ಕಲಬುರಗಿ :  ಕೆಲ ವರ್ಷಗಳಿಂದ ಗದಗ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅದನ್ನು ಬೆಳೆಯುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆ. ಅದರಲ್ಲಿಯೂ ಗಾಂಜಾ ಬಳಕೆ ಮತ್ತು ಬೆಳೆಯುವುದು ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಿದೆ. ಮೊದಮೊದಲು ಗಾಂಜಾ ಬಳಕೆ ಕೇವಲ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಾತ್ರ ಸೀಮಿತವಾಗಿತ್ತು. 

ಇತ್ತೀಚಿನ ದಿನಗಳಲ್ಲಿ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ರೋಣ, ಗಜೇಂದ್ರಗಡ, ಶಿರಹಟ್ಟಿ ಪಟ್ಟಣ ಪ್ರದೇಶಗಳಿಗೂ ವ್ಯಾಪಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ ಗಾಂಜಾ ಬಳಕೆಯಲ್ಲಿದೆ. ಅದರಲ್ಲಿಯೂ ಕೃಷಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಂಜಾಗಳ ದಾಸರಾಗಿರುವುದು ಹಳ್ಳಿ ಸುತ್ತಿದರೆ ಗೋಚರಿಸುತ್ತದೆ. ಗಾಂಜಾ ಬಳಕೆ ಮಾಡುವವರ ಒಂದು ತಂಡವೇ ಪ್ರತಿ ಗ್ರಾಮ ದಲ್ಲಿ ಇದೆ. ಅವರೆಲ್ಲ ಒಂದೆಡೆ ಸೇರಿ ಗಾಂಜಾದ ಮತ್ತನ್ನು ಒಂದೇ ಚಿಲ್ಮಿಯಲ್ಲಿ (ಗಾಂಜಾ ಸೇದುವ ಸಾನ)  ಸೇದುತ್ತಾ ಗಾಂಜಾ ಗಮ್ಮತ್ತು ಪಡೆಯುತ್ತಾರೆ.

ಚೀಟುಗಳಲ್ಲಿ ಗಾಂಜಾ ಲಭ್ಯ: ಜಿಲ್ಲೆಯಲ್ಲಿ ಮಾರಾಟವಾಗುವ ಗಾಂಜಾ ದೊಡ್ಡ ಪ್ರಮಾಣದಲ್ಲಿ ಇಲ್ಲ. ಗ್ರಾಂಗಳ ಲೆಕ್ಕದಲ್ಲಿ ಸಣ್ಣ ಸಣ್ಣ ಚೀಟುಗಳಲ್ಲಿ ದೊರಕುತ್ತಿದೆ. ಪರಿಚಯಸ್ಥರು ಮಾತ್ರ ಇದನ್ನು ಪಡೆಯಬಹುದಾಗಿದ್ದು, ನನಗೆ ಗಾಂಜಾ ಕೊಡಿ ಎಂದರೆ ಸಿಗುವುದಿಲ್ಲ. ಮಾರಾಟಗಾರರಿಗೆ ಗೊತ್ತಿರುವವರೇ ಬಂದು ಕೇಳಿದಾಗ ಮಾತ್ರ ಕೊಡುತ್ತಾರೆ. ಅದು ಒಬ್ಬರಿಗೆ ಒಂದೇ ಚೀಟು. ಇದು ಮಾರಾಟ ಮಾಡುವವರು ಅಳವಡಿಸಿಕೊಂಡಿರುವ ಕಟ್ಟಳೆ. 

ಗಾಂಜಾ ಬೆಳೆ ಬೆಳೆಯಲು ಕಪ್ಪು ಮತ್ತು ಮೆದುವಾದ ಮಣ್ಣು ಅತ್ಯಂತ ಶ್ರೇಷ್ಠ. ಇದು ಕೂಡಾ ಗಾಂಜಾ ಬೆಳೆಯುವವರಿಗೆ ಸಾಕಷ್ಟು ಅನುಕೂಲವಾಗಿದ್ದು, ಕೆಲವರು ಅತ್ಯಂತ ದೂರದಲ್ಲಿರುವ, ಸಾರ್ವಜನಿಕರ ಸಂಪರ್ಕ ಕಡಿಮೆ ಇರುವ ಹೊಲಗಳಲ್ಲಿ ತಾವು ಬೆಳೆಯುವ ಬೆಳೆಗಳ ಮಧ್ಯೆಯೇ ನಾಲ್ಕೈದು ಗಾಂಜಾ ಗಿಡ ಬೆಳೆಯುತ್ತಿರುವುದು ಕಂಡುಬರುತ್ತದೆ. ತೊಗರಿಯಂತಹ ಎತ್ತರವಾಗಿ ಬೆಳೆಯುವ ಗಿಡಗಳ ಮಧ್ಯೆ ಗಾಂಜಾ ಗಿಡ ಬೆಳೆಯುತ್ತಾರೆ.

ಜಾನುವಾರುಗಳಿಗೆ ಬಳಕೆ: ಗಾಂಜಾ ಒಣಗಿಸಿ ಅದರ ಬೀಜಗಳನ್ನು ಬೇರ್ಪಡಿಸಿದರೆ ಅದಕ್ಕೆ ಸಾಕಷ್ಟು ಬೆಲೆ ಇರುತ್ತದೆ. ಅದನ್ನೇ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಇಷ್ಟಪಡುತ್ತಾರೆ. ಆದರೆ, ಗ್ರಾಮೀಣ ಪ್ರದೇಶದ ಜಮೀನುಗಳಲ್ಲಿ ಕಂಡು ಬರುವ ಗಾಂಜಾವನ್ನು ಹಸಿಯಾಗಿಯೇ ಬಳಕೆ ಮಾಡುವುದು ಹೆಚ್ಚು. ಅದರಲ್ಲಿಯೂ ಜಾನುವಾರುಗಳು ಸರಿಯಾಗಿ ಮೇವು ಹೊಟ್ಟು ತಿನ್ನದೇ ಇದ್ದಾಗ, ಅವುಗಳಿಗೆ ಹಸಿ ಗಾಂಜಾ ಗಿಡದ ನಾಲ್ಕೈದು ಎಲೆಗಳನ್ನು ನಿತ್ಯವೂ ತಿನ್ನಿಸುವುದು ಗ್ರಾಮೀಣ ಭಾಗದಲ್ಲಿ ಚಾಲ್ತಿಯಲ್ಲಿದೆ.  ಜಾನುವಾರುಗಳ ಹಸಿವು ಹೆಚ್ಚಿಸಲು ಔಷಧಿ ರೂಪದಲ್ಲಿಯೂ ಇದು ಬಳಕೆಯಾಗುತ್ತಿರುವುದು ಮತ್ತೊಂದು ವಿಶೇಷ.