ಮೈಸೂರು (ಜೂ,14) :  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಹಿನ್ನಡೆ ಕಾಣಲು ಸಿದ್ದರಾಮಯ್ಯ ಅವರ ಅಹಂಕಾರ, ದಿನೇಶ್‌ ಗುಂಡೂರಾವ್‌ ಫ್ಲಾಪ್‌ ಶೋ ಕಾರಣ ಎಂದು ಬಹಿರಂಗವಾಗಿ ಟೀಕಿಸಿದ್ದ, ಐಎಂಎ ಜ್ಯುವೆಲ್ಸ್‌ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬರಲು ತಾವು ಕಾಂಗ್ರೆಸ್‌ ವಿರುದ್ಧ ಮಾಡಿದ ಟೀಕೆಗಳೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿವ, ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್‌ ಬೇಗ್‌ ಅವರಿಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಶಾಸಕಾಂಗ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಐಎಂಎ ಜ್ಯುವೆಲ್ಸ್‌ ವಂಚನೆ ಪ್ರಕರಣದಲ್ಲಿ ತಾವು ವಂಚನೆ ಮಾಡಿಲ್ಲ. ತಮ್ಮನ್ನು ಸಿಲುಕಿಸಲು ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸುವ ರೋಷನ್‌ ಬೇಗ್‌, ಅದನ್ನು ಮಾಧ್ಯಮಗಳ ಮುಂದೆ ಹೇಳುವ ಬದಲು ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಹೇಳಲಿ ಎಂದು ಟಾಂಗ್‌ ನೀಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ನಾನು ವಂಚಿಸಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳುವ ಬದಲಿಗೆ ಎಸ್‌ಐಟಿ ಮುಂದೆ ಹೋಗಿ ಹೇಳಪ್ಪ’ ಎಂದು ಕುಟುಕಿದರು. ಇದೇ ವೇಳೆ, ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಯಾಗಿರುವುದರಿಂದ ಈ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದು ತಿಳಿಸಿದರು.