ಬೆಂಗಳೂರು(ಜೂ.14) : ವಂಚಕ ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ ಸಂತ್ರಸ್ತರೊಬ್ಬರು ಹೃದಯಾಘಾತದಿಂದ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ನಗರದ ಮೈಸೂರು ರಸ್ತೆಯ ಹಳೇಗುಡ್ಡದಹಳ್ಳಿ ನಿವಾಸಿ ಅಬ್ದುಲ್ ಪಾಷಾ (54) ಮೃತರು.ಇವರು ಬೋರ್‌ವೆಲ್ ತೆಗೆಯುವ ಕೆಲಸ ಮಾಡುತ್ತಿದ್ದರು. ಪಾಷಾಗೆ ಮೂವರು ಹೆಣ್ಣುಮಕ್ಕಳಿದ್ದು, ಇಬ್ಬರಿಗೆ ವಿವಾಹ ಮಾಡಿದ್ದಾರೆ. 

ಕಿರಿಯ ಪುತ್ರಿಗೆ ವಿವಾಹ ನಿಶ್ಚಯವಾಗಿತ್ತು. ಕೆಲ ವರ್ಷಗಳ ಹಿಂದೆ ಮನ್ಸೂರ್ ಖಾನ್‌ನ ಐಎಂಎ ಸಂಸ್ಥೆಯಲ್ಲಿ ಎರಡು ಲಕ್ಷ ರು. ಹೂಡಿಕೆ ಮಾಡಿ, ತನ್ನ ಇಬ್ಬರು ಹೆಣ್ಣು ಮಕ್ಕಳಿಂದ ತಲಾ ಮೂರು ಲಕ್ಷ ರು. ಹೂಡಿಕೆ ಮಾಡಿಸಿದ್ದರು. ಮದುವೆ ಸಮಯದಲ್ಲಿ ಹಣ ಪಡೆಯಲು ಅಬ್ದುಲ್  ನಿರ್ಧರಿಸಿದ್ದರು. ಅಷ್ಟು ಹೊತ್ತಿಗೆ ಕಂಪನಿ ವಂಚನೆ ಮಾಡಿರುವುದು ಗೊತ್ತಾಗಿತ್ತು. ಕಳೆದ ಮೂರು ದಿನಗಳಿಂದ ಅಬ್ದುಲ್  ವಂಚನೆ ಆಗಿರುವ ಬಗ್ಗೆ ಸಂಬಂಧಿಕರು ಹಾಗೂ ಎಲ್ಲರ ಬಳಿ ಹೇಳಿಕೊಂಡು ನೊಂದಿದ್ದರು. 

ಮಗಳ ಮದುವೆಗೆ ಕೂಡಿಟ್ಟ ಹಣ ಇಲ್ಲ ಎಂದು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು. ಇದೇ ಒತ್ತಡದಲ್ಲಿ ಗುರುವಾರ ರಾತ್ರಿ 9.30ರ ಸುಮಾರಿಗೆ ಹೃದಯಾ ಘಾತವಾಗಿದೆ. ಕೂಡಲೇ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.