ಬೆಂಗಳೂರು [ಜು.29]: ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ಐಎಂಎ ಪ್ರಕರಣದಲ್ಲಿ ಜು.29ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿಯಿಂದ ನೋಟಿಸ್‌ ಪಡೆದಿದ್ದ ಶಾಸಕರಾದ ರೋಷನ್‌ ಬೇಗ್‌ ಮತ್ತು ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಎರಡು ದಿನ ವಿನಾಯ್ತಿ ನೀಡಲಾಗಿದೆ.

ಇಬ್ಬರು ಶಾಸಕರಿಗೂ ಜು.31ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ರೋಷನ್‌ ಬೇಗ್‌ ಮತ್ತು ಜಮೀರ್‌ ಅವರಿಗೆ ಐಎಂಎ ವಂಚನೆ ಪ್ರಕರಣದಲ್ಲಿ ಜು.29ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ವಿಶ್ವಾಸ ಮತಯಾಚನೆ ದಿನ ಶಾಸಕರು ಸದನದಲ್ಲಿ ಇರಬೇಕಾದ ಕಾರಣ ವಿನಾಯ್ತಿ ನೀಡಲಾಗಿದೆ. ಮತ್ತೊಂದು ದಿನ ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್‌ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ಬೆಳವಣಿಗೆಯಲ್ಲಿ ಶಿವಾಜಿನಗರದ ಬಿಬಿಎಂಪಿ ಸದಸ್ಯೆ ಫರೀದಾ ಅವರ ಪತಿ ಇಸ್ತಿಯಾಕ್‌ ಪೈಲ್ವಾನ್‌ನನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಸ್ತಿಯಾಕ್‌ನಿಂದ ಮನ್ಸೂರ್‌ ಖಾನ್‌ಗೆ ಬೆದರಿಕೆ ಇತ್ತು ಎಂಬ ಕಾರಣಕ್ಕೆ ಆತನನ್ನು ವಿಚಾರಣೆ ನಡೆಸಲಾಗಿದೆ. ಇಸ್ತಿಯಾಕ್‌ನಿಂದ ಕೆಲವೊಂದು ಮಾಹಿತಿ ಕಲೆ ಹಾಕಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.