ಬೆಂಗಳೂರು :  ದೀರ್ಘ ಕಾಲದ ರಜೆ ಮೇಲೆ ತೆರಳಿದ್ದ ಐಎಎಸ್‌ ಅಧಿಕಾರಿ ವಿ. ರಶ್ಮಿ ಮಹೇಶ್‌ ಅವರು ಸರ್ಕಾರಿ ಸೇವೆಗೆ ವಾಪಸಾಗಿದ್ದಾರೆ.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನಾಗಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ. ಶಿವಯೋಗಿ ಸಿ. ಕಳಸದ್‌ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ವಿ. ರಶ್ಮಿ ಮಹೇಶ್‌ ನಿಯೋಜನೆಗೊಂಡಿದ್ದಾರೆ.

2016ರ ಸೆಪ್ಟೆಂಬರ್‌ ಬಳಿಕ ರಶ್ಮಿ ಮಹೇಶ್‌ ದೀರ್ಘ ರಜೆ ಪಡೆದು ತೆರಳಿದ್ದರು. ಮೈಸೂರಿನಲ್ಲಿ ಆಡಳಿತ ಮತ್ತು ತರಬೇತಿ ಸಂಸ್ಥೆ ಮಹಾ ನಿರ್ದೇಶಕಿಯಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿಯಾಗಿ, ಬಿಬಿಎಂಪಿ ವಿಶೇಷ ಆಯುಕ್ತರಾಗಿ ವಿವಿಧ ಹುದ್ದೆಗಳಲ್ಲಿ ಖಡಕ್‌ ಕ್ರಮಗಳಿಂದ ಹೆಸರಾಗಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಹಲವು ವರ್ಷಗಳಿಂದ ಬೀಡು ಬಿಟ್ಟಿದ್ದವರನ್ನು ವರ್ಗಾವಣೆ ಮಾಡಲಾಗಿತ್ತು. ಮೈಸೂರಿನಲ್ಲಿ 2016ರ ಜನವರಿಯಲ್ಲಿ ವ್ಯಕ್ತಿಯೊಬ್ಬರಿಂದ ಹಲ್ಲೆಗೊಳಗಾಗಿದ್ದ ರಶ್ಮಿ ಮಹೇಶ್‌ ಬಳಿಕ ಬಿಬಿಎಂಪಿಗೆ ವರ್ಗಾವಣೆಗೊಂಡಿದ್ದರು. ಬಿಬಿಎಂಪಿಯಲ್ಲಿ ತಮ್ಮ ಖಡಕ್‌ ತೀರ್ಮಾನಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬೆವರಿಳಿಸಿದ್ದರು.

ಈ ನಡುವೆ ಬಿಬಿಎಂಪಿ ಜಾಹಿರಾತು ವಿಭಾಗದ ಸಹಾಯಕ ಆಯುಕ್ತರಾಗಿದ್ದ ಕೆ. ಮಥಾಯಿ ಅವರು 2016ರಲ್ಲಿ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಕಳೆದ ಎಂಟು ವರ್ಷದಿಂದ ಬಿಬಿಎಂಪಿ ಜಾಹಿರಾತು ವಿಭಾಗದಲ್ಲಿ 2 ಸಾವಿರ ಕೋಟಿ ರು. ನಷ್ಟಉಂಟು ಮಾಡಲಾಗಿದೆ. ಮಾಫಿಯಾಗೆ ಬಿಬಿಎಂಪಿ ಆಯುಕ್ತರು, ರಶ್ಮಿ ಮಹೇಶ್‌ ಸೇರಿ ಹಲವರು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು.

ಇದರ ಬೆನ್ನಲ್ಲೇ 2016ರ ಸೆಪ್ಟೆಂಬರ್‌ ಬಳಿಕ ದೀರ್ಘ ರಜೆಗೆ ತೆರಳಿದ್ದ ರಶ್ಮಿ ಮಹೇಶ್‌ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ದೀರ್ಘ ರಜೆ ಬಳಿಕ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಸೇವೆಗೆ ಮರಳಿದ್ದಾರೆ.