ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ್ದೇ ಮಾಡಿದ್ದು, ಜನ ಚಿಲ್ಲರೆಗಾಗಿ ಪರದಾಡಿದರು, ಎಟಿಎಂಗಳಲ್ಲಿ ಕ್ಯೂ ನಿಂತರು, ಬ್ಯಾಂಕ್'​ನಲ್ಲಿ ನೋಟು ಸಿಗಲಿಲ್ಲ, ವ್ಯಾಪಾರ ಕುಸಿಯಿತು. ಹಾಗಾದರೆ, ಮಾರುಕಟ್ಟೆಯಲ್ಲಿ ಏನಾಯ್ತು? ನಿಜಕ್ಕೂ ಅಲ್ಲೋಲಕಲ್ಲೋಲವಾಯ್ತಾ? ಅದೆಲ್ಲವನ್ನೂ ಪರಿಶೀಲಿಸಿ ನಿಲ್ಸನ್ ಸಂಸ್ಥೆ ಸಮೀಕ್ಷೆಯನ್ನೇ ಮಾಡಿದೆ. ಮಾರುಕಟ್ಟೆಯ ಲೆಕ್ಕಾಚಾರದಲ್ಲಿ ನೀಲ್ಸನ್ ಸಂಸ್ಥೆ 2015ರ ಅಕ್ಟೋಬರ್, ನವೆಂಬರ್ ಮತ್ತು 2016ರ ಅಕ್ಟೋಬರ್, ನವೆಂಬರ್ ತಿಂಗಳ ವ್ಯಾಪಾರವನ್ನು ಲೆಕ್ಕ ಹಾಕಿದೆ.

2015ರ ಅಕ್ಟೋಬರ್ ಬಿಸಿನೆಸ್​'ಗೂ, ನವೆಂಬರ್​ ಬಿಸಿನೆಸ್'​ಗೂ ಹೋಲಿಕೆ ಮಾಡಿದರೆ, ಶೇ. 0.6ರಷ್ಟು ವ್ಯಾಪಾರ ಕುಸಿತ ಕಂಡಿದೆ. ಅದೇ 2016ರ ಲೆಕ್ಕಾಚಾರಕ್ಕೆ ಬಂದರೆ, ಅಕ್ಟೋಬರ್ ವ್ಯಾಪಾರಕ್ಕೂ, ನವೆಂಬರ್ ವ್ಯಾಪಾರಕ್ಕೂ ಶೇ.1.8ರಷ್ಟು ಕುಸಿತವಾಗಿದೆ. ಅಲ್ಲಿಗೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ನಡುವಿನ ಬಿಸಿನೆಸ್ ವ್ಯತ್ಯಾಸ ಶೇ.1.2ರಷ್ಟು ಮಾತ್ರ.

ಇನ್ನು ಖರೀದಿ ಅಂದ್ರೆ ಗ್ರಾಹಕರ ಲೆಕ್ಕಾಚಾರದಲ್ಲೂ ಅಷ್ಟೆ. 2015ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಬಿಸಿನೆಸ್ ಕುಸಿತ ಶೇ.4.8ರಷ್ಟು. 2016ರಲ್ಲಿ ಇದೇ 2 ತಿಂಗಳ ಬಿಸಿನೆಸ್ ಕುಸಿತ ಶೇ. 6.4ರಷ್ಟು.

ಎರಡೂ ವರ್ಷದ ಈ ಎರಡು ತಿಂಗಳ ವ್ಯತ್ಯಾಸ ಶೇ.1.6ರಷ್ಟು ಮಾತ್ರ.

ಹಾಗಾದರೆ, ಮಾರುಕಟ್ಟೆಯಲ್ಲಿ ಏನಾಯ್ತು ಎಂದು ನೋಡಿದರೆ, ಅತ್ಯಗತ್ಯ ಆಹಾರ ವಸ್ತುಗಳ ವ್ಯಾಪಾರದಲ್ಲಿ ಶೇ.5ರಷ್ಟು ಕುಸಿತ ಕಂಡಿದೆ.
ವೈಯಕ್ತಿಕ ಬಳಕೆ ವಸ್ತುಗಳ ವ್ಯಾಪಾರವೂ ಶೇ.5ರಷ್ಟು ಕುಸಿದಿದೆ. ಮನೆ ಸ್ವಚ್ಛತೆ ವಸ್ತುಗಳ ವ್ಯಾಪಾರದಲ್ಲಿ ಶೇ.2.9ರಷ್ಟು ಕುಸಿತ ಕಂಡಿದೆ.
ಸೌಂದರ್ಯ ವರ್ಧಕ ವಸ್ತುಗಳ ವ್ಯಾಪಾರದಲ್ಲಿ ಶೇ.2.1ರಷ್ಟು ಕುಸಿದಿದೆ. ಪ್ಯಾಕ್ ಮಾಡಿದ ಆಹಾರ ವಸ್ತು ವ್ಯಾಪಾರದಲ್ಲಿ ಶೇ.2.4ರಷ್ಟು ಹೆಚ್ಚಳವಾಗಿದ್ದರೆ, ಕಿರಾಣಿ ವಸ್ತುಗಳ ವ್ಯಾಪಾರದಲ್ಲಿ ಶೇ.2.1ರಷ್ಟು ಕುಸಿತವಾಗಿದೆ. ಆದರೆ, ಔಷಧ ವ್ಯಾಪಾರವು ಶೇ.2.4ರಷ್ಟು ಹೆಚ್ಚಳ ಕಂಡಿದೆ.

