ಹೈದರಾಬಾದ್‌ [ಆ.28]: ಅಕ್ರಮ ಗಣಿಗಾರಿಕೆ ಸಂಬಂಧ ಬಂಧನಕ್ಕೊಳಗಾಗಿದ್ದ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ 40 ಕೋಟಿ ರು. ನೀಡುವುದಾಗಿ ತಮಗೆ ಆಮಿಷ ಬಂದಿತ್ತು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದು ಈಗ ನಿವೃತ್ತರಾಗಿರುವ ಬಿ. ನಾಗಮಾರುತಿ ಶರ್ಮಾ ಅವರು ರೆಡ್ಡಿ ಎದುರೇ ಸಾಕ್ಷ್ಯ ನುಡಿದಿದ್ದಾರೆ.

ಜಾಮೀನಿಗಾಗಿ ಲಂಚ (ಬೇಲ್‌ ಡೀಲ್‌) ಹಗರಣದ ಸಂಬಂಧ ಹೈದರಾಬಾದ್‌ನ ಎಸಿಬಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ ಅವರು, ಆಂಧ್ರಪ್ರದೇಶ ಹೈಕೋರ್ಟ್‌ನ ರಿಜಿಸ್ಟ್ರಾರ್‌ (ವಿಚಾರಣೆ) ಕೆ.ಲಕ್ಷ್ಮೇ ನರಸಿಂಹ ರಾವ್‌ ಅವರೇ ಗಾಲಿ ಜನಾರ್ದನ ರೆಡ್ಡಿ ವ್ಯಕ್ತಿಗಳ ಪರವಾಗಿ 2012ರಲ್ಲಿ ಆಮಿಷವೊಡ್ಡಿದ್ದರು. ಅದನ್ನು ತಿರಸ್ಕರಿಸಿ, ಅವರ ಮನೆಯಿಂದ ಹೊರ ನಡೆದಿದ್ದೆ ಎಂದು ಸಾಕ್ಷ್ಯ ನುಡಿದಿದ್ದಾರೆ.

ಶರ್ಮಾ ಅವರ ನಿವೃತ್ತಿ ನಂತರ ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಟಿ. ಪಟ್ಟಾಭಿ ರಾಮರಾವ್‌ ಅವರು ಜಾಮೀನು ನೀಡಿ ಜನಾರ್ದನ ರೆಡ್ಡಿ ಕಡೆಯವರಿಂದ ಲಂಚ ಪಡೆಯುವಾಗಲೇ ಸಿಕ್ಕಿಬಿದ್ದು, ಜೈಲು ಸೇರಿದ್ದರು.

ಆಗಿದ್ದೇನು?: 2011ರ ಸೆ.5ರಂದು ಅಕ್ರಮ ಗಣಿಗಾರಿಕೆ ಸಂಬಂಧ ಜನಾರ್ದನ ರೆಡ್ಡಿ ಅವರನ್ನು ಬಳ್ಳಾರಿಯ ಅವರ ನಿವಾಸದಿಂದ ಬಂಧಿಸಿ ಹೈದರಾಬಾದ್‌ಗೆ ಸಿಬಿಐ ಅಧಿಕಾರಿಗಳು ಕರೆದೊಯ್ದಿದ್ದರು. ಅವರ ಜಾಮೀನು ಅರ್ಜಿಯನ್ನು ಬಿ. ನಾಗಮಾರುತಿ ಶರ್ಮಾ ಅವರಿದ್ದ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಆಗ ಲಂಚದ ಆಮಿಷ ಬಂದಿತ್ತು ಎಂಬುದು ನಿವೃತ್ತ ಜಡ್ಜ್‌ ಆರೋಪ.

‘2012ರ ಏಪ್ರಿಲ್‌ ಮೂರನೇ ವಾರ ಹೈಕೋರ್ಟ್‌ ರಿಜಿಸ್ಟ್ರಾರ್‌ ಲಕ್ಷ್ಮೇ ನರಸಿಂಹ ರಾವ್‌ ಅವರು ದೂರವಾಣಿ ಕರೆ ಮಾಡಿ, ಮನೆಗೆ ಬರುವುದಾಗಿ ಹೇಳಿದರು. ಅವರು ನನಗಿಂತ ಹಿರಿಯರು. ಉನ್ನತ ಹುದ್ದೆಯಲ್ಲಿದ್ದರು. ಹೀಗಾಗಿ ನಾನೇ ಮನೆಗೆ ಬರುತ್ತೇನೆ ಎಂದು ಹೇಳಿ ವಿಳಾಸ ಪಡೆದೆ. 2012ರ ಏ.18ರಂದು ಲಕ್ಷ್ಮೇ ನರಸಿಂಹರಾವ್‌ ಅವರ ಮನೆಗೆ ತೆರಳಿದೆ. ಉಭಯ ಕುಶಲೋಪರಿ ಬಳಿಕ ನರಸಿಂಹರಾವ್‌ ಅವರು ಜನಾರ್ದನ ರೆಡ್ಡಿ ಜಾಮೀನು ಕುರಿತ ಪ್ರಸ್ತಾವ ತಿಳಿಸಿದರು. ಅದನ್ನು ತಕ್ಷಣವೇ ನಾನು ತಿರಸ್ಕರಿಸಿದೆ. ಕಾನೂನಿನ ಹಾದಿಯಿಂದ ವಿಮುಖವಾಗುವುದು ನನ್ನ ಪಾಲಿಗೆ ಸಾವಿಗೆ ಸಮ ಎಂದು ಹೇಳಿದೆ. ಆ ಹಂತದಲ್ಲಿ ನರಸಿಂಹರಾವ್‌ ಅವರು, ಗಾಲಿ ಕಡೆಯ ವ್ಯಕ್ತಿಗಳು 40 ಕೋಟಿ ರು. ಭರಿಸಲು ಸಿದ್ಧರಿದ್ದಾರೆ ಎಂದು ಹೇಳಿದರು. ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿ, ನರಸಿಂಹರಾವ್‌ ಅವರ ಮನೆಯಿಂದ ಹೊರನಡೆದೆ’ ಎಂದು ಶರ್ಮಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ನ್ಯಾಯಾಲಯದಲ್ಲೇ ಕುಳಿತಿದ್ದರು.

ಶರ್ಮಾ ನಿವೃತ್ತರಾದ ಬಳಿಕ ಆ ಹುದ್ದೆಗೆ ಬಂದ ಪಟ್ಟಾಭಿ ಅವರು ಜನಾರ್ದನ ರೆಡ್ಡಿಗೆ ಜಾಮೀನು ನೀಡಿದ್ದರು. ಅದಕ್ಕೆ ಪ್ರತಿಯಾಗಿ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಹಾಗೂ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. 2012ರ ಜುಲೈನಲ್ಲಿ ನರಸಿಂಹರಾವ್‌ ಅವರನ್ನೂ ಬಂಧಿಸಲಾಗಿತ್ತು. ಇದೀಗ ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ.