ಪಾಕಿಸ್ತಾನ ಕ್ರಿಕೆಟ್‌ ಆಟಗಾರನಿಗೆ ಪೊಲೀಸರು ತಳಿಸುತ್ತಿದ್ದಾರೆ ಎಂಬ ಒಕ್ಕಣೆಯೊಂದಿಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಾಕಿಸ್ತಾನ ಮಾಜಿ ಕ್ರಿಕೆಟ್‌ ಆಟಗಾರ ಇಮ್ರಾನ್‌ ಖಾನ್‌ ಅವರಿಗೆ ಪೊಲೀಸರು ತಳಿಸುತ್ತಿದ್ದಾರೆ ಎಂಬ ಒಕ್ಕಣೆಯೊಂದಿಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಜನಸಂದಣಿಯ ನಡುವೆ ಗಾಯಗೊಂಡಿರುವ ಇಮ್ರಾನ್‌ ಖಾನ್‌ ಅವರನ್ನು ಒಂದಿಷ್ಟುಹೊತ್ತು ಜನರು ಕಾರಿನೆಡೆಗೆ ಕೊಂಡೊಯ್ಯುವ ದೃಶ್ಯವಿದೆ. 

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ನಿಜಕ್ಕೂ ಪೊಲೀಸರು ಇಮ್ರಾನ್‌ ಖಾನ್‌ ಅವರನ್ನು ಥಳಿಸಿದ್ದು ನಿಜವೇ? ಹಾಗಾದರೆ ಕಾರಣ ಏನು ಎಂದು ಹುಡುಕ ಹೊರಟಾಗ ಈ ವಿಡಿಯೋ ಹಿಂದಿನ ಅಸಲಿ ಕತೆ ಬಯಲಾಗಿದೆ. ವಾಸ್ತವವಾಗಿ ಈ ವಿಡಿಯೋ ಈಗಿನದ್ದಲ್ಲ. 5 ವರ್ಷದ ಹಿಂದೆ ಅಂದರೆ 2013ರಲ್ಲಿ ನಡೆದ ಘಟನೆ. 2013ರರ ಚುನಾವಣೆಯೊಂದರ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಬಗ್ಗೆಗಾರ್ಡಿಯನ್‌ ವರದಿ ಮಾಡಿತ್ತು. ವರದಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ದೇಶದ ಚುನಾವಣಾ ಸ್ಪರ್ಧಿಯೂ ಆಗಿರುವ ಇಮ್ರಾನ್‌ ಖಾನ್‌ ಚುನಾವಣೆಯ ಅಂತಿಮ ಹಂತದ ಪ್ರಚಾರ ರ್ಯಾಲಿ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು.

ಅಲ್ಲದೆ ಕೆಲವು ಸುದ್ದಿವಾಹಿನಿಗಳೂ ಕೂಡ ವಿಡಿಯೋವನ್ನು ಪ್ರಸಾರ ಮಾಡಿ ಸುದ್ದಿ ಪ್ರಸಾರ ಮಾಡಿದ್ದವು. ಅದರಲ್ಲಿ 60 ವರ್ಷದ ಇಮ್ರಾನ್‌ ಖಾನ್‌ ಪಾಕಿಸ್ತಾನದ ತೆಹ್ರೇಕ್‌-ಎ-ಇನ್‌ಸಾಫ್‌(ಪಿಟಿಐ) ಪಕ್ಷದ ಪ್ರಮುಖ ನಾಯಕರಾಗಿದ್ದು, ಚುನಾವಣಾ ಸಂಬಂಧ ಲಾಹೋರ್‌ನಲ್ಲಿ ಪ್ರಚಾರಕ್ಕೆ ಆಗಮಿಸಿದ್ದರು. 

ಈ ವೇಳೆ ಜನಸಂದಣಿಯಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದ್ದವು. ಸದ್ಯ ಅದೇ ವಿಡಿಯೋವನ್ನು ಬಳಸಿಕೊಂಡು ಇಮ್ರಾನ್‌ ಖಾನ್‌ಗೆ ಪೊಲೀಸರು ಥಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಿ ಪ್ರಕಟಿಸಲಾಗಿದೆ.

Scroll to load tweet…