನ್ನು ಹಾಗೂ 80 ಕಾರುಗಳ ಪೈಕಿ ಎರಡನ್ನು ಮಾತ್ರ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿಗಳಿಗಾಗಿ 33 ಬುಲೆಟ್‌ಪ್ರೂಫ್‌ ಕಾರುಗಳು ಇವೆ. ಜತೆಗೆ ಹೆಲಿಕಾಪ್ಟರ್‌ಗಳು, ಏರೋಪ್ಲೇನ್‌ಗಳು ಇವೆ. ಬುಲೆಟ್‌ ಪ್ರೂಫ್‌ ಕಾರುಗಳನ್ನು ಉದ್ಯಮಿಗಳಿಗೆ ಮಾರಾಟ ಮಾಡಿ, ಬೊಕ್ಕಸಕ್ಕೆ ಹಣ ತುಂಬಿಸುತ್ತೇನೆ. ಪಾಕಿಸ್ತಾನ ಪ್ರಧಾನಿಗಳ ಬಂಗಲೆಯನ್ನು ಸಂಶೋಧನಾ ವಿವಿ ಮಾಡುವ ಆಸೆ ಇದೆ ಎಂದು ಸ್ವತಃ ಇಮ್ರಾನ್‌ ತಿಳಿಸಿದ್ದಾರೆ.