ಬೆಂಗಳೂರು (ಜೂ.13) : ಐಎಂಎ ಸಂಸ್ಥೆಯ ಮಹಾಮೋಸದ ಬಲೆಗೆ ಬಿದ್ದ ಸಂತ್ರಸ್ತರ ಒಬ್ಬೊಬ್ಬರದು ಮನಕಲುವ ಕತೆಗಳು. ಮಕ್ಕಳ ಶಿಕ್ಷಣ, ಮದುವೆಗೆ ಕೂಡಿಟ್ಟಹಣ, ಬದುಕಿನ ಮುಸ್ಸಂಜೆಯಲ್ಲಿ ಆಧಾರವಾಗಿರಲಿ ಎಂದು ಉಳಿಸಿದ ಹಣ, ಹಜೆ ಯಾತ್ರೆ ಹೋಗಲು ಉಳಿಸಿದ ಹಣ ಹೀಗೆ ವಂಚನೆಗೊಳಗಾದವರ ವ್ಯಥೆಯನ್ನು ಪದಗಳಲ್ಲಿ ಹೇಳ ತೀರದಾಗಿದೆ.

ಶಿವಾಜಿನಗರದ ಎ.ಎಸ್‌.ಕನ್ವೆಷನ್‌ ಹಾಲ್‌ನಲ್ಲಿ ತಾತ್ಕಾಲಿಕ ದೂರು ಸ್ವೀಕಾರ ಕೇಂದ್ರದಲ್ಲಿ ದೂರು ಸಲ್ಲಿಕೆ ಬರುವ ಐಎಂಎ ಸಂಸ್ಥೆಯ ಹೂಡಿಕೆದಾರರು, ತಮ್ಮ ದುಖಃ ದುಮ್ಮಾನಗಳನ್ನು ಮುಖ ಭಾವದಲ್ಲಿ ವ್ಯಕ್ತಪಡಿಸುತ್ತಾರೆ. ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೋಸದ ಬಲೆಗೆ ಬಿದ್ದಿದ್ದಾರೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ.

ಗಂಡನ ಚಿಕಿತ್ಸೆ ಸಲುವಾಗಿ ಇಟ್ಟಿದ್ದ ಹಣ

ನನ್ನ ಪತಿಗೆ ಕಿಡ್ನಿ ವೈಫಲ್ಯ ಹಿನ್ನೆಲೆಯಲ್ಲಿ ಪ್ರತಿ ವಾರ ಅವರ ಚಿಕಿತ್ಸೆಗೆ 10 ಸಾವಿರ ವೆಚ್ಚವಾಗುತ್ತದೆ. ನಮ್ಮ ಮೂವರು ಮಕ್ಕಳು ಆಶ್ರಯ ನೀಡಲಿಲ್ಲ. ಹೀಗಾಗಿ ಇಳಿ ವಯಸ್ಸಿನಲ್ಲಿ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದೇವೆ. ಮೈಸೂರಿನಲ್ಲಿದ್ದ ನಿವೇಶನವನ್ನು 6 ಲಕ್ಷಕ್ಕೆ ಮಾರಾಟ ಮಾಡಿ, ಒಂದು ಲಕ್ಷ ರು. ಸಾಲ ತೀರಿಸಿದೆ. ಇನ್ನುಳಿದ ಹಣವನ್ನು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆ. ಎರಡು ವರ್ಷಗಳಲ್ಲಿ ನಮಗೆ ಹೇಳಿದ ಮಾತಿನಂತೆ ಲಾಭಾಂಶವನ್ನು ಸಂಸ್ಥೆ ನೀಡಿತ್ತು. ಇದರಿಂದ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವು. ಈಗ ಮನ್ಸೂರ್‌ ನಾಪತ್ತೆಯಿಂದ ನಮ್ಮ ಹಣ ಮಾತ್ರವಲ್ಲ ಬದುಕೇ ನಾಶವಾದಂತಾಗಿದೆ.

-ಫರೀದಾ ಬೇಗಂ, ಮೈಸೂರು

15 ವರ್ಷದ ಸಂಪಾದನೆ ಹೋಯ್ತು

ನಗರದ ಪಂಚತಾರಾ ಹೋಟೆಲ್‌ನಲ್ಲಿ ಕಾರು ಚಾಲಕನಾಗಿ ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಪತ್ನಿ ಪುಸ್ತಕ ಮಳಿಗೆಯೊಂದರಲ್ಲಿ ನೌಕರಿಯಲ್ಲಿದ್ದಾಳೆ. ನಮ್ಮ ದುಡಿಮೆ ಹಣವನ್ನು ಮನ್ಸೂರ್‌ನ ನಂಬಿ ಕಳೆದುಕೊಂಡಿದ್ದೇವೆ. ಮೂರು ವರ್ಷಗಳ ಹಿಂದೆ ಮೊದಲ ಹಂತವಾಗಿ 4 ಲಕ್ಷಗಳನ್ನು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದೆ. ಲಾಭವನ್ನು ಪಡೆಯದೆ ಅದನ್ನೇ ಬಂಡವಾಳವಾಗಿ ಪರಿವರ್ತಿಸಿದೆ. ಬಳಿಕ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ 10 ಲಕ್ಷ ಹಾಗೂ ನನ್ನ ಪತ್ನಿಯ ಭವಿಷ್ಯ ನಿಧಿ ಸೇರಿ ಒಟ್ಟು 27 ಲಕ್ಷಗಳನ್ನು ಹೂಡಿಕೆ ಮಾಡಿದೆ. ಈಗ ಅಸಲೂ ಇಲ್ಲ, ಲಾಭವೂ ಇಲ್ಲದಂತಾಗಿದೆ.

-ರೆಹಮಾನ್‌ ಖಾನ್‌, ಆರ್‌.ಟಿ.ನಗರ

ಹಜ್‌ ಯಾತ್ರೆ ಹೋಗುವ ಆಸೆಯೇ ಕಮರಿತು

ನಾನು ಪತ್ನಿಯನ್ನು ಕರೆದುಕೊಂಡು ಹಜ್‌ ಯಾತ್ರೆ ಹೋಗಲು ಇಚ್ಛಿಸಿದ್ದೆ. ಇದಕ್ಕಾಗಿ ಹಣ ಸಂಪಾದಿಸಲು ಪತ್ನಿ ಸಲಹೆ ಮೇರೆಗೆ ಐಎಂಎ ಸಂಸ್ಥೆಯಲ್ಲಿ 3 ಲಕ್ಷ ಬಂಡವಾಳ ತೊಡಗಿಸಿದೆ. ಆ ಹಣವು ನನಗೆ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದಾಗ ಬಂದ ಉಳಿತಾಯದ ಹಣ. ನಮ್ಮ ಹಣೆ ಬರಹವೇ ಸರಿಯಿಲ್ಲ. ದೇವರ ಕೆಲಸಕ್ಕೂ ಕುತ್ತು ಬಂತು. ಆ ದೇವರೇ ಎಲ್ಲಾವನ್ನು ನೋಡಿಕೊಳ್ಳುತ್ತಾನೆ. ಆತನ ದಯೆ ಇದ್ದರೆ ನನ್ನ ಹಣ ನನಗೆ ಸಿಗುತ್ತದೆ.

-ರಿಯಾಜ್‌ ಅಹ್ಮದ್‌, ನಿವೃತ್ತ ಸರ್ಕಾರಿ ನೌಕರ.

ನನಗೆ ಮೂರು ಜನ ಮಕ್ಕಳು. ಅನಾರೋಗ್ಯದ ಕಾರಣಕ್ಕೆ ಪತಿ ದುಡಿಯಲು ಶಕ್ತರಾಗಿಲ್ಲ. ನಮಗೆ ಬದುಕಿನ ಆದಾಯದ ಮೂಲವೇ ಐಎಂಎ ಸಂಸ್ಥೆಯಲ್ಲಿ ತೊಡಗಿಸಿದ್ದ 4 ಲಕ್ಷ ರು. ಬಂಡವಾಳವಾಗಿತ್ತು. ಒಡವೆ ಮಾರಾಟ ಮಾಡಿ, ಇದ್ದ ಮನೆಯೊಂದನ್ನು ಬೋಗ್ಯಕ್ಕೆ ಕೊಟ್ಟು ಗಳಿಸಿದ ಹಣವನ್ನು ಆ ಸಂಸ್ಥೆಗೆ ಕಟ್ಟಿದ್ದೆ. ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಆ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದೆ. ಈಗ ನನಗೆ ದಿಕ್ಕೇ ತೋಚದಂತಾಗಿದೆ. ನಮ್ಮ ಗೋಳು ಯಾರು ಕೇಳುತ್ತಾರೆ. ಮಕ್ಕಳ ಭವಿಷ್ಯವೇನು?

-ಶಾಹೀದಾ, ತುಮಕೂರು.

ಗಾಂಧಿ ನಗರದಲ್ಲಿ ಸಣ್ಣದೊಂದು ಅಂಗಡಿ ಇಟ್ಟಿದ್ದ ನನ್ನ ಸೋದರ, ವರ್ಷದ ಹಿಂದೆ ಮೃತಪಟ್ಟಿದ್ದ. ಆತನಿಗೆ ಇಬ್ಬರು ಪುಟ್ಟಮಕ್ಕಳಿದ್ದಾರೆ. ತನ್ನ ಬದುಕಿಗೆ ಆಸರೆಯಾಗಲಿ ಎಂದೂ ಸೋದರನ ಪತ್ನಿ ಆಭರಣ ಮಾರಾಟ ಮಾಡಿ ಐಎಂಎ ಸಂಸ್ಥೆಯಲ್ಲಿ ಒಂದು ಲಕ್ಷ ರು. ತೊಡಗಿಸಿದ್ದಳು. ತಮ್ಮನ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲಿ ಎಂದೂ ಅವರ ಹೆಸರಿನಲ್ಲಿ ಕುಟಂಬ ಸದಸ್ಯರು ಬಂಡವಾಳ ಹಾಕಿದ್ದೆವು. ಮನ್ಸೂರ್‌ನ ನಾಪತ್ತೆ ವಿಷಯ ತಿಳಿದು ಸೋದರನ ಪತ್ನಿ ಆಘಾತಕ್ಕೊಳಗಾಗಿದ್ದಾಳೆ. ಆ ಕುಟುಂಬವು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

-ಮಹಮ್ಮದ್‌ ಅಜೀಂ, ಆರ್‌.ಟಿ.ನಗರ