ಪಾಟ್ನಾ(ಜೂ.17): ‘ಬ್ರದರ್ಸ್ ಇನ್ ಆರ್ಮ್ಸ್’ ಸಶಸ್ತ್ರಪಡೆಗಳ ಸಹೋದ್ಯೋಗಿಗಳಿಗಾಗಿ ಬಳಸುವ ಪದ. ದೇಶ ಕಾಯುವ ಕಾಯಕದಲ್ಲಿ ಹೆಗಲು ಕೊಟ್ಟಾತ ತನ್ನ ಸಂಗಾತಿ ಎಂಬ ಭಾವನೆ ಪ್ರತಿ ಸೈನಿಕನಲ್ಲೂ ಮನೆ ಮಾಡಿರುತ್ತದೆ.

ಆದರೆ ಯುದ್ಧಭೂಮಿಯಲ್ಲಿ ಸಂಗಾತಿಯನ್ನು ಕಳೆದುಕೊಂಡ ನೋವು ಓರ್ವ ಸೈನಿಕನಿಗಲ್ಲದೇ ಮತ್ತಿನ್ಯಾರಿಗೆ ತಿಳಿದಿರಲು ಸಾಧ್ಯ ಹೇಳಿ?. ದೇಶಕ್ಕಾಗಿ ಪ್ರಾಣತೆತ್ತ ತನ್ನ ಗೆಳೆಯನ ನೆನಪು ಸೈನಿಕನ ಮನದಲ್ಲಿ ಸದಾ ಹಸಿರಾಗಿರುತ್ತದೆ.

ಅದರಂತೆ ಭಯೋತ್ಪಾದಕರೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾಗಿದ್ದ ವಾಯುಸೇನೆಯ ಗರುಡ್ ಕಮಾಂಡೋ ಜ್ಯೋತಿಪ್ರಕಾಶ್ ನಿರಲಾ ಅವರ ಸಹೋದ್ಯೋಗಿಗಳು, ಹುತಾತ್ಮ ಸಂಗಾತಿಯ ಸಹೋದರಿಯ ಮದುವೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಹುತಾತ್ಮ ಜ್ಯೋತಿಪ್ರಕಾಶ್ ನಿರಲಾ ಸಹೋದರಿಯ ಮದುವೆಗೆ ವಾಯುಸೇನೆಯ ಗರುಡ್ ಕಮಾಂಡೋ ಪಡೆಯ ಅಧಿಕಾರಿಗಳು, ತಲಾ 500 ರೂ. ರಂತೆ ಒಟ್ಟು 5 ಲಕ್ಷ ರೂ ಆರ್ಥಿಕ ಸಹಾಯ ನೀಡಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಸಮಾರಂಭಕ್ಕೆ ಖುದ್ದು ಹಾಜರಾಗಿ ಮೇಲುಸ್ತುವಾರಿ ನೋಡಿಕೊಂಡಿದ್ದಾರೆ.

2017ರಲ್ಲಿ ಕಣಿವೆ ರಾಜ್ಯದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಜ್ಯೋತಿಪ್ರಕಾಶ್ ನಿರಲಾ ಭಯೋತ್ಪಾದಕರೊಂದಿಗೆ ಕಾದಾಡುತ್ತಾ ಪ್ರಾಣ ಬಿಟ್ಟಿದ್ದರು. ಇದಕ್ಕೂ ಮೊದಲು ನಿರಲಾ ಐವರು ಭಯೋತ್ಪಾದಕರನ್ನು ಹೊಡೆದರುಳಿಸಿದ್ದರು.

ಜ್ಯೋತಿಪ್ರಕಾಶ್ ಅಪ್ರತಿಮ ಬಲಿದಾನಕ್ಕೆ ಕೇಂದ್ರ ಸರ್ಕಾರ 2018ರಲ್ಲಿ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿತ್ತು.