ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ‘ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್’ (ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರು ಆ. 14 ರ ಸ್ವಾತಂತ್ರ್ಯಾ ದಿನದ ಮುನ್ನ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಾರೆ. 

ಆದರೆ 115  ಸ್ಥಾನಗಳನ್ನು ಗೆದ್ದಿರುವ ಪಿಟಿಐಗೆ, ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸಾಧಿಸಿರುವ ಗೆಲುವು ಈಗ ಮುಳುವಾಗಿದೆ. ಏಕೆಂದರೆ, ಸ್ವತಃ ಇಮ್ರಾನ್ 5 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಅವರ ಜತೆಗೆ ತಕ್ಷಶಿಲಾದ ಗುಲಾಂ ಸರ್ವಾರ್ ಖಾನ್ 2 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಖೈಬರ್ ಪಖ್ತೂಂಖ್ವ ಪ್ರಾಂತ್ಯದ ಮಾಜಿ ಸಿಎಂ ಪರ್ವೇಜ್ ಅವರು ಲೋಕಸಭೆ ಹಾಗೂ ವಿಧಾನಸಭೆ ಎರಡಕ್ಕೂ ಆಯ್ಕೆಯಾಗಿದ್ದಾರೆ. 

ಈ ಎಲ್ಲಾ ಸ್ಥಾನ ಹೋದರೆ ಪಿಟಿಐ ಬಲ 109 ಕ್ಕೆ ಕುಸಿಯಲಿದೆ. ಇದರ ಅರಿವಿರುವ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಪಿಟಿಐ ಪಕ್ಷ ಪ್ರಯತ್ನ ನಡೆಸುತ್ತಿದೆ. ಮಾತುಕತೆಯಲ್ಲಿ ನಿರತವಾಗಿದೆ. ಬಹುಮತಕ್ಕೆ 137 ಸ್ಥಾನಗಳು ಬೇಕಾಗಿದ್ದು, ಇಮ್ರಾನ್ ಖಾನ್ ಅವರಿಗೆ 28 ಸ್ಥಾನಗಳ ಅಗತ್ಯವಿದೆ.