ಸಂವಿಧಾನವನ್ನು ಮುಟ್ಟಿದಲ್ಲಿ ದೇಶದಲ್ಲಿ ರಕ್ತಪಾತವೇ ಆಗಲಿದೆ ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರು [ಜು.3] : ಸಮಾಜದಲ್ಲಿ ಸಮಾನತೆಗೆ ಮೀಸಲಾತಿಯೇ ಪರಿಹಾರವಲ್ಲ. ಶೋಷಿತರು, ದುರ್ಬಲ ವರ್ಗದವರ ಅಭಿವೃದ್ಧಿಗೆ ಅದೊಂದು ಮಾರ್ಗವಷ್ಟೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Add Asianetnews Kannada as a Preferred SourcegooglePreferred

ಮಂಗಳವಾರ ನಗರದ ಪುರಭವನದ ಸಭಾಂಗಣದಲ್ಲಿ ‘ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿಗುತ್ತಿಗೆದಾರರ ಸಂಘ’ ಆಯೋಜಸಿದ್ದ ರಾಜ್ಯಮಟ್ಟದ ಸಮಾವೇಶ ಮತ್ತು ಮಿಲ್ಲ​ರ್ಸ್ ವರದಿ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಬುದ್ಧ, ಬಸವ, ಅಂಬೇಡ್ಕರ್‌ ಕಾಲದಲ್ಲೂ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯವಾಗಲಿಲ್ಲ. ನಮ್ಮಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಮಾನತೆ ಬರದ ಹೊರತು ಜಾತಿ ವ್ಯವಸ್ಥೆ ತೊಲಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ದುಡಿಯಬೇಕು ಎಂದು ಹೇಳಿದರು.

ರಕ್ತಪಾತ: ಅಂಬೇಡ್ಕರ್‌ ಅವರು ಸಂವಿಧಾನ ರಚಿಸದಿದ್ದರೆ ನಮಗೆ ಸಮಾನತೆಯ ಸಂವಿಧಾನ ಸಿಗಲು ಸಾಧ್ಯವಿರಲಿಲ್ಲ. ಈಗಲೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ಸಂವಿಧಾನದ ಬಗ್ಗೆ ಅಸಮಾಧಾನವಿದೆ. ಆದ್ದರಿಂದ ಆಗಾಗ ಸಂವಿಧಾನ ಬದಲು ಮಾಡಬೇಕು ಎಂದು ಹೇಳುತ್ತಿರುತ್ತಾರೆ. ಈ ಕುರಿತು ಎಲ್ಲರೂ ಎಚ್ಚರವಾಗಿರಬೇಕು. ಸಂವಿಧಾನ ಬದಲು ಮಾಡಲು ಕೈ ಹಾಕಿದರೆ ಈ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಎಚ್ಚರಿಸಿದರು.

ಪರಿಶಿಷ್ಟಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್‌ಪಿ ಯೋಜನೆಯಡಿ ಈ ಹಿಂದೆ ಐದು ವರ್ಷದಲ್ಲಿ ಕೇವಲ 7ರಿಂದ 8 ಸಾವಿರ ಕೋಟಿ ರುಗಳನ್ನು ಖರ್ಚು ಮಾಡಲಾಗುತ್ತಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ವರ್ಷಕ್ಕೆ 30 ಸಾವಿರ ಕೋಟಿ ರು.ಗಳನ್ನು ಈ ಯೋಜನೆಗೆ ಮೀಸಲು ಇಡಲಾಯಿತು. ಒಂದು ವೇಳೆ ಆ ಹಣ ಖರ್ಚು ಮಾಡಲಾಗದಿದ್ದರೆ ಮುಂದಿನ ವರ್ಷದಲ್ಲಿ ವೆಚ್ಚ ಮಾಡಲು ಅವಕಾಶವಿದೆ. ಜತೆಗೆ ಅನುದಾನ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಎನ್‌.ಮಹದೇವಸ್ವಾಮಿ ಮಾತನಾಡಿ, ಮೀಸಲಾತಿ ಅಧಾರದಲ್ಲಿ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ರ ಅನುಷ್ಠಾನಕ್ಕೆ ಹೊರಡಿಸಿರುವ ಸುತ್ತೋಲೆ ಹಿಂಪಡೆಯಬೇಕು. ಸರ್ಕಾರದ ಆದೇಶದಂತೆ 50 ಲಕ್ಷ ರು.ಗಳವರೆಗಿನ ಕಾಮಗಾರಿಗಳನ್ನು ಒಂದು ಕೋಟಿ ರು.ಗಳಿಗೆ ಹೆಚ್ಚಿಸಬೇಕು. ಹಣ ವಿಳಂಬ ಪಾವತಿ ತಪ್ಪಿಸಲು ಎಸ್ಸಿಪಿ ಮತ್ತು ಟಿಎಸ್‌ಪಿ ಹಣದಿಂದ ಬಿಲ್‌ ಪಾವತಿ ಮಾಡಬೇಕು. ಲೋಕೋಪಯೋಗಿ, ನೀರಾವರಿ ಸೇರಿದಂತೆ ಇತರ ಪ್ರಮುಖ ಇಲಾಖೆಗಳ ಗುತ್ತಿಗೆಗಳಲ್ಲಿ ಮೀಸಲಾತಿ ಜಾರಿಯಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಸಂಸದರಾದ ಧ್ರುವನಾರಾಯಣ, ಆರ್‌.ಚಂದ್ರಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.