ಇವುಗಳ ಮಧ್ಯೆ ಹಲವರು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಹಾಗೆ ಪರ್ಯಾಯ ಮಾರ್ಗ ಕಂಡುಕೊಂಡವರಲ್ಲಿ, ನೌಕರರ ಸಂಖ್ಯೆ ಶೇ.9.5ರಷ್ಟು ಹೆಚ್ಚಳ ಕಂಡಿದೆ. ಉದ್ಯಮಿಗಳಲ್ಲಿ ಶೇ.5.5ರಷ್ಟು ಹೆಚ್ಚಳವಾಗಿದೆ. ಗೃಹಿಣಿಯರು ಪೈಕಿ ಶೇ.17ರಷ್ಟು ಹೆಚ್ಚಳವಾಗಿದ್ದರೆ, ವಿದ್ಯಾರ್ಥಿಗಳ ಶೇ.29ರಷ್ಟು ಹೆಚ್ಚಳವಾಗಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಎಂಟ್ರಿ ಕೊಟ್ಟಿದ್ದಾರೆ.

ಹಾಗೆ ನೋಡುತ್ತಾ ಹೋದರೆ, ನ.8ರ ನಂತರ, ಬಿಸ್ಕೆಟ್, ಸ್ನ್ಯಾಕ್ಸ್, ಸೌಂದರ್ಯ ವರ್ಧಕಗಳು, ಕ್ರೀಂಗಳು, ಶ್ಯಾಂಪೂ, ಸಿನಿಮಾ, ಫ್ಯಾಷನ್ ಬಟ್ಟೆಗಳು, ವಾಹನಗಳ ಖರೀದಿ ಕುಸಿದಿದೆ.

ಆದರೆ, ಅಕ್ಕಿ, ರಾಗಿ ಹಿಟ್ಟು, ಗೋಧಿ ಹಿಟ್ಟು, ಅಡುಗೆ ಎಣ್ಣೆ, ಹಾಲು, ಮೊಸರು, ಹಣ್ಣು, ತರಕಾರಿಗಳಂತ ಅಗತ್ಯ ವಸ್ತುಗಳ ಖರೀದಿ ಮತ್ತು ವ್ಯಾಪಾರದಲ್ಲಿ ಏನೇನೂ ಬದಲಾಗಿಲ್ಲ.

ಲಾಂಡ್ರಿ, ಮನೆ ಕ್ಲೀನಿಂಗ್ ವಸ್ತುಗಳು, ರೂಂ & ಟಾಯ್ಲೆಟ್ ಫ್ರೆಷ್​ನರ್​ಗಳ ಬಿಸಿನೆಸ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಪ್ಯಾಕ್ ಮಾಡಿದ ಆಹಾರ ವಸ್ತುಗಳು, ಔಷಧಿಗಳ ಬಿಸಿನೆಸ್ ಹೆಚ್ಚಾಗಿದೆ.

ಒಟ್ಟಾರೆ, ಡಿಜಿಟಲ್ ಬ್ಯಾಂಕಿಂಗ್  ನ. 8ರ ನಂತರ ಹೆಚ್ಚಾಗಿದೆ. ಇಂಟರ್​ನೆಟ್ ​ಬ್ಯಾಂಕಿಂಗ್  ಶೇ.15ರಷ್ಟು ಹೆಚ್ಚಳ ಕಂಡಿದ್ದರೆ, ಮೊಬೈಲ್ ಬ್ಯಾಂಕಿಂಗ್ ಶೇ.17ರಷ್ಟು ಹೆಚ್ಚಳವಾಗಿದೆ.

ನೀಲ್ಸನ್ ಸಂಸ್ಥೆ ಈ ಸರ್ವೆಯನ್ನು ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಲೂಧಿಯಾನ, ಅಹಮದಾಬಾದ್, ವಿಜಯವಾಡ, ಮುಂಬೈನಂಥ ನಗರಗಳಲ್ಲಿ, ಮಹಿಳೆಯರು, ವಿದ್ಯಾರ್ಥಿಗಳು, ವರ್ತಕರು, ಗ್ರಾಹಕರು, ಸಣ್ಣ ಸಣ್ಣ ವ್ಯಾಪಾರಿಗಳನ್ನು ಸಮೀಕ್ಷೆಗೊಳಪಡಿಸಿದೆ. 800 ಜನರನ್ನು ಸಂದರ್ಶಿಸಿ, ವ್ಯಾಪಾರ ವಹಿವಾಟಿನ ಡೇಟಾ ಸಂಗ್ರಹಿಸಿ ಈ ಸಮೀಕ್ಷೆಯನ್ನ ಸಿದ್ಧಪಡಿಸಿದೆ.