ಬೆಂಗಳೂರು [ಜೂ.15] :  ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಶಾಸಕ ಎಚ್‌.ಕೆ.ಪಾಟೀಲ್‌ ಅವರು ಇದೀಗ ಐಎಂಎ ವಂಚನೆ ಪ್ರಕರಣದಲ್ಲಿ ಸರ್ಕಾರದ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಐಎಂಎ ಹಗರಣದಂತಹ ಸಾಲು-ಸಾಲು ವಂಚನೆಗಳು ನಡೆಯುತ್ತಿದ್ದರೂ ಪಕ್ಷಗಳ ವ್ಯತ್ಯಾಸವಿಲ್ಲದೆ ಪ್ರತಿ ಸರ್ಕಾರವೂ ಸಂತ್ರಸ್ತರಿಗೆ ಕಳೆದುಕೊಂಡ ಹಣ ವಾಪಸು ಕೊಡಿಸುವಲ್ಲಿ ವಿಫಲವಾಗಿವೆ. ಪ್ರಸ್ತುತ ಐಎಂಎ ಹಗರಣದಲ್ಲೂ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಕೇವಲ ತನಿಖೆಯ ದಿಕ್ಕಿನಲ್ಲಿ ಮಾತ್ರ ಸಾಗಿದ್ದು, ಠೇವಣಿದಾರರಿಗೆ ಹಣ ವಾಪಸು ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಪತ್ರ ಬರೆದಿರುವ ಅವರು, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ದೋಷಾರೋಪ ಪಟ್ಟಿಸಲ್ಲಿಸಿ ದಂಡನೆ ವಿಧಿಸುವುದರಿಂದ ಸಂತ್ರಸ್ತರಿಗೆ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ‘ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ -2019’ರ ಅಡಿ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಮೂಲಕ 30 ದಿನದಲ್ಲಿ ವಂಚನೆ ಮಾಡಿದವರ ಆಸ್ತಿಗಳನ್ನು ಜಪ್ತಿ ಮಾಡಿ, 100 ದಿನಗಳೊಳಗಾಗಿ ಠೇವಣಿದಾರರ ಹಣವನ್ನು ಮರಳಿಸಬೇಕು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಮೇಲುಸ್ತುವಾರಿ ವಹಿಸಬೇಕು ಎಂದು ಪಾಟೀಲ್‌ ಒತ್ತಾಯ ಮಾಡಿದ್ದಾರೆ.

ಪತ್ರದಲ್ಲಿನ ಮುಖ್ಯಾಂಶ ಹೀಗಿದೆ:

ಹಲವು ದಶಕಗಳಿಂದ ವಿನಿವಿಂಕ್‌, ತ್ರಿಪುರಾ ಚಿಟ್ಸ್‌, ಬಾದಾಮಿಯ ಭಜಂತ್ರಿ, ಆ್ಯಂಬಿಡೆಂಟ್‌ನಂತಹ ಸಾಲು-ಸಾಲು ವಂಚನೆಯ ಪ್ರಕರಣಗಳು ನಡೆಯುತ್ತಿದ್ದರೂ ಈವರೆಗೂ ಯಾವ ಪ್ರಕರಣದಲ್ಲೂ ಹೂಡಿಕೆದಾರರಿಗೆ ಹಣ ವಾಪಸು ಮಾಡಿಸಲು ಸಾಧ್ಯವಾಗಿಲ್ಲ. ಇದೀಗ ಸಾವಿರಾರು ಕೋಟಿ ರು. ಬಡವರ ಹಣ ವಂಚಿಸಿರುವ ಐಎಂಎ ಮಾಲಿಕರು ನಾಪತ್ತೆಯಾಗಿದ್ದಾರೆ. ಶೇ.10ರಷ್ಟುಬಡ್ಡಿ ಆಸೆ ತೋರಿಸಿ ವಂಚಿಸಿರುವುದು ಬಯಲಾಗಿ ಒಂದು ವಾರ ಕಳೆದಿದೆ. ಇಷ್ಟೆಲ್ಲಾ ವಂಚನೆ ಆಗುತ್ತಿದ್ದರೂ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಕೇವಲ ತನಿಖೆಯ ದಿಕ್ಕಿನಲ್ಲಿ ಮಾತ್ರ ಸಾಗಿದ್ದು, ಈ ಕ್ರಮ ಸಾಲದು. ಹೂಡಿಕೆದಾರರ ಹಣ ಮರಳಿಸುವ ಕೆಲಸಗಳು ಆಗಬೇಕು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2019ರ ಫೆಬ್ರುವರಿ 21ರಂದು ಅನಿಯಂತ್ರಿತ ಠೇವಣಿಗಳನ್ನು ನಿಷೇಧಿಸುವ ಮತ್ತು ಇಂತಹ ಠೇವಣಿಗಳನ್ನು ಸ್ವೀಕರಿಸಿ ವಂಚನೆ ಎಸಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಹೂಡಿಕೆದಾರರ ಹಿತ ರಕ್ಷಿಸಲು ‘ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ - 2019’ ಹೊರಡಿಸಿದೆ. ಇದರಡಿ ಠೇವಣಿಗಳನ್ನು ಸ್ವೀಕರಿಸಿ ಮೋಸ ಮಾಡುವ ವ್ಯಕ್ತಿಗಳ, ಕಂಪನಿಗಳ ಅಥವಾ ಬೇರೆ ಯಾವುದೇ ಕೃತಕ ವ್ಯಕ್ತಿತ್ವದ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ವ್ಯಾಪಕ ಅಧಿಕಾರವನ್ನು ನೀಡಿದೆ. ಈ ಅಧಿಕಾರವನ್ನು ಬಳಸಿಕೊಂಡು ಕೂಡಲೇ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಬೇಕು.

ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯಲ್ಲಿ ಮೂರು ರೀತಿಯ ಅಪರಾಧ ವರ್ಗೀಕರಣ ಮಾಡಲಾಗಿದೆ. ಈ ಸುಗ್ರೀವಾಜ್ಞೆಯಡಿ 180 ದಿನಗಳೊಳಗಾಗಿ ಠೇವಣಿದಾರರ ಹಣ ಮರಳಿಸಲು ಇರುವ ಅವಕಾಶವನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಂಡು ಕ್ರಮ ಕೈಗೊಳ್ಳಬೇಕು. ಸುಗ್ರೀವಾಜ್ಞೆ ಕಲಂ 13(1) ಅನ್ವಯ ಠೇವಣಿದಾರರ ಹಣ ಮರಳಿಸುವುದು ಮೊದಲ ಆದ್ಯತೆಯಾಗಬೇಕು.

ವಂಚನೆ ಮೂಲಕ ಗಳಿಸಿರುವ ಆಸ್ತಿಪಾಸ್ತಿಯನ್ನು ವಂಚಕರು ತಮ್ಮ ಹೆಸರಲ್ಲಿ ಅಥವಾ ಬೇರೆಯವರ ಹೆಸರಲ್ಲಿ ಬೇನಾಮಿಯಾಗಿ ಇರಿಸಿದ್ದರೆ ಅದೆಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಸುಗ್ರೀವಾಜ್ಞೆಯ ಕಲಂ 12ರ ಅನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸುಗ್ರೀವಾಜ್ಞೆಯನ್ವಯ ಅಧಿಕಾರ ಪಡೆದಿರುವ ರಾಜ್ಯ ಸರ್ಕಾರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕು. ಸುಗ್ರೀವಾಜ್ಞೆಯ ಕಲಂ 8ರ ಅನ್ವಯ ಸರ್ಕಾರ ಇಂತಹ ವಂಚನೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು.

ಜತೆಗೆ ಇವೆಲ್ಲಾ ಅತ್ಯಂತ ಮಹತ್ವದ ಹೆಜ್ಜೆಗಳಾಗಿರುವುದರಿಂದ ಯಾವುದೇ ಅಲಕ್ಷ್ಯ, ವಿಳಂಬ ಆಗದಂತೆ ತಡೆಯಲು ಹಿರಿಯ ಅಧಿಕಾರಿಯೊಬ್ಬರನ್ನು ಕ್ರಮಗಳ ಬಗ್ಗೆ ಮೇಲ್ವಿಚಾರಣೆಗೆ ನೇಮಿಸಬೇಕು. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಈ ಕೆಲಸಗಳು ಸಮರ್ಪಕವಾಗಿ ನಡೆದಿದೆಯೇ ಎಂಬುದನ್ನು ಸೂಕ್ತವಾಗಿ ಮೇಲುಸ್ತುವಾರಿ ಮಾಡಬೇಕು. ಸುಗ್ರೀವಾಜ್ಞೆಯಡಿ ಲಭ್ಯವಿರುವ ಅವಕಾಶ ಬಳಕೆ ಮಾಡಿಕೊಂಡು ಕನಿಷ್ಠ 100 ದಿನದೊಳಗಾಗಿ ಎಲ್ಲಾ ಹೂಡಿಕೆದಾರರಿಗೆ ಅವರ ಹಣ ಮರಳಿ ಕೊಡಿಸಬೇಕು ಎಂದು ಎಚ್‌.ಕೆ.ಪಾಟೀಲ್‌ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಎಚ್‌ಕೆಪಿ ಸಲಹೆಗಳು

- ಕೇಂದ್ರ ಸರ್ಕಾರದ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ -2019ರ ಅಡಿ ಹಣ ವಾಪಸು ಕೊಡಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಬೇಕು.

- ಕಾನೂನಿನ ಕಲಂ 12ರಿಂದ 14ರವರೆಗೆ ಅನುಷ್ಠಾನಗೊಳಿಸಿ 30 ದಿನದಲ್ಲಿ ವಂಚಕನ ಆಸ್ತಿ ಜಪ್ತಿ ಕ್ರಮ ಸಕ್ರಮಗೊಳಿಸಬೇಕು. 180 ದಿನದೊಳಗಾಗಿ ಠೇವಣಿದಾರರ ಹಣವನ್ನು ಮರಳಿಸಲು ಕಾನೂನಿನಲ್ಲಿರುವ ಅವಕಾಶ ಬಳಸಿಕೊಂಡು ಠೇವಣಿದಾರರ ಹಣವನ್ನು ಕಾಲಮಿತಿಗೊಳಪಟ್ಟು ಮರಳಿಸಲು ಕ್ರಮ ಜರುಗಿಸಬೇಕು.

- ಈ ಸುಗ್ರೀವಾಜ್ಞೆಯ ಕಲಂ 7ರ ಅನ್ವಯ ತಕ್ಷಣ ಸಕ್ಷಮ ಪ್ರಾಧಿಕಾರ ರಚನೆ ಮಾಡಬೇಕು. ಸಕ್ಷಮ ಪ್ರಾಧಿಕಾರಕ್ಕೆ ಅಗತ್ಯವಿರುವ ಅಧಿಕಾರಿ, ಸಿಬ್ಬಂದಿಯವರನ್ನು ವಿಳಂಬವಿಲ್ಲದೆ ನೇಮಕ ಮಾಡಬೇಕು.

- ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು.