ಬೆಂಗಳೂರು, [ಜೂ.18]: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ (ಜೂ.18-20) ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ. ಜೂ.21ರ ನಂತರ ಮುಂಗಾರು ಚುರುಕು ಪಡೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನಿರೀಕ್ಷೆಯಂತೆ ಮುಂಗಾರು ಚುರುಕುಗೊಂಡರೆ ತಿಂಗಳಾಂತ್ಯಕ್ಕೆ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ, ಚಂಡಮಾರುತದ ಪ್ರಭಾವದಿಂದ ಈ ಬಾರಿ ಮುಂಗಾರು ಕ್ಷೀಣಿಸಿದೆ. ಜತೆಗೆ ವಿಳಂಬವಾಗಿ ರಾಜ್ಯ ಪ್ರವೇಶಿಸಿದೆ. ಇಷ್ಟೊಂದು ತಡವಾಗಿ ರಾಜ್ಯಕ್ಕೆ ಮುಂಗಾರು ಪ್ರವೇಶವಾದ ಉದಾಹರಣೆಗಳು ತೀರಾ ಕಡಿಮೆ. 

ಕಳೆದ ವರ್ಷ ಜೂ.9ಕ್ಕೆ ರಾಜ್ಯ ಪ್ರವೇಶಿಸಿದ್ದ ಮುಂಗಾರು, ಜೂ.14ರ ವೇಳೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಿಸಿ ಉತ್ತಮ ಮಳೆಯಾಗಿತ್ತು. ಆದರೆ, ಈ ವರ್ಷ ಜೂ.14ಕ್ಕೆ ಪ್ರವೇಶವಾಗಿದೆ.

 ಅದರೊಂದಿಗೆ ವಾಯುಭಾರ ಕುಸಿತ ಮತ್ತು ಚಂಡಮಾರುತದರಿಂದ ಕ್ಷೀಣಿಸಿದ್ದು, ಮೋಡಗಳು ಚದುರಿವೆ. ಇದೀಗ ಮತ್ತೆ ಮೋಡ ರೂಪಗೊಂಡು ಮಳೆಯಾಗುವುದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಶ್ರೀನಿವಾಸ್‌ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸೋಮವಾರ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾದ ವರದಿಯಾಗಿಲ್ಲ. ಮಂಗಳವಾರ, ಬುಧವಾರ ಹಾಗೂ ಗುರುವಾರ ಸಹ ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.