ಪ್ರಯಾಣ ಮಾಡುವಾಗ ನಮ್ಮ ಬ್ಯಾಗ್’ಗಳನ್ನು ಭದ್ರವಾಗಿ ಕಾಪಾಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಯಾವ ಹೊತ್ತಲ್ಲಿ ಯಾವ ಬ್ಯಾಗು ಎಲ್ಲಿ ಕಳೆದು ಹೋಗುತ್ತದೋ ಎನ್ನುವ ಆತಂಕವಿರುತ್ತದೆ. ಹೀಗಾಗಿ ಕೆಲವೊಮ್ಮೆ ಪ್ರಯಾಣದ ಖುಷಿ ಒತ್ತಡದಲ್ಲೇ ಕಳೆದು ಹೋಗುತ್ತದೆ. ನಿದ್ದೆ ಹೋದಾಗ ಬ್ಯಾಗುಗಳನ್ನು ಎತ್ತಿಕೊಂಡು ಹೋದರೆ ಏನು ಮಾಡುವುದು?
ಬೆಂಗಳೂರು (ಆ.09): ಪ್ರಯಾಣ ಮಾಡುವಾಗ ನಮ್ಮ ಬ್ಯಾಗ್’ಗಳನ್ನು ಭದ್ರವಾಗಿ ಕಾಪಾಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಯಾವ ಹೊತ್ತಲ್ಲಿ ಯಾವ ಬ್ಯಾಗು ಎಲ್ಲಿ ಕಳೆದು ಹೋಗುತ್ತದೋ ಎನ್ನುವ ಆತಂಕವಿರುತ್ತದೆ. ಹೀಗಾಗಿ ಕೆಲವೊಮ್ಮೆ ಪ್ರಯಾಣದ ಖುಷಿ ಒತ್ತಡದಲ್ಲೇ ಕಳೆದು ಹೋಗುತ್ತದೆ. ನಿದ್ದೆ ಹೋದಾಗ ಬ್ಯಾಗುಗಳನ್ನು ಎತ್ತಿಕೊಂಡು ಹೋದರೆ ಏನು ಮಾಡುವುದು? ಹೀಗೊಂದು ಸಮಸ್ಯೆ ಬಲ’ಬೀರ್ ಸಿಂಗ್ ಎಂಬ ವ್ಯಕ್ತಿಗೂ ಉಂಟಾಗಿತ್ತು. ಆತ ಮತ್ತು ಆತನ ಕುಟುಂಬ ನವದೆಹಲಿಯಿಂದ ಕಲ್ಕತ್ತಾಗೆ ರಿಸರ್ವೇಶನ್ ಬೋಗಿಯಲ್ಲಿ ಪಯಣಿಸುತ್ತಿದ್ದರು. ಯಾವಾಗ ಪಾಟ್ನಾ ದಾಟಿದರೋ ಆವಾಗ ಅವರಿಗೆ ತಮ್ಮ ಎರಡು ಸೂಟ್’ಕೇಸ್ ಕಳುವಾಗಿರುವುದು ಗಮನಕ್ಕೆ ಬಂತು. ಆ ಸೂಟ್’ಕೇಸಲ್ಲಿ ಆಭರಣಗಳು ಮತ್ತು ಹಣವಿತ್ತು. ಬಲಬೀರ್ ಸಿಂಗ್ ಆತಂಕಗೊಂಡರು. ರೈಲು ಮುಂದಿನ ನಿಲ್ದಾಣ ಅಂದರೆ ಬಿಹಾರದ ಜಾಹಜಾ ಎಂಬಲ್ಲಿಗೆ ಬಂದಾಗ ಅಲ್ಲಿಯೇ ಇಳಿದು ಪೊಲೀಸರ ಬಳಿ ದೂರು ದಾಖಲಿಸಿದರು. ಉತ್ತರ ರೈಲ್ವೇ ವಿಭಾಗದಲ್ಲಿ ತನಗೆ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಿದರು. ಆದರೆ ಉತ್ತರ ರೈಲ್ವೇ ಪರಿಹಾರ ನೀಡಲು ನಿರಾಕರಿಸಿತು. ಗ್ರಾಹಕರ ಲಗೇಜ್’ಗಳಿಗೆ ಗ್ರಾಹಕರೇ ಜವಾಬ್ದಾರರು ಎಂದು ಕಾರಣ ಕೊಟ್ಟರು. ಆದರೆ ಬಲ್’ಬೀರ್ ಸುಮ್ಮನೆ ಕೂರಲಿಲ್ಲ. ಗ್ರಾಹಕ ಆಯೋಗದಲ್ಲಿ ದೂರು ಕೊಟ್ಟರು. ಆದರೆ ಉತ್ತರ ರೈಲ್ವೇ ಗ್ರಾಹಕ ನ್ಯಾಯಾಲಯದಲ್ಲಿ 1989 ರ ರೈಲ್ವೇ ಆಕ್ಟ್ ಸೆಕ್ಷನ್ 100 ರ ಪ್ರಕಾರ ಹಣ ಕಟ್ಟದೇ ತೆಗೆದುಕೊಂಡು ಹೋಗುತ್ತಿದ್ದ ಲಗೇಜ್ ಕಳೆದು ಹೋದರೆ ಡ್ಯಾಮೇಜ್ ಆದರೆ ಅದಕ್ಕೆ ತಾವು ಜವಾಬ್ದಾರರಲ್ಲ ಎಂದು ವಾದಿಸಿತು. ಅವರ ಪ್ರಕಾರ ಲಗೇಜ್’ಗೆ ದುಡ್ಡು ಕಟ್ಟಿ ರಸೀದಿ ಪಡೆದುಕೊಂಡಿದ್ದರೆ ಅದರ ಹೊಣೆ ರೈಲ್ವೇಯದ್ದಾಗಿತ್ತು.
ಬಲ್’ಬೀರ್ ತಮ್ಮ ಜೊತೆ ಫ್ರೀಯಾಗಿ ಲಗೇಜ್ ತೆಗೆದುಕೊಂಡು ಹೋಗಿ ಕಳೆದುಕೊಂಡಿದ್ದರಿಂದ ಇದು ಅವರ ಕೇರ್’ಲೆಸ್ ಮತ್ತು ನೆಗ್ಲಿಜೆನ್ಸಿ ಕಾರಣದಿಂದ ನಡೆದಿದೆ ಎಂದು ರೈಲ್ವೇ ಬಲವಾಗಿ ವಾದಿಸಿತು. ಅಲ್ಲದೇ ದೂರುದಾರರ ದೂರು ಗ್ರಾಹಕ ರಕ್ಷಣಾ ಕಾಯ್ದಯಡಿ ಬರುವುದಿಲ್ಲವೆಂದು ವಾದಿಸಿತು.
ಆದರೆ ಗ್ರಾಹಕ ನ್ಯಾಯಾಲಯ ಬಲ್’ಬೀರ್ ಸಿಂಗ್ ರಿಸರ್ವೇಶನ್ ಬೋಗಿಯಲ್ಲಿ ಪಯಣಿಸುತ್ತಿದ್ದುದ್ದರಿಂದ ಆ ಬೋಗಿಯೊಳಕ್ಕೆ ರಾತ್ರಿ ಹೊತ್ತಲ್ಲಿ ಯಾರೋ ಅಕ್ರಮವಾಗಿ ಪ್ರವೇಶಿಸಿದ್ದು ತಪ್ಪು. ಸೆಕ್ಯುರಿಟಿ ಇಲ್ಲದೇ ಇರುವುದು ರೈಲ್ವೇ ಜವಾಬ್ದಾರಿ. ಹೀಗಾಗಿ ರೈಲ್ವೇ ವಿಬಾಗವೇ ಇದಕ್ಕೆ ಹೊಣೆಯಾಗಿದ್ದು ಬಲ್’ಬೀರ್ ಸಿಂಗ್ ಅವರಿಗೆ ಪರಿಹಾರ ಒದಗಿಸಬೇಕೆಂದು ತೀರ್ಪು ಕೊಟ್ಟಿತು.
ಉತ್ತರ ರೈಲ್ವೇ ವಿಭಾಗ ದೂರುದಾರರಿಗೆ 10 ಸಾವಿರ ರೂ.ಪರಿಹಾರ ನೀಡಬೇಕು ಮತ್ತು ದೂರುದಾರರಿಗೆ ಮಾನಸಿಕ ಕಿರುಕುಳ ಕೊಟ್ಟಿದ್ದರೆ ರೂ.5,100 ಹಣವನ್ನು ಬಡ್ಡಿ ಸಮೇತ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತು. ಹೀಗಾಗಿ ಯಾರಾದರೂ ರೈಲಲ್ಲಿ ಬ್ಯಾಗು ಕಳೆದುಕೊಂಡರೆ ಗ್ರಾಹಕ ಆಯೋಗದ ಮೊರೆ ಹೋಗಬಹುದು.
