ರಾಜ್ಯ ರಾಜಕೀಯ ಪ್ರಹಸನದಲ್ಲಿ ರಾಜೀನಾಮೆ ನೀಡಿ ಅತೃಪ್ತರಾಗಿ ತೆರಳಿರುವ ಇಬ್ಬರು ಸಚಿವರು ಮರಳಿ ಬಂದಲ್ಲಿ ಕರ್ನಾಟಕ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದು. ಹೀಗೆಂದು ಕೈ ನಾಯಕ ಹೇಳಿದ್ದಾರೆ.
ಬೆಳಗಾವಿ [ಜು.14]: ಮುಂಬೈನಲ್ಲಿರುವ ಇಬ್ಬರು ಶಾಸಕರು ವಾಪಸ್ ಬಂದರೆ ಮೈತ್ರಿ ಸರ್ಕಾರ ಉಳಿಯುತ್ತದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಿವರ್ಸ್ ಆಪರೇಷನ್ ಮಾಡಬೇಕಿಲ್ಲ. ನಮ್ಮವರು ಬಂದರೆ ಸರ್ಕಾರ ಉಳಿಯುತ್ತದೆ. ಈಗಾಗಲೇ ನಾಲ್ಕು ಜನ ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ. ಮುಂಬೈನಿಂದ ಇಬ್ಬರು ಶಾಸಕರು ಬಂದರೆ ಸರ್ಕಾರ ಉಳಿಯುತ್ತದೆ. ಈ ಸರ್ಕಾರದಿಂದಲೂ ತಪ್ಪಾಗಿರಬಹುದು. ಈಗ ಅದನ್ನು ಸರಿಪಡಿಸಿಕೊಳ್ಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗಾಗಲೇ ನಾವು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಬೇರೆಯವರನ್ನು ಸಚಿವರನ್ನಾಗಿ ಮಾಡಿದರೂ ನಮ್ಮ ಅಭ್ಯಂತರ ಇಲ್ಲ. ಇಲ್ಲವೇ ನಮ್ಮನ್ನು ಮುಂದುವರಿಸಿದರೂ ನಾವು ಸಿದ್ಧರಿದ್ದೇವೆ. ಮುಂಬೈನಿಂದ ಒಬ್ಬ ಶಾಸಕನನ್ನು ಕರೆದುಕೊಂಡು ಹೋಗಿ ಬರಲು ಪ್ಲೈಟ್‌ಗೆ .10 ಲಕ್ಷ ಖರ್ಚಾಗುತ್ತದೆ. ಅಲ್ಲಿ ಹೋಟೆಲ್ ಬುಕ್ಕಿಂಗ್ ಸೇರಿದಂತೆ ಎಲ್ಲವನ್ನೂ ಬಿಜೆಪಿ ನೋಡಿಕೊಳ್ಳುತ್ತಿದೆ. ಅತೃಪ್ತರ ಮೇಲೆ ಸ್ಪೀಕರ್ ಸದ್ಯಕ್ಕೆ ಕ್ರಮ ತೆಗೆದುಕೊಳ್ಳುವುದಿಲ್ಲ. ಅತೃಪ್ತ ಶಾಸಕರಿಗೆ ಇನ್ನೂ ಕಾಲಾವಕಾಶ ಇದೆ ಎಂದು ಹೇಳಿದರು.
