ಬೆಂಗಳೂರು :  ಪಕ್ಷದ ಒಳಗೆ-ಹೊರಗೆ ಅಪವಾದ ಕೇಳಿ ಸಾಕಾಗಿದ್ದ ಕಾರಣ ರಾಜಕೀಯದಿಂದಲೇ ಹೊರಹೋಗಬೇಕು ಎಂದುಕೊಂಡಿದ್ದೆ. ಆದರೆ, ಪಕ್ಷದ ವರಿಷ್ಠರು, ಹಿತೈಷಿಗಳು ಅಪವಾದಗಳಿಗೆ ಹೆದರದೆ ಮುನ್ನುಗ್ಗಿ ಎಂದು ಹುರಿದುಂಬಿಸಿದರು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವುದಿಲ್ಲ, ನನಗೆ ಸಾಕಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಘ ಪರಿವಾರದ ಪ್ರಮುಖರು ಮತ್ತು ರಾಷ್ಟ್ರೀಯ ವರಿಷ್ಠರಿಗೆ ತಿಳಿಸಿದ್ದೆ. ಆದರೆ, ಪಕ್ಷದ ಪ್ರಮುಖರು ಸ್ಪರ್ಧಿಸಬೇಕು ಎಂದು ಆದೇಶ ಮಾಡಿ ಟಿಕೆಟ್‌ ನೀಡಿದರು. ರಾಜಕೀಯದಿಂದಲೇ ಹೊರಹೋಗಬೇಕು ಎಂದು ರಾಷ್ಟ್ರೀಯ ಸೇವಿಕಾ ಸಮಿತಿಯಲ್ಲಿದ್ದಾಗಲೇ ಭಾವಿಸಿದ್ದೆ. ಇದರಿಂದಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ ಗೋ ಬ್ಯಾಕ್‌ ಶೋಭಾ ಎಂಬ ಅಭಿಯಾನ ಪ್ರಾರಂಭವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಪುರುಷ ಪ್ರಧಾನ ರಾಜಕೀಯ ಕ್ಷೇತ್ರ ಮಹಿಳೆಗೆ ಸುಲಭವಲ್ಲ. ಆದರೂ ನಮ್ಮ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್‌ ಟು ಪಾರ್ಲಿಮೆಂಟ್‌ ಎಂದು ಕಳುಹಿಸಿಕೊಟ್ಟಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಶಾಂತಕ್ಕ ಅವರು ಧೈರ್ಯ ತುಂಬಿ ದೇವರಿಗೆ ಮಾತ್ರ ಹೆದರಬೇಕು. ಬೇರಾವುದಕ್ಕೂ ಭಯ ಪಡಬೇಕಾದ ಅಗತ್ಯ ಇಲ್ಲ ಎಂದು ಹುರಿದುಂಬಿಸಿದರು. ನಾನು ಸಹ ದೇವರ ಸಾಕ್ಷಿಗೆ, ಆತ್ಮ ಪ್ರಜ್ಞೆಗೆ ಮಾತ್ರ ಮನಸ್ಸು ಕೊಟ್ಟು ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಮುಂದುವರಿದಿದ್ದೇನೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಯಸಿ ಪಡೆದಿದ್ದಲ್ಲ. ನನ್ನ ಅಲ್ಲಿಗೆ ಕಳುಹಿಸಲಾಯಿತು. ಕ್ಷೇತ್ರದ ಜನರು ನನಗೆ ಪ್ರೀತಿ ತೋರಿಸಿದರು. ಅವರಿಗೆ ನಾನು ಆಭಾರಿ ಎಂದು ಕೃತಜ್ಞತೆ ಸಲ್ಲಿಸಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಸೋಲು ಅನುಭವಿಸಿದಾಗ ಅನ್ಯ ಪಕ್ಷದವರು ಟೀಕೆ ಮಾಡಿದ್ದರು. ನೀವು ನಿಧನ ಹೊಂದಿದರೆ ಹೊರಲು ನಾಲ್ಕು ಸಂಸದರು ನಿಮ್ಮ ಬಳಿ ಇಲ್ಲ ಎಂದು ಆಡಿಕೊಂಡಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ಏನಾಗಿದೆ? ಕಾಂಗ್ರೆಸ್‌ ಗೆದ್ದ ಸಂಸದರ ಸಂಖ್ಯೆ ಎಷ್ಟುಎಂದು ಎಲ್ಲರಿಗೂ ಗೊತ್ತಿದೆ. ಅಂದು ವಾಜಪೇಯಿಗೆ ಒಂದು ಬೆರಳು ತೋರಿಸಿದವರಿಗೆ ಉಳಿದ ನಾಲ್ಕು ಬೆರಳು ಉತ್ತರ ನೀಡಿವೆ. ವಿಧಾನಸಭಾ ಚುನಾವಣೆ ಈಗ ಬಂದರೂ ಬಿಜೆಪಿ 178 ಸ್ಥಾನಗಳನ್ನು ಗೆಲ್ಲಬಹುದು. ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಂದು ಸ್ಕೂಟರ್‌ನಲ್ಲಿ ಕೂತು ಸಂಸತ್‌ಗೆ ಹೋಗಬಹುದು ಎಂದು ಲೇವಡಿ ಮಾಡಿದರು.

ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿಮಾತನಾಡಿ, ರಾಜ್ಯದಲ್ಲಿ ಒಬ್ಬ ಮಹಿಳೆಗೆ ಮಾತ್ರ ಟಿಕೆಟ್‌ ನೀಡಲಾಗಿದ್ದು, ಅವರನ್ನು ಲಕ್ಷಾಂತರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೇವೆ. ನಮ್ಮ ರಾಜ್ಯದ ಹೆಮ್ಮೆಯ ಪುತ್ರಿ ಶೋಭಾ ಕರಂದ್ಲಾಜೆ ಅವರನ್ನು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವೆಯಾಗಿ ನೋಡಲು ಬಯಸುತ್ತೇವೆ ಎಂದರು.