ನವದೆಹಲಿ[ಮೇ.22]: ಬಾಲಾಕೋಟ್‌ ದಾಳಿ ಬಳಿಕ ಭಾರತದ ನಡುವೆ ನಡೆದ ವೈಮಾನಿಕ ದಾಳಿ-ಪ್ರತಿದಾಳಿ ವೇಳೆ ಶತ್ರು ದೇಶದ ಹೆಲಿಕಾಪ್ಟರ್‌ ಎಂದು ತಪ್ಪಾಗಿ ಭಾವಿಸಿ ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರತ ಸೇನೆಯ ಎಂಐ-17 ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಿದ ಘಟನೆ ಸಂಬಂಧ ಹಿರಿಯ ಸೇನಾಧಿಕಾರಿಯೊಬ್ಬರನ್ನು ಭಾರತೀಯ ವಾಯುಪಡೆ ಸೇವೆಯಿಂದ ವಜಾಗೊಳಿಸಿದೆ. ಈ ಘಟನೆ ಸಂಬಂಧ ತನಿಖೆ ಪೂರ್ಣಗೊಳಿಸಬೇಕಿದ್ದು, ಈ ಪ್ರಮಾದ ಎಸಗಿದ ಸೇನಾಧಿಕಾರಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗುವ ಸಾಧ್ಯತೆಯಿದೆ.

ಆಗಿದ್ದೇನು?: ಬಾಲಾಕೋಟ್‌ ದಾಳಿಗೆ ಪ್ರತಿಯಾಗಿ ಭಾರತದ ಗಡಿ ದಾಟಿ ಬಂದು ದಾಳಿಗೆ ಮುಂದಾದ ಪಾಕಿಸ್ತಾನದ ವಾಯುಪಡೆ ವಿರುದ್ಧ ಭಾರತೀಯ ವಾಯುಪಡೆಯೂ ಪ್ರತಿ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಭಾರತದ ವಾಯುಪಡೆ ಬತ್ತಳಿಕೆಯಲ್ಲಿರುವ ರಷ್ಯಾ ನಿರ್ಮಿತ ಎಂಐ-17 ಹೆಲಿಕಾಪ್ಟರ್‌ ಕಾಶ್ಮೀರದಲ್ಲಿ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಹೆಲಿಕಾಪ್ಟರ್‌ನಲ್ಲಿರುವ 6 ಮಂದಿ ಯೋಧರು ಸಾವನ್ನಪ್ಪಿದ್ದರು.

ಪ್ರಾಥಮಿಕ ತನಿಖೆ ವೇಳೆ, ಭಾರತದ ಕಾಪ್ಟರ್‌ ಅನ್ನು ಭಾರತದ ವಾಯುಪಡೆಯೇ ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸಿದ್ದು ಖಚಿತವಾಗಿತ್ತು. ಕಾಪ್ಟರ್‌ನ ಪೈಲಟ್‌, ವಿರೋಧಿ ಬಣದ ಯುದ್ಧ ವಿಮಾನಗಳ ಕುರಿತು ಪತ್ತೆ ಹಚ್ಚಿ ರಾಡರ್‌ಗಳಿಗೆ ಸೂಚನೆ ನೀಡುವ ಐಡಿಂಟಿಫಿಕೇಶನ್‌ ಆಫ್‌ ಫ್ರೆಂಡ್‌ ಅಥವಾ ಫೋ(ಐಎಫ್‌ಎಫ್‌) ಎಂಬ ಬಟನ್‌ ಅನ್ನು ಕಾರ್ಯಗತಗೊಳಿಸಿರಲಿಲ್ಲ. ಪರಿಣಾಮ ಇದು ಶತ್ರು ದೇಶದ ಕಾಪ್ಟರ್‌ ಎಂದು ತಿಳಿದು ಕ್ಷಿಪಣಿ ಹಾರಿಸಲಾಗಿತ್ತು. ಜೊತೆಗೆ ಏರ್‌ಟ್ರಾಫಿಕ್‌ ಕಂಟ್ರೋಲ್‌ ಅಧಿಕಾರಿಗಳು ಎಂಐ ಕಾಪ್ಟರ್‌ ಅನ್ನು ಭಾರತ- ಪಾಕ್‌ ಸಂಘರ್ಷ ನಡೆಯುವ ಸ್ಥಳದಿಂದ ದೂರ ಕಳುಹಿಸಬೇಕಿತ್ತು. ಇದರಲ್ಲಿ ಎಟಿಸಿ ಅಧಿಕಾರಿ ವಿಫಲವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡಲಾಗಿದೆ.