ತುಮಕೂರು[ಮೇ.21]: ತುಮಕೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ, ಬಳಿಕ ಹಿಂಪಡೆದಿದ್ದ ಸಂಸದ ಮುದ್ದಹನುಮೇಗೌಡ ವಿರುದ್ಧ  ಹಣ ಪಡೆದಿರುವ ಆರೋಪಗಳು ಕೇಳಿ ಬಂದಿದ್ದವು. ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ್ದ ಸಂಸದರು ತಾನು ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಪ್ರಕರಣದ ಬಳಿಕ ಮೌನ ತಾಳಿದ್ದ ಮುದ್ದೇ ಹನುಮೇಗೌಡರು ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುವ ಸುಳಿವು ನೀಡಿದ್ದಾರೆ.

ಹೌದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ಮುದ್ದೆಹನುಮೇಗೌಡ 'ಮುಂದಿನ ದಿನದಲ್ಲಿ ನಮ್ಮ ಜಿಲ್ಲೆಯ ಯಾವುದೇ ಹಿತಾಸಕ್ತಿ ಕಾಪಾಡುವಲ್ಲಿ ಪಕ್ಷಾತೀತವಾಗಿ ನನ್ನ ಸಹಕಾರ  ಇದ್ದೇ ಇರುತ್ತದೆ. ಚುನಾವಣೆ ಘೋಷಣೆ ನಂತರ ಆದ ಬೆಳವಣಿಗೆಯಿಂದ ರಾಜಕೀಯ ಪ್ರಹಸನ ನಡೆಯಿತು. ರಾಜ್ಯದ ಜನತೆ ಜೊತೆಗೆ ಜಿಲ್ಲೆಯ ಜನತೆ ನನ್ನ ಅನುಮಾನಿಸಿಲ್ಲ. ಕೆಲ ವಿಕೃತ ಮನಸ್ಸುಗಳನ್ನು ಬಿಟ್ಟು, ಜಿಲ್ಲೆಯ ಜನರ ಮನಸು ನನಗಾಗಿ ಮಿಡಿದಿದೆ. ಅದು ನನ್ನ ಪೂರ್ವ ಜನ್ಮದ ಪುಣ್ಯ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳುವ ಕುರಿತು ಮಾತನಾದ್ದು 'ಮುಂದೆ ರಾಜಕೀಯದಲ್ಲಿ ಸಕ್ರಿಯವಾಗುತ್ತೇನೆ. ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭ ಮಾಡುತ್ತೇನೆ. ನನ್ನ ರಾಜಕೀಯ ಜೀವನ ಇಲ್ಲಿಗೆ ಮುಗಿದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡೇ ಹೊಸ ಇನ್ನಿಂಗ್ಸ್  ಆರಂಭಿಸುತ್ತೇನೆ' ಎಂದಿದ್ದಾರೆ.