ದಿವಾಳಿಯಾಗಿದ್ದರೆ ನಾನು ದುಡ್ಡು ಕೊಡ್ತೆನೆ..ಹಂಪಿ ಉತ್ಸವಕ್ಕೆ ರೆಡ್ಡಿ ಪಟ್ಟು

ಹಂಪಿ ಉತ್ಸವವನ್ನು ರಾಜ್ಯ ಸರ್ಕಾರ ಕಡೆಗಣಿಸಡಿದ್ದಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕೆಂಡಾಮಂಡಲವಾಗಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ರಾಜ್ಯ ಸರಕಾರಕ್ಕೆ ಪ್ರಶ್ನೆಗಳ ಸರಮಾಲೆ ಎಸೆದಿದ್ದು ಸರಕಾರದ ದಿವಾಳಿಯಾಗಿದ್ದರೆ ನಾನೇ ದುಡ್ಡು ಕೊಡುತ್ತೇನೆ ಎಂದಿದ್ದಾರೆ.

i-will-give-financial-Support for-hampi-utsav Says Gali Janardhan Reddy

ಬೆಂಗಳೂರು[ಡಿ.03]  ಬರದ ಕಾರಣವೊಡ್ಡಿ ಹಂಪಿ ಉತ್ಸವ ರದ್ದು ಮಾಡಲು ಸರಕಾರ ಮುಂದಾಗಿರುವುದಕ್ಕೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ವಿರೋಧ ವ್ಯಕ್ತ ಪಡಿಸಿದ್ದು, ಅದ್ಧೂರಿ ಉತ್ಸವಕ್ಕೆ ಆರ್ಥಿಕ ನೆರವು ಸೇರಿದಂತೆ ಸಕಲ ರೀತಿಯಲ್ಲಿ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.

ಹಂಪಿ ಉತ್ಸವ 3 ದಿನ  ಅದ್ದೂರಿಯಾಗಿಯೇ ನಡೆಯಲಿ. ನಾಡಿನಲ್ಲಿ ವಿವಿಧೆಡೆ ಉತ್ಸವಗಳನ್ನು ಆಚರಿಸಲು ಉತ್ಸುಕತೆ ತೋರುತ್ತಿರುವ ರಾಜ್ಯ ಸರ್ಕಾರ ಕೇವಲ 3 ದಿನ ನಡೆಯುವ ಹಂಪಿ ಉತ್ಸವ ಕಡೆಗಣಿಸುತ್ತಿರುವುದು ಸರಿ ಅಲ್ಲ ಎಂದಿದ್ದಾರೆ.

ಜನರ ದುಡ್ಡಲ್ಲಿ ಕೃತಜ್ಞತಾ ಸಮಾವೇಶ ನಡೆಸುವವರಿಗೆ ಹಂಪಿ ಕಾಣುತ್ತಿಲ್ಲವೆ? ವಿಜಯನಗರ ಸಾಮ್ರಾಜ್ಯ ನೆನಪಾಗುತ್ತಿಲ್ಲವೆ? ಎಂದೆಲ್ಲ ಪ್ರಶ್ನೆಗಳ ಬಾಣ ಎಸೆದಿದ್ದಾರೆ. ಜನಾರ್ದನ ರೆಡ್ಡಿ ಏನು ಬರೆದುಕೊಂಡಿದ್ದಾರೆ? ಪೂರ್ಣ ವಿವರ ಇಲ್ಲಿದೆ

ಹಂಪಿ ಉತ್ಸವ 3 ದಿನ ಅದ್ದೂರಿಯಾಗಿಯೇ ನಡೆಯಲಿ

ನಾಡಿನಲ್ಲಿ ವಿವಿಧೆಡೆ ಉತ್ಸವಗಳನ್ನು ಆಚರಿಸಲು ಉತ್ಸುಕತೆ ತೋರುತ್ತಿರುವ ರಾಜ್ಯ ಸರ್ಕಾರ ಕೇವಲ 3 ದಿನ ನಡೆಯುವ ಹಂಪಿ ಉತ್ಸವ ವಿಷಯದಲ್ಲಿ ಏನಾದರೂ ಒಂದು ಕುಂಟು ನೆಪ ಹೇಳುತ್ತಿರುವುದು ದುರಾದೃಷ್ಟಕರ.

ನಾಡಿನ ವಿವಿಧ ಉತ್ಸವಗಳನ್ನು ನಡೆಸುವ ಸರ್ಕಾರ ಹಂಪಿ ಉತ್ಸವ ಆಚರಿಸಲು ಏನಾದರೊಂದು ನೆಪ ಹೇಳುತ್ತಲೇ ಬರುತ್ತಿದೆ. ಇಡೀ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿರುವ ಹಂಪಿ ಉತ್ಸವ ರಾಜ್ಯದ ಜನತೆಗೆ ಅದರಲ್ಲೂ ಉತ್ತರ ಕರ್ನಾಟಕದ ಜನತೆಗೆ ಭಾವನಾತ್ಮಕವಾದ ಬೆಸುಗೆಯನ್ನು ಬೆಸೆಯುವಂಥದ್ದಾಗಿದೆ.

ಇದು ವ್ಯವಸ್ಥಿತವಾಗಿ ಸರ್ಕಾರದಿಂದ ಮತ್ತು ಕೆಲ ಸಚಿವರಿಂದ ಬಳ್ಳಾರಿಗರನ್ನು ಅದರಲ್ಲೂ ಉತ್ತರ ಕರ್ನಾಟಕದ ಜನರನ್ನು ಕಡೆಗಣಿಸುವ ಪ್ರಯತ್ನವಾಗಿದೆ.

ನವೆಂಬರ್ 3 ರಂದು ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಅಕ್ರಮವಾಗಿ ಸಾಕಷ್ಟು ದುಡ್ಡು ಖರ್ಚು ಮಾಡಿರುವವರಿಗೆ ಮತ್ತು ಕೃತಜ್ಞತಾ ಸಮಾವೇಶ ನಡೆಸಿರುವವರಿಗೆ ಬರಗಾಲ ಕಾಣಿಸಲಿಲ್ಲವೇ?

ಬಿಜೆಪಿಯ ಹಿರಿಯ ನಾಯಕ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಕೃತಜ್ಞತಾ ಸಮಾವೇಶದ ಬದಲು ರೈತರಿಗೆ ನೆರವು ನೀಡಿ ಎಂದು ಬಿನ್ನವಿಸಿಕೊಂಡರೂ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೃತಜ್ಞತಾ ಸಮಾವೇಶ ನಡೆಸುವುದು ಅಗತ್ಯವಿತ್ತೇ?

ಉಪ ಚುನಾವಣೆಗೆ ನೀರಿನಂತೆ ಹಣ ಖರ್ಚು ಮಾಡಲು ಮತ್ತು ಕೃತಜ್ಞತಾ ಸಮಾವೇಶ ನಡೆಸುವಲ್ಲಿ ಆಸಕ್ತಿ ತೋರುವವರು ಹಂಪಿ ಉತ್ಸವ ಆಚರಣೆಗೆ ಅಸಡ್ಡೆ ತೋರುವುದೇಕೆ?

ಹಂಪಿ ಉತ್ಸವ ಕ್ಕೆ ತನ್ನದೇ ಆದ ಇತಿಹಾಸವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಅವರು ಹಂಪಿ ಉತ್ಸವವನ್ನು ಮೊಟ್ಟ ಮೊದಲ ಬಾರಿಗೆ 1988ರಲ್ಲಿ ಆಚರಿಸಲು ಅವಕಾಶ ನೀಡಿದ್ದರು.

ಇದಕ್ಕೂ ಮುನ್ನ ದಾಸಶ್ರೇಷ್ಠರೂ, ಮನುಕುಲದ ಸಾಮಾಜಿಕ ಚಿಕಿತ್ಸಕರೂ ಆದ ಕನಕ-ಪುರಂದರರ ಉತ್ಸವ ನಡೆಯುತ್ತಿತ್ತು. ಹಂಪಿ ಉತ್ಸವ ದ ವ್ಯಾಪ್ತಿಯನ್ನು ದೇಶದುದ್ದಕ್ಕೂ ಪಸರಿಸುವಂತೆ ಮಾಡಿದ ಕೀರ್ತಿ ಎಂ.ಪಿ.ಪ್ರಕಾಶ್ ಅವರಿಗೆ ಸಲ್ಲುತ್ತದೆ.

ಜನರ ಭಾವನೆಗಳನ್ನು ಪರಸ್ಪರ ಪ್ರೀತಿ, ಪ್ರೇಮ, ಸಾಮರಸ್ಯದೊಂದಿಗೆ ಸಮೀಕರಿಸುವ ಈ ಸಾಂಸ್ಕೃತಿಕ ಹಬ್ಬವನ್ನು ಕಡೆಗಣಿಸುವ ಮೂಲಕ ಸರ್ಕಾರ ಜನರ, ಕಲಾವಿದರ, ರೈತರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ.

ಸರ್ಕಾರದ ಈ ಕ್ರಮದಿಂದ ಬೇಸತ್ತಿರುವ ಮಠಾಧೀಶರೇ ಇಂದು ಬೀದಿಗೆ ಇಳಿದು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾದ ಹಂಪಿ ಉತ್ಸವ ಆಚರಿಸಲು ಭಿಕ್ಷೆ ಯಾಚಿಸುತ್ತಿದ್ದಾರೆ. ಮಾಗಳ ಗ್ರಾಮದ ಶ್ರೀ ಮಳೆಯೋಗೀಶ್ವರ ಸ್ವಾಮಿಗಳು ಭಿಕ್ಷೆ ಬೇಡುವ ಮೂಲಕ ಕಲಾವಿದರ ಬೆನ್ನಿಗೆ ನಿಂತಿದ್ದಾರೆ. ಹಂಪಿ ಉತ್ಸವ ಆಚರಿಸಲು ಸ್ವಾಮೀಜಿಗಳು ಭಿಕ್ಷೆ ಬೇಡುತ್ತಿದ್ದಾರೆಂದರೆ ಏನು ಅರ್ಥ?

ಸರ್ಕಾರ ನಡೆಸುವವರು ಇಲ್ಲಿನ ಜನರನ್ನು, ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಗತಕಾಲದ ಇತಿಹಾಸವನ್ನು ಕಡೆಗಣಿಸುತ್ತಿದ್ದಾರೆಂದೇ ಅರ್ಥವಲ್ಲವೇ?

ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಂಪಿ ಉತ್ಸವವನ್ನು ಇಡೀ ಜಗತ್ತೇ ಕರ್ನಾಟಕದ ಕಡೆಗೆ ತಿರುಗಿ ನೋಡುವಂತೆ ಉತ್ಸವ ಆಚರಿದ್ದೆವು. ನಾನಾಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದೆ. ತದನಂತರ ಉತ್ಸವ ಅದ್ದೂರಿಯಾಗಿ ನಡೆಯಲೇ ಇಲ್ಲ.

ಈಗ ಬರಗಾಲದ ನೆಪ ಹೇಳಿ ಉತ್ಸವ ರದ್ದುಗೊಳಿಸುವುದು ಸರಿಯೇ? ಎಂ.ಪಿ.ಪ್ರಕಾಶರು 3 ದಿನ ನಡೆಸಿದ್ದ ಹಂಪಿ ಉತ್ಸವವನ್ನು ಎರಡು ದಿನ ಆಚರಿಸುವುದು ಸರಿಯೇ? ಕಾಟಾಚಾರಕ್ಕೆ ಹಂಪಿ ಉತ್ಸವ ನಡೆಸದೇ ಅದ್ದೂರಿಯಾಗಿ ಉತ್ಸವ ನಡೆಸಲಿ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನಾನು ನೀಡುತ್ತೇನೆ.

ಹಂಪಿ ಉತ್ಸವ ನಮ್ಮ ಹೆಮ್ಮೆಯ ಹಬ್ಬ. ಈ ಉತ್ಸವ ಜನರಲ್ಲಿ ಪ್ರೀತಿ, ಬಾಂಧವ್ಯ, ಉಲ್ಲಾಸಗಳ ಜೊತೆ ಸಾಮರಸ್ಯಗಳನ್ನು ಹೆಚ್ಚಿಸುತ್ತಿದೆ. ಅಷ್ಟೇ ಅಲ್ಲ ಗತವೈಭವದ ಮೆರಗು, ನೆನಪು, ಸ್ಮರಣೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಒಂದು ಪ್ರತೀಕವಾಗಿದೆ. ಹಂಪಿ ಉತ್ಸವ ಯಾವುದೇ ಕಾರಣಕ್ಕೂ ಕಾಟಾಚಾರಕ್ಕೆ ನಡೆಯಬಾರದು. 3 ದಿನವೂ ಅದ್ದೂರಿಯಾಗಿಯೇ ನಡೆಯಬೇಕು.

ಬಳ್ಳಾರಿಗೆ ನಾನು ಬರಲು ಸಾಧ್ಯವಾಗದೇ ಇರುವುದರಿಂದ ನನ್ನ ಸಹಪಾಠಿಗಳ ಜಿಲ್ಲೆಯ ಜನತೆಯ ಕಲಾರಾಧನೆಯ ಉತ್ಸವಕ್ಕೆ ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯ ನೆರವು ಮತ್ತು ಸಹಕಾರ ನೀಡಲು ಬದ್ಧನಾಗಿದ್ದೇನೆ.

ಬಳ್ಳಾರಿ ಜಿಲ್ಲೆಯ ಜನರೂ ಸೇರಿದಂತೆ ನೆರೆಯ ವಿವಿಧ ಜಿಲ್ಲೆಗಳ ಜನರು ವರ್ಷದಿಂದ ವರ್ಷಕ್ಕೆ ಕಣ್ಣಲ್ಲಿ ಕಣ್ಣಿಟ್ಟು ಹಂಪಿ ಉತ್ಸವ ಸಡಗರಕ್ಕೆ ಕಾದು ಕುಳಿತಿರುತ್ತಾರೆ. ಅವರಿಗೆಲ್ಲ ನಿರಾಶೆಯಾಗಬಾರದು. ಒಟ್ಟಿನಲ್ಲಿ, ಹಂಪಿ ಉತ್ಸವ 3 ದಿನಗಳ ಕಾಲ ಸಡಗರ, ಸಂಭ್ರಮಗಳಿಂದ ಜರುಗಬೇಕೆನ್ನುವುದೇ ನನ್ನ ಇಚ್ಛೆಯಾಗಿದೆ.

ಇಂತಿ ನಿಮ್ಮ ಪ್ರೀತಿಯ 
ಜಿ.ಜನಾರ್ಧನ ರೆಡ್ಡಿ

Latest Videos
Follow Us:
Download App:
  • android
  • ios