ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಐಎಂಎ ಸಂಸ್ಥೆ ಮಾಲಿಕ ಮನ್ಸೂರ್ ಖಾನ್‌ನ ರೇಂಜ್ ರೋವರ್ ಕಾರು ಪತ್ತೆಯಾಗಿದೆ. ಈ ಮೂಲಕ ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿಗೆ ಪುರಾವೆ ಸಿಕ್ಕಂತಾಗಿದೆ.

ನಗರದಲ್ಲಿ ಐಎಂಎ ಸಂಸ್ಥೆಯ 7 ನಿರ್ದೇಶಕರನ್ನು ಬುಧವಾರ ಬಂಧಿಸಿದ ಪೂರ್ವ ವಿಭಾಗದ ಪೊಲೀಸರು, ಆರೋಪಿಗಳ ಮಾಹಿತಿ ಮೇರೆಗೆ ಮನ್ಸೂರ್ ಖಾನ್‌ಗೆ ಸೇರಿದಂತೆ ರೇಂಜ್ ರೋವರ್ ಮತ್ತು ಜಾಗ್ವಾರ್ ಕಾರುಗಳನ್ನು ಜಪ್ತಿ ಮಾಡಿದ್ದರು. ಈ ಕಾರುಗಳ ಪೈಕಿ ರೇಂಜ್ ರೋವರ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ವಂಚನೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಮನ್ಸೂರ್ ತನ್ನ ಕುಟುಂಬಸಮೇತ ದುಬೈಗೆ ಓಡಿ ಹೋಗಿದ್ದಾನೆ ಎನ್ನಲಾಗುತ್ತಿದೆ. ಕಚೇರಿಗಳಿಗೆ ಬೀಗ ಜಡಿದ ಎಸ್‌ಐಟಿ: ಇನ್ನು ಈ ವಂಚನೆ ಪ್ರಕರಣದ ತನಿಖೆ ಆರಂಭಿಸಿದ ಎಸ್‌ಐಟಿ, ಗುರುವಾರ ಅಧಿಕೃತವಾಗಿ ಐಎಂಎ ಸಂಸ್ಥೆಯ ಕಚೇರಿಗಳಿಗೆ ಬೀಗ ಜಡಿ ದಿದೆ. ಶಿವಾಜಿನಗರದಲ್ಲಿರುವ ಐಎಂಎ ಕಚೇರಿ, ಚಿನ್ನಾಭರಣ ಮಳಿಗೆಗಳನ್ನು ಎಸ್‌ಐಟಿ ಸುಪರ್ದಿಗೆ ಪಡೆದಿದೆ.