ಬೆಂಗಳೂರು :  ಮಾಜಿ ಶಾಸಕ ಎಸ್‌.ಬಿ. ಘಾಟಗೆ ಅವರ ಪುತ್ರನ ವಿವಾಹ ಸಮಾರಂಭಕ್ಕೆ ಹೋಗಿದ್ದ ವೇಳೆ ನಾನು ಕಣಕುಂಬಿ ಬಳಿಯ ಸಾತೇರಿ ರೆಸಾರ್ಟ್‌ಗೆ ಭೇಟಿ ನೀಡಿರುವುದು ನಿಜ. ಮುಂದೆ ಈ ರೆಸಾರ್ಟ್‌ ಉಪಯೋಗಕ್ಕೆ ಬರಬಹುದು ಎಂದು ನೋಡಿಕೊಂಡು ಬಂದಿದ್ದೇನೆ. 

ಅಲ್ಲಿಗೆ ಪಕ್ಷಾಂತರ ಮಾಡಲು ಶಾಸಕರನ್ನು ಕರೆದುಕೊಂಡು ಹೋಗುವ ಉದ್ದೇಶ ಇಲ್ಲ, ಪ್ರವಾಸಕ್ಕೆಂದು ಕರೆದುಕೊಂಡು ಹೋಗಲಾಗುವುದು ಎಂದು ಇದೇ ವೇಳೆ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಅಲ್ಲದೇ ಪಕ್ಷದಲ್ಲಿ ಅತೃಪ್ತರು ಇರುವುದು ನಿಜ. ಆದರೆ ಎಲ್ಲರೂ ಕಮಲಕ್ಕೆ ಹೋಗುವುದಿಲ್ಲ. 7 ರಿಂದ 8 ಮಂದಿ ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಅತೃಪ್ತರು ನನ್ನ ಸಂಪರ್ಕದಲ್ಲಿಲ್ಲ:  ಅತೃಪ್ತ ಶಾಸಕರ ಜೊತೆ ನಾನು ಸಂಪರ್ಕದಲ್ಲಿಲ್ಲ. ಆದರೆ, ಅತೃಪ್ತರ ಬೇಡಿಕೆಗಳನ್ನು ಹೈಕಮಾಂಡ್‌ಗೆ ತಿಳಿಸಲಾಗಿದೆ. ಶೀಘ್ರ ಸಂಪುಟ ವಿಸ್ತರಣೆ ಮಾಡಿದರೆ ಒಳಿತು. ಈ ಕುರಿತು ವರಿಷ್ಠರಿಂದಲೂ ಭರವಸೆ ಸಿಕ್ಕಿದೆ. 

ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಂದೇ ಮನೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ನಾನು ಶಾಸಕನಾಗಿದ್ದುಕೊಂಡೇ ಸಾಕಷ್ಟುಪವರ್‌ಫುಲ್‌ ಆಗಿದ್ದೇನೆ. ಸಚಿವರಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿದ್ದೇನೆ ಎಂದು ಹೇಳಿದರು. 

ಜತೆಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪಕ್ಷದ ಕೆಲ ಮುಖಂಡರು ಹೈಕಮಾಂಡ್‌ಗೆ ದೂರು ನೀಡಿರುವ ವಿಚಾರ ನನಗೆ ಗೊತ್ತಿಲ್ಲ ಎಂದರು.