ದಲಿತರ ಕೇರಿಗೆ ಭೇಟಿ, ನಕ್ಸಲ್ ಪ್ರದೇಶಗಳ ಅಭಿವೃದ್ಧಿ, ಬ್ರಾಹ್ಮಣೇತರರಿಗೂ ಮಂತ್ರದೀಕ್ಷೆ ಇತ್ಯಾದಿ ಹತ್ತಾರು ಕ್ರಾಂತಿಕಾರಿ ಕೆಲಸಗಳ ಮೂಲಕ ಸುದ್ದಿಯಾಗಿದ್ದ ಪೇಜಾವರ ಶ್ರೀಗಳು ಕೃಷ್ಣಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಿದ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.

ಉಡುಪಿ (ಜೂ.26): ದಲಿತರ ಕೇರಿಗೆ ಭೇಟಿ, ನಕ್ಸಲ್ ಪ್ರದೇಶಗಳ ಅಭಿವೃದ್ಧಿ, ಬ್ರಾಹ್ಮಣೇತರರಿಗೂ ಮಂತ್ರದೀಕ್ಷೆ ಇತ್ಯಾದಿ ಹತ್ತಾರು ಕ್ರಾಂತಿಕಾರಿ ಕೆಲಸಗಳ ಮೂಲಕ ಸುದ್ದಿಯಾಗಿದ್ದ ಪೇಜಾವರ ಶ್ರೀಗಳು ಕೃಷ್ಣಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸಿದ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.
ರಂಜಾನ್ ಉಪವಾಸದ ಕೊನೇ ದಿನ ಕೆಲ ಮುಸ್ಲಿಮರಿಗೆ ಪರಧರ್ಮ ಸಹಿಷ್ಣುತೆಯ ಹೆಸರಲ್ಲಿ ಕೃಷ್ಣಮಠದಲ್ಲಿ ಸೌಹಾರ್ದ ಇಫ್ತಾರ್ ಕೂಟವನ್ನು ಶ್ರೀಗಳು ಆಯೋಜಿಸಿದ್ದರು. ಮಠದ ಆವರಣದೊಳಗೆ ನಮಾಜ್‌ಗೂ ಅವಕಾಶ ಮಾಡಿಕೊಟ್ಟಿದ್ದರು. ಶ್ರೀಕೃಷ್ಣ ಮಠದ ಇತಿಹಾಸದಲ್ಲಿ ಇಂಥದ್ದೊಂದು ಆಚರಣೆ ಆಗಿದ್ದು ಇದೇ ಮೊದಲು. ಶ್ರೀಗಳ ಈ ನಡೆಯನ್ನು ಸಚಿವ ಯು.ಟಿ. ಖಾದರ್ ಸೇರಿ ಹಲವರು ಸ್ವಾಗತಿಸಿದ್ದರೆ, ಹಿಂದೂಗಳಲ್ಲಿ ಅದರಲ್ಲೂ ಮಾಧ್ವರಲ್ಲೇ ಪರ-ವಿರೋಧದ ಅಭಿಪ್ರಾಯ ಸೃಷ್ಟಿಸಿದೆ. ಈ ಕುರಿತು ಶನಿವಾರ ರಾತ್ರಿಯಿಂದಲೇ ಪರ-ವಿರೋಧದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ.
ಶ್ರೀಗಳ ಪರ ಇರುವವರ ವಾದವೇನು?:
ಮಧ್ವಾಚಾರ್ಯರ ಕಾಲದಿಂದಲೂ ಉಡುಪಿಯಲ್ಲಿ ಎಲ್ಲ ಪರಂಪರೆಗಳನ್ನು ಗೌರವಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಸ್ವತಃ ಮಧ್ವಾಚಾರ್ಯರೂ ಮುಸ್ಲಿಮರ ಜತೆಗೆ ಸೌಹಾರ್ದ ಬಾಂಧವ್ಯ ಇಟ್ಟುಕೊಂಡಿದ್ದರು. ಈಗ ಪೇಜಾವರ ಶ್ರೀಗಳೂ ಇಫ್ತಾರ್‌ಕೂಟದ ಮೂಲಕ ಅದೇ ಪರಂಪರೆ ಮುಂದುವರೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶೀಗಳ ಕಾರ್ಯಕ್ಕೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪೇಜಾವರ ಶ್ರೀಗಳ ಪರ‌್ಯಾಯದ ಸಮಯದಲ್ಲಿ ಕೆಲ ಮುಸ್ಲಿಮರು ಸ್ವಯಂಪ್ರೇರಿತರಾಗಿ ಭಕ್ತರಿಗೆ ಪಾನಕ ಸೇವೆ, ರಕ್ತದಾನ ಮಾಡಿದ್ದಾರೆ. ಕಾಣಿಕೆ, ಸಹಕಾರ ನೀಡಿದ್ದಾರೆ. ಈಗ ಉಡುಪಿ ಮತ್ತು ನೆರೆಯ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೋಮು ಸೌಹಾರ್ದ ಅಪಾಯದ ಅಂಚಿನಲ್ಲಿದೆ. ಇಂಥ ಸಮಯದಲ್ಲಿ ಪೇಜಾವರ ಶ್ರೀಗಳು ಸೌಹಾರ್ದ ಇಫ್ತಾರ್ ಕೂಟ ನಡೆಸಿರುವುದು, ಸೌಹಾರ್ದ ಕಾಪಾಡುವುದಕ್ಕೆ ಸೇರಿ ಪ್ರಯತ್ನಿಸೋಣ ಎನ್ನುವ ಸಲಹೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ವಾದಿಸಿದ್ದಾರೆ.
ಮಸೀದಿಯೊಳಗೆ ದೀಪಾವಳಿ ಆಚರಿಸ್ತಾರಾ?:
ಆದರೆ, ಶ್ರೀಗಳ ಈ ಕ್ರಾಂತಿಕಾರಿ ಎಲ್ಲರಿಗೂ ರುಚಿಸಿಲ್ಲ. ಗೋಮಾಂಸ ಭಕ್ಷಕರನ್ನು ಪೊಡವಿಗೊಡೆಯ, ಗೋಪಾಲಕನ ದೇಗುಲದೊಳಗೆ ಪ್ರವೇಶ ನೀಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಶ್ರೀಕೃಷ್ಣ ಮಠ ಅಪವಿತ್ರಗೊಂಡಿದೆ ಎಂದು ಶ್ರೀಗಳ ಅಭಿಮಾನಿಗಳು ಸೇರಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
‘ನಾವು ಗೋರಕ್ಷಣೆ ಅಂದರೆ ಶ್ರೀಗಳು ಗೋಭಕ್ಷಕರನ್ನು ದೇವಸ್ಥಾನಕ್ಕೇ ಕರೆದು ಉಪಚರಿಸುತ್ತಾರೆ’. ಅನ್ಯಧರ್ಮದವರಿಗಿಲ್ಲದ ಸೌಹಾರ್ದ, ಸಹಿಷ್ಣು ಭಾವ ನಮಗೇಕೆ? ಅವರು ಮಸೀದಿಯಲ್ಲಿ ಶ್ರೀಕೃಷ್ಣನ ಪೂಜೆಗೆ ಅವಕಾಶ ಮಾಡಿಕೊಡುತ್ತಾರಾ? ದೀಪಾವಳಿ ಆಚರಿಸುತ್ತಾರಾ? ಶ್ರೀಗಳ ಸೌಹಾರ್ದದ ಆಶಯವನ್ನು ಸ್ವಾಗತಿಸೋಣ. ಆದರೆ, ಮಠದೊಳಗೆ ಇಂಥದ್ದೆಲ್ಲ ಬೇಕಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ. ಜತೆಗೆ, ಮಠದೊಳಗೆ ನಮಾಜ್‌ಗೆ ಅವಕಾಶ ಮಾಡಿಕೊಟ್ಟದ್ದು ಯಾಕಾಗಿ? ಮಧ್ವ ಪರಂಪರೆಯ ಈ ಪುಣ್ಯ ಕ್ಷೇತ್ರದಲ್ಲಿ ಇನ್ನೊಂದು ಧರ್ಮದ ಆಚರಣೆ ಸರಿಯೇ ಎಂದು ಹಲವರು ಸಾಮಾಜಿಕ ಜಾಲ ತಾಣಗಳಲ್ಲಿ ಖಾರವಾಗಿ ಟೀಕಿಸಿದ್ದಾರೆ. ವಿಶೇಷವೆಂದರೆ ಮಠದೊಳಗೂ ಶ್ರೀಗಳ ಈ ನಡೆ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ.