ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಪ್ಪು ಮಾಡಿದರೂ ಬಿಟ್ಟುಬಿಡಬೇಕಾ? ಬಿಡಲಿಕ್ಕೆ ಆಗುತ್ತಾ? ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆಯಾ? ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ ತಪ್ಪು ಮಾಡಿಲ್ಲ ಎನ್ನುವುದಾದರೆ ಅದನ್ನು ಎಸಿಬಿ ಮುಂದೆ ಹೋಗಿ ಹೇಳಲಿ ಎಂದು ಹೇಳಿದರು.
ಬೆಂಗಳೂರು (ಆ.21): ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಪ್ಪು ಮಾಡಿದರೂ ಬಿಟ್ಟುಬಿಡಬೇಕಾ? ಬಿಡಲಿಕ್ಕೆ ಆಗುತ್ತಾ? ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆಯಾ? ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ ತಪ್ಪು ಮಾಡಿಲ್ಲ ಎನ್ನುವುದಾದರೆ ಅದನ್ನು ಎಸಿಬಿ ಮುಂದೆ ಹೋಗಿ ಹೇಳಲಿ ಎಂದು ಹೇಳಿದರು.
ಯಡಿಯೂರಪ್ಪ ಪ್ರಕರಣದಲ್ಲಿ ಬಿಜೆಪಿಯವರು ತಪ್ಪಿತಸ್ಥ ಸ್ಥಾನದಲ್ಲಿದ್ದಾರೆ. ಆದ್ದರಿಂದಲೇ ಬಿಜೆಪಿಯವರು ಕಾಂಗ್ರೆಸ್ ಎಸಿಬಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಪ್ಪು ಮಾಡಿದ್ದಾರೆ. ಇದು ಗೊತ್ತಿದ್ದರೂ ಅವರನ್ನೂ ಬಿಟ್ಟು ಬಿಡಬೇಕಾ? ಎಂದರು. ಯಡಿಯೂರಪ್ಪ ಅವರನ್ನು ಸಿಲುಕಿಸಲು ನನ್ನ ಮೇಲೆ ಒತ್ತಡವಿದೆ ಎಂದು ಎಸಿಬಿ ವಿರುದ್ಧ ದೂರು ನೀಡಿರುವ ಕೆಎಎಸ್ ಅಧಿಕಾರಿ ಇಷ್ಟು ದಿನ ಸುಮ್ಮನಿದ್ದದ್ದು ಏಕೆ ಎಂದೂ ಅವರು ಪ್ರಶ್ನಿಸಿದರು. ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಅವರ ಮೇಲೆ ಒತ್ತಡ ಹೇರಿದ್ದರೆ ಅಥವಾ ನಾವು ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡಿದ್ದರೆ, ಅವರು ಮೊದಲೇ ದೂರು ಸಲ್ಲಿಸಬಹುದಿತ್ತು. ಇಷ್ಟು ದಿನ ಸುಮ್ಮನಿದ್ದು, ಈಗ ಏಕೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ? ಇದು ಏನನ್ನು ತೋರಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
