ಬಾಗಲಕೋಟೆ :  ಜೆಡಿಎಸ್‌ ವರಿಷ್ಠ ದೇವೇಗೌಡರಿಗೆ 28 ಮಕ್ಕಳು ಇದ್ದಿದ್ದರೆ ರಾಜ್ಯದ 28 ಲೋಕಸಭಾ ಕ್ಷೇತ್ರಕ್ಕೂ ಅವರನ್ನೇ ಅಭ್ಯರ್ಥಿಗಳನ್ನಾಗಿ ನಿಲ್ಲಿ​ಸು​ತ್ತಿ​ದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ, ಈಶ್ವರಪ್ಪ ಅವರು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ ಎಂದು ಮಾತನಾಡುವ ಜೆಡಿ​ಎಸ್‌ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಇದೀಗ ತಮ್ಮಲ್ಲಿನ ಎಲ್ಲರನ್ನೂ ರಾಜಕೀಯ ಮಾಡಲು ಹಚ್ಚಿ ಒಕ್ಕಲಿಗ ನಾಯಕತ್ವವನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದರು. ನನಗೆ 28 ಮಕ್ಕಳು ಹುಟ್ಟಲಿಲ್ಲವಲ್ಲ ಎಂದು ದೇವೇ​ಗೌ​ಡರು ಯೋಚಿಸುತ್ತಿರಬಹುದು. ಕೊನೆ ಪಕ್ಷ 14 ಜನ ಮಕ್ಕಳಾದರೂ ಇದ್ದಿ​ದ್ದರೆ 14 ಜನ ಸೊಸೆಯಂದಿರು ಇರು​ತ್ತಿ​ದ್ದರು. ಅವ​ರಿಗೂ ಟಿಕೆಟ್‌ ನೀಡಬಹುದಾಗಿತ್ತು ಎಂದು ಮೂದಲಿಸಿದರು.

ರೇವಣ್ಣ ಕ್ಷಮೆ ಕೇಳಲಿ:  ದಿ.ಅಂಬ​ರೀಷ್‌ ಅವರ ಪತ್ನಿ ಸುಮಲತಾಗೆ ಸಚಿವ ಎಚ್‌.ಡಿ.ರೇವಣ್ಣ ಮಾಡಿರುವ ಅವಮಾನ ಕೇವಲ ಅವರಿಗೆ ಮಾಡಿದ ಅವಮಾನವಲ್ಲ. ರಾಜ್ಯದ ಮಹಿಳಾ ಕುಲಕ್ಕೇ ಮಾಡಿದ ಅವಮಾನ. ತಕ್ಷಣವೇ ರೇವಣ್ಣ ಕ್ಷಮೆಯಾಚಿ​ಸ​ಬೇಕು. ಕ್ಷಮೆ ಕೇಳದಿದ್ದರೆ ರೇವ​ಣ್ಣ​ನ​ವ​ರನ್ನು ಸಚಿವ ಸ್ಥಾನದಿಂದ ಕಿತ್ತು ಬಿಸಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸುಮಲತಾ ಬಿಜೆಪಿಗೆ ಬಂದರೆ ಖಂಡಿತಾ ಸ್ವಾಗತಿಸುತ್ತೇವೆ ಎಂದರು